ನಿಂತಿದ್ದ ಬಸ್‌ಗೆ ಟಿಟಿ ವಾಹನ ಡಿಕ್ಕಿ: ಇಬ್ಬರು ಸಾವು

ಕುಣಿಗಲ್, ಮೇ ೨೫- ನಿಂತಿದ್ದ ಬಸ್‌ಗೆ ಟೆಂಪೋ ಟ್ರಾವಲ್ಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು, ನಾಲ್ವರು ಗಾಯಗೊಂಡಿರುವ ಘಟನೆ ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿ ಡಿ.ಹೊಸಹಳ್ಳಿ ಗ್ರಾಮದ ಸಮೀಪ ರಾಜ್ಯ ಹೆದ್ದಾರಿ-೩೩ ರಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಮೃತಪಟ್ಟವರನ್ನು ರಾಯಚೂರು ಜಿಲ್ಲೆಯ ಸಿಂಧನೂರು ನಿವಾಸಿ ಟಿಟಿ ಚಾಲಕ ವೀರೇಶ್ (೩೦) ಹಾಗೂ ಶಶಿಕಲಾ (೬೯) ಎಂದು ಗುರುತಿಸಲಾಗಿದೆ. ದಿಲೀಪ್‌ಕುಮಾರ್, ಆನಂದ್‌ಕುಮಾರ್, ಪ್ರಿಯಾ, ಪ್ರತೀಕ್ಷಾ ಎಂಬುವರು ಗಾಯಗೊಂಡಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಆದಿಚುಂಚನಗಿರಿ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಲಾಗಿದೆ.
ಶಶಿಕಲಾ ಮತ್ತವರ ಕುಟುಂಬದ ೧೧ ಮಂದಿ ಸಿಂಧನೂರಿನಿಂದ ಮೈಸೂರು ಜಿಲ್ಲೆಗೆ ಪ್ರವಾಸಕ್ಕೆಂದು ರಾತ್ರಿ ೧೦ ಗಂಟೆಗೆ ಹೊರಟಿದ್ದು, ಕುಣಿಗಲ್ ಮಾರ್ಗವಾಗಿ ಮೈಸೂರಿಗೆ ತೆರಳುತ್ತಿದ್ದಾಗ ಮಾರ್ಗಮಧ್ಯೆ ಡಿ.ಹೊಸಹಳ್ಳಿ ಗ್ರಾಮದ ಬಳಿ ನಿಂತಿದ್ದ ಖಾಸಗಿ ಬಸ್‌ಗೆ ಟೆಂಪೋ ಟ್ರಾವಲರ್ ಅಪ್ಪಳಿಸಿದೆ. ಈ ಪರಿಣಾಮ ಚಾಲಕ ವೀರೇಶ್ ಸ್ಥಳದಲ್ಲೇ ಮೃತಪಟ್ಟರೆ, ತೀವ್ರವಾಗಿ ಗಾಯಗೊಂಡಿದ್ದ ಶಶಿಕಲಾ ಅವರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅಸುನೀಗಿದ್ದಾರೆ. ಉಳಿದಂತೆ ಗಾಯಗೊಂಡಿರುವ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಟಿಟಿ ವಾಹನ ಬಸ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಬಸ್ ಹಾಗೂ ಟಿಟಿ ವಾಹನಗಳ ಮುಂಭಾಗ ಸಂಪೂರ್ಣ ಜಖಂಗೊಂಡಿವೆ.
ಘಟನೆಯ ಸುದ್ದಿ ತಿಳಿದ ಕೂಡಲೇ ಹುಲಿಯೂರುದುರ್ಗ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.