ನಿಂತಿದ್ದ ರೈಲು ಬೆಂಕಿಗೆ ಆಹುತಿ

ಉಜ್ಜಯಿನಿ(ಮಧ್ಯಪ್ರದೇಶ),ನ೨೧: ನಗರದ ರೈಲ್ವೇ ನಿಲ್ದಾಣದ ಪ್ಲಾಟ್‌ಫಾರ್ಮ್ ೮ರಲ್ಲಿ ನಿಂತಿದ್ದ ರತ್ಲಾಮ್-ಇಂದೋರ್-ಬಿನಾ ಪ್ಯಾಸೆಂಜರ್ ರೈಲಿನ ಬೋಗಿಗೆ ಹಠಾತ್ ಬೆಂಕಿ ಹೊತ್ತಿಕೊಂಡಿದ್ದು ಒಂದು ಬೋಗಿ ಸಂಪೂರ್ಣ ಸುಟ್ಟು ಭಸ್ಮವಾಯಿತು.
ಈ ಘಟನೆ ಭಾನುವಾರ ರಾತ್ರಿ ನಡೆದಿದೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಜತೆಗೆ, ಬೇರೆ ಬೋಗಿಗಳಿಗೆ ಬೆಂಕಿ ಹರಡುವುದನ್ನು ತಪ್ಪಿಸಿದ್ದಾರೆ.ನಿಲ್ದಾಣದಲ್ಲಿ ನಿಂತಿದ್ದ ಪ್ಯಾಸೆಂಜರ್ ರೈಲಿನಲ್ಲಿ ಬೆಂಕಿ. ಈ ಪ್ಯಾಸೆಂಜರ್ ರೈಲು ಜಿಲ್ಲೆಯ ನಗ್ಡಾ ನಿಲ್ದಾಣದಿಂದ ಉಜ್ಜಯಿನಿ ನಿಲ್ದಾಣಕ್ಕೆ ಬಂದು ಫ್ಲ್ಯಾಟ್‌ಪಾರ್ಮ್ ೫ರಲ್ಲಿ ನಿಂತಿತ್ತು. ಸ್ವಲ್ಪ ಸಮಯದ ನಂತರ ಫ್ಲ್ಯಾಟ್‌ಫಾರ್ಮ್ ೮ಕ್ಕೆ ತೆರಳಿದೆ. ರೈಲು ಬೆಳಗ್ಗೆ ೮ ಗಂಟೆಗೆ ಉಜ್ಜಯಿನಿಯಿಂದ ಇಂದೋರ್‌ಗೆ ಹೊರಡಬೇಕಿತ್ತು. ಅದೃಷ್ಟವಶಾತ್ ಬೆಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ ಪ್ರಯಾಣಿಕರು ಇರಲಿಲ್ಲ ಎಂದು ರೈಲ್ವೇ ಠಾಣೆಯ ಜಿಆರ್‌ಪಿ ಉಸ್ತುವಾರಿ ಆರ್‌ಎಸ್ ಮಹಾಜನ್ ತಿಳಿಸಿದರು.
ಸಾಮಾನ್ಯವಾಗಿ ಬೆಳಗ್ಗೆ ಹೊರಡುವ ರೈಲುಗಳನ್ನು ಫ್ಲ್ಯಾಟ್‌ಫಾರ್ಮ್ ೭, ೮ ರಲ್ಲಿ ನಿಲ್ಲಿಸಲಾಗುತ್ತದೆ. ಒಂದು ವೇಳೆ ಹೆಚ್ಚು ಜನರಿರುವ ಫ್ಲ್ಯಾಟ್‌ಫಾರ್ಮ್ ೧, ೨ ಮತ್ತು ೩ರಲ್ಲಿ ಈ ಅಪಘಾತ ಸಂಭವಿಸುತ್ತಿದ್ದರೆ ಬಹಳ ಪ್ರಾಣಹಾನಿಯಾಗುತ್ತಿತ್ತು. ಅಗ್ನಿ ಅನಾಹುತಕ್ಕೆ ನಿರ್ದಿಷ್ಟ ಕಾರಣ ಗೊತ್ತಾಗಿಲ್ಲ. ಶಾರ್ಟ್ ಸರ್ಕ್ಯೂಟ್‌ನಿಂದ ಅವಘಡ ಕಾಣಿಸಿಕೊಂಡಿರುವ ಸಾಧ್ಯತೆ ಇದೆ.
ಒಂದು ವೇಳೆ ಇದರಲ್ಲಿ ಸಮಾಜಘಾತುಕರ ಕೈವಾಡವಿರಬಹುದೇ ಎಂಬುದನ್ನು ಕಂಡುಹಿಡಿಯಲು ಸಿಸಿಟಿವಿ ದೃಶ್ಯ ಪರಿಶೀಲಿಸಲಾಗುವುದು ಎಂದು ಅವರು ಹೇಳಿದರು.ಇದನ್ನೂ ಓದಿ: ಶಾಲಿಮಾರ್ ಎಕ್ಸ್‌ಪ್ರೆಸ್ ಲಗೇಜ್ ಬೋಗಿಗೆ ಬೆಂಕಿ: ಪ್ರಯಾಣಿಕರು ಪಾರು.