ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ

ಗದಗ, ಮಾ.26: ಸ್ಥಳೀಯ ಸಂಸ್ಥೆಗಳು ಬೇಸಿಗೆಯಲ್ಲಿ ನೀರು ನಿರ್ವಹಣೆಯನ್ನು ಸಮರ್ಪಕವಾಗಿ ಮಾಡುವದರೊಂದಿಗೆ ಈಗಾಗಲೇ ಕೈಗೊಂಡಿರುವ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತ ಭವನದಲ್ಲಿ ಜರುಗಿದ ನಗರಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರದಿಂದ ಬಿಡುಗಡೆಗೊಳಿಸಿದ ಎಸ್.ಎಫ್.ಸಿ, 14ನೇ ಹಣಕಾಸು ಮತ್ತು 15ನೇ ಹಣಕಾಸು ಇತರೇ ಅನುದಾನಗಳ ಮಂಜೂರಾದ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗಡೆ ಪೂರ್ಣಗೊಳಿಸಲು ಸೂಚನೆ ನೀಡಿದರು.
ಜಿಲ್ಲೆಯ ನಗರಸ್ಥಳೀಯ ಸಂಸ್ಥೆಗಳ ನಗರ ಪ್ರದೇಶಗಳಲ್ಲಿ ನೀರು ಸಮರ್ಪಕವಾಗಿ ಪೂರೈಕೆಯಾಗುವಷ್ಟು ಲಭ್ಯವಿದ್ದು ನೀರು ಪೂರೈಸಲು ಸಿಬ್ಬಂದಿಗಳ ನಿರ್ಲಕ್ಷ ಹಾಗೂ ಅವೈಜ್ಞಾನಿಕವಾಗಿ ನೀರು ಪೂರೈಕೆಯಿಂದಾಗಿ ಸಾರ್ವಜನಿಕರಿಂದ ದಿನನಿತ್ಯ ದೂರುಗಳು ಸ್ವೀಕೃತವಾಗುತ್ತಿದ್ದು, ಬೇಸಿಗೆ ಅವಧಿಯಲ್ಲಿ ಈ ರೀತಿ ನಿರ್ಲಕ್ಷದಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿರುತ್ತದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕೆಲವು ಸ್ಥಳೀಯ ಸಂಸ್ಥೆಗಳು ಬೋರವೆಲ್ ನೀರಿನ ಅವಲಂಬಿತವಾಗಿದ್ದು ಬೇಸಿಗೆ ಅವಧಿಯಲ್ಲಿ ಬೋರವೆಲ್ ನೀರಿನ ಮಟ್ಟ ಕಡಿಮೆಯಾಗುವ ಸಂಭವವಿದ್ದು ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳು ಕೂಡಲೇ ಖಾಸಗಿ ಬೋರವೆಲ್ ಗಳನ್ನು ಗುರುತಿಸಿಕೊಳ್ಳಲು ಸೂಚಿಸಿದರು. ನೀರು ಸರಬರಾಜು,ಸ್ವಚ್ಚತೆ, ಹಾಗೂ ಬೀದಿ ದೀಪಗಳ ನಿರ್ವಹಣೆ, ಸಾರ್ವಜನಿಕ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಿ ರಸ್ತೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಕ್ರಮಗಳ ದಿನನಿತ್ಯದ ಸೌಕರ್ಯವನ್ನು ಕಲ್ಪಿಸುವಲ್ಲಿ ಯಾವುದೇ ತೊಂದರೆ ಉಂಟಾಗದಂತೆ ಸಾರ್ವಜನಿಕ ಅಹವಾಲುಗಳನ್ನು ನಿಗದಿತ ಸಮಯದೊಳಗಡೆ ಪರಿಹಾರ ರೂಪದಲ್ಲಿ ಕ್ರಮವಹಿಸಲು ಸೂಚಿಸಿದರು.
ಸರ್ವೆ, ಮರಣ ನೋಂದಣಿಗಳಿಗೆ ಆಧಾರ ಜೋಡಣೆ ಕಾರ್ಯ, ಪಿ.ಎಂ. ಸ್ವನಿಧಿ ಸಾಲ ಮಂಜೂರಾತಿ ಪ್ರಗತಿ ಪರಿಶೀಲನೆ ಮಾಡಿ ಕೂಡಲೇ ನಿಗದಿಪಡಿಸಿದ ಗುರಿಯಂತೆ ಕಾರ್ಯನಿರ್ವಹಿಸಲು ಸೂಚಿಸಿದರು. ಸ್ಥಳೀಯ ಸಂಸ್ಥೆವಾರು ಲಭ್ಯವಿರುವ ಜೆ.ಸಿ.ಬಿ ಯಂತ್ರಗಳ ಬಳಕೆ ಮಾಡಿ ಮುಖ್ಯ ನಾಲಾ ಸ್ವಚ್ಚತೆಗೊಳಿಸಿ ಮಳೆಗಾಲದ ಅವಧಿಯಲ್ಲಿ ಪ್ರವಾಹ ಮತ್ತು ಇತರೇ ತೊಂದರೆ ಉಂಟು ಮಾಡದಂತೆ ಬೇಸಿಗೆ ಅವಧಿಯಲ್ಲಿ ಮುಳ್ಳುಕಂಟೆ ಹಾಗೂ ಹೂಲು ತುಂಬಿರುವುದನ್ನು ತೆರವುಗೊಳಿಸಲು ನಿರ್ದೇಶನ ನೀಡಿದರು
ಜಿಲ್ಲಾ ನಗರಾಭಿವೃದ್ಧಿ ಕೋಶ ಪ್ರಭಾರ ಯೋಜನಾ ನಿರ್ದೇಶಕರಾದ ಅನಿಲಕುಮಾರ ಮುದ್ದಾ ಮಾತನಾಡಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗಳಲ್ಲಿ ಆಶ್ರಯ ಯೋಜನೆಯಡಿ ಈಗಾಗಲೇ ಜಮೀನುಗಳನ್ನು ಗುರುತಿಸಲಾಗಿದ್ದು, ಈವರೆಗೂ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿರುವುದಿಲ್ಲಾ. ಈಗ 8 ಸ್ಥಳೀಯ ಸಂಸ್ಥೆಗಳಲ್ಲಿ ಪ್ರತಿನಿಧಿಗಳು ಆಡಳಿತ ಮಂಡಳಿ ರಚನೆಯಾಗಿದ್ದು ಅವರ ಸಹಯೋಗದೊಂದಿಗೆ ಕೂಡಲೇ ಅರ್ಹ ಫಲಾನುಭವಿಗಳನ್ನು ಗುರುತಿಸಿ ವಸತಿ ಸಮಿತಿಯಲ್ಲಿ ಅನುಮೋದಿಸಿ ನಿಯಮಾನುಸಾರ ಹಕ್ಕು ಪತ್ರ ವಿತರಣೆ ಕಾರ್ಯಕ್ಕೆ ವಿಶೇಷ ಆಸಕ್ತಿ ವಹಿಸಿ ಜಿಲ್ಲೆಯ ಗುರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಎಲ್ಲಾ ಮುಖ್ಯಸ್ಥರು ಕ್ರಮ ವಹಿಸಲು ಸೂಚನೆ ನೀಡಿದರು.
ಸಭೆಯಲ್ಲಿ ಹಾಗೂ ಪೌರಾಯುಕ್ತರು ಗದಗ-ಬೆಟಗೇರಿ ನಗರಸಭೆ ಶ್ರೀ ರಮೇಶ ಜಾಧವ ಇವರು ಭಾಗವಹಿಸಿದರು. ಹಾಗೂ ಎಲ್ಲಾ ನಗರಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಸಭೆಯಲ್ಲಿ ಹಾಜರರಿದ್ದರು.