
ಬೆಂಗಳೂರು,ಏ.5- ಕಸ ಹಾಕುವ ಜಾಗದ ಬದಿ ನಿಂತಿದ್ದ ಪೋರ್ಡ್ ಕಾರಿನೊಳಗೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಅಪರಿಚಿತ ವ್ಯಕ್ತಿಯ ಶವದ ಗುರುತನ್ನು ಕುಟುಂಬಸ್ಥರ ನೆರವಿನಿಂದ ಕೊಡಿಗೇಹಳ್ಳಿ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮೃತದೇಹ ವಿನೋದ್ ಎಂಬವರದ್ದಾಗಿದೆ. ಕುಡಿದ ನಶೆಯಲ್ಲಿ ರಸ್ತೆ ಬದಿ ನಿಲ್ಲಿಸಲಾಗಿದ್ದ ಕಾರಿನಲ್ಲಿ ಸೊಳ್ಳೆ ಬತ್ತಿಯಿಂದ ಅಂಟಿಸಲಾಗಿದ್ದ ಬೆಂಕಿಯಿಂದ ತಗುಲಿದ ಅವಘಡದಲ್ಲಿ ವಿನೋದ್ ಮೃತಪಟ್ಟಿರುವುದು ಗೊತ್ತಾಗಿದೆ.
ಕುತೂಹಲಕಾರಿ ವಿಷ್ಯವೆಂದರೆ, ಮೃತದೇಹದ ಗುರುತನ್ನು ಆ ವ್ಯಕ್ತಿಯ ಅರ್ಧ ಸುಟ್ಟಿದ್ದ ಚಡ್ಡಿಯಿಂದಲೇ ಪತ್ತೆ ಮಾಡಲಾಗಿದೆ. ವಿನೋದ್ ವಿವಾಹಿತನಾಗಿದ್ದು, ದೊಡ್ಡಬೊಮ್ಮಸಂದ್ರ ನಿವಾಸಿ. ಕೌಟುಂಬಿಕ ಕಾರಣಕ್ಕಾಗಿ ಪತ್ನಿಯಿಂದ ದೂರವಾಗಿ ತಾಯಿಯೊಂದಿಗೆ ವಾಸವಾಗಿದ್ದರು.
ಮದ್ಯ ವ್ಯಸನಿಯಾಗಿದ್ದು ಪ್ರತಿದಿನವೂ ಕುಡಿಯುವ ಪ್ರವೃತ್ತಿ ಬೆಳೆಸಿಕೊಂಡಿದ್ದರಂತೆ. ಕುಡಿದಾಗ ಪ್ರತಿದಿನವೂ ಮನೆಗೆ ಬರುತ್ತಿರಲಿಲ್ಲ. ಮಾರ್ಚ್ 29ರಂದು ರಾತ್ರಿ ಕುಡಿದ ಗುಂಗಿನಲ್ಲಿ ದೇವಿನಗರ ಬಳಿಯ ರಸ್ತೆ ಬದಿ ನಿಲ್ಲಿಸಲಾಗಿದ್ದ ಗುಜರಿಗೆ ಹಾಕುವ ಸ್ಥಿತಿಯಲ್ಲಿದ್ದ ಪೋರ್ಡ್ ಕಾರಿನಲ್ಲಿ ಒಳಹೋಗಿದ್ದರು. ಈ ಮಧ್ಯೆ ಕಾರಿನಲ್ಲಿ ಏಕಾಏಕಿಯಾಗಿ ಬೆಂಕಿ ಹೊತ್ತಿಕೊಂಡಿತ್ತು. ವಿನೋದ್ ಮಲಗಿದ್ದ ಜಾಗದಲ್ಲಿಯೇ ಸಜೀವ ದಹನವಾಗಿದ್ದಾನೆ.
ಕೃತ್ಯ ನಡೆದ ಸ್ಥಳದಲ್ಲಿನ ಸಿಸಿಟಿವಿ ಪರಿಶೀಲಿಸಿದಾಗ ವಿನೋದ್ ಕಾರಿನಲ್ಲಿ ಒಳ ಹೋಗಿರುವುದು ಕಂಡುಬಂದಿತ್ತು. ಸತತ ಶೋಧ ಬಳಿಕವೂ ಕುಟುಂಬಸ್ಥರನ್ನು ಪತ್ತೆ ಹಚ್ಚಿದ ಪೊಲೀಸರು ಆತ ಧರಿಸಿದ್ದ ಚಡ್ಡಿಯಿಂದ ಗುರುತು ಪತ್ತೆ ಮಾಡಿದ್ದಾರೆ ಎಂದು ಡಿಸಿಪಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ.