ನಿಂಬರ್ಗಾ ಜಿಲ್ಲಾ ಪಂಚಾಯಿತಿ ಕ್ಷೇತ್ರ ರದ್ದು ವಿರೋಧಿಸಿ ಪ್ರತಿಭಟನೆ

ಕಲಬುರಗಿ,ಏ.03:ಜಿಲ್ಲೆಯ ಆಳಂದ್ ವಿಧಾನಸಭಾ ಮತಕ್ಷೇತ್ರದ ನಿಂಬಾಳ್ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ಕೈಬಿಡಲಾಗಿದೆ ಎಂದು ವಿರೋಧಿಸಿ ನಿಂಬರ್ಗಾ ಗ್ರಾಮಸ್ಥರು ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.

ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಚುನಾವಣಾ ಆಯೋಗದ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿ, ಕಳೆದ ಮಾರ್ಚ್ 31ರಂದು ಕರ್ನಾಟಕ ಗ್ರಾಮ ಸ್ವರಾಜ್ಯ ಮತ್ತು ಪಂಚಾಯಿತಿರಾಜ್ ಅಧಿನಿಯಮ 1993ರ 163ನೇ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ರಾಜ್ಯ ಚುನಾವಣಾ ಆಯೋಗವು ಕಲಬುರ್ಗಿ ಜಿಲ್ಲಾ ಪಂಚಾಯಿತಿಯ ಅಧಿಕಾರ ವ್ಯಾಪ್ತಿಯನ್ನೊಳಗೊಂಡ ಪ್ರದೇಶವನ್ನು 55 ಏಕ ಸದಸ್ಯ ಜಿಲ್ಲಾ ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಲಾಗಿದೆ. ಆದಾಗ್ಯೂ, ನಿಂಬರ್ಗಾ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ಕೈಬಿಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಿಂಬರ್ಗಾ ಗ್ರಾಮವು ಸುಮಾರು 20,000 ಜನಸಂಖ್ಯೆ ಹೊಂದಿದೆ. ನಿಂಬರ್ಗಾ ಗ್ರಾಮ ಪಂಚಾಯಿತಿ 24 ಸದಸ್ಯರನ್ನು ಒಳಗೊಂಡಿದೆ. 9253 ಮತದಾರರು ಇದ್ದಾರೆ. ಗ್ರಾಮದಲ್ಲಿ ಉಪ ತಹಸಿಲ್ದಾರ್ (ನಾಡಕಚೇರಿ), ನೆಮ್ಮದಿ ಕೇಂದ್ರ, ಪೋಲಿಸ್ ಠಾಣೆ, ಪದವಿ ಪೂರ್ವ ಕಾಲೇಜು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಅಮರ್ಜಾ ನೀರಾವರಿ ಕಚೇರಿ, ರೈತ ಸಂಪರ್ಕ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಮೊದಲಿನಿಂದಲೂ ಇದ್ದು, ಇದೊಂದು ಹೋಬಳಿ ಕೇಂದ್ರವಾಗಿದೆ. ಸುಮಾರು 30 ಗ್ರಾಮಗಳ ಕೇಂದ್ರ ಬಿಂದುವಾಗಿದೆ. ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸಮೀಕ್ಷೆಯು ಅವೈಜ್ಞಾನಿಕವಾಗಿದ್ದು, ನಿಂಬರ್ಗಾ ಜಿಲ್ಲಾ ಪಂಚಾಯಿತಿ ಕ್ಷೇತ್ರ ಕೈಬಿಡಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
2011ರ ಜನಗಣತಿ ಪ್ರಕಾರ ಮೊದಲಿನಂತೆ ನಿಂಬರ್ಗಾ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ಉಳಿಸಿಕೊಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ರೂಪಿಸಲಾಗುತ್ತದೆ. ಮುಂಬರುವ ಚುನಾವಣೆಗಳನ್ನು ಬಹಿಷ್ಕರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಶ್ರೀಮಂತ್ ಉದಗಿರ್, ಬಸವರಾಜ್ ಉದಗಿರ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾಯಿಬಣ್ಣ, ಈರಣ್ಣ. ಲಕ್ಷ್ಮಣ್, ಮಲ್ಲಿನಾಥ್, ಪರಮೇಶ್ವರ್, ಅಮೃತ್, ವಿಠಲ್, ಸಿದ್ದಪ್ಪ, ರಮೇಶ್ ಚವ್ಹಾಣ್ ಮುಂತಾದವರು ಪಾಲ್ಗೊಂಡಿದ್ದರು.