ನಾ ಮುಂದು, ತಾ ಮುಂದು ಎಂಬಂತೆ ಊರಿಗೆ ಹೊರಟವರಿಗೆ ನಿರಾಸೆ

ಬೆಂಗಳೂರು,ಏ.೨೮- ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕೊರೋನಾ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎರಡನೇ ದಿನವೂ ತಮ್ಮ ಊರುಗಳಿಗೆ ಜನರು ಗಂಟುಮೂಟೆ ಕಟ್ಟಿಕೊಂಡು ಗುಳೆ ಹೊರಡಲು ನಡೆಸಿದ ಸಿದ್ಧತೆಗೆ ಬಸ್ ಗಳಿಲ್ಲದೆ ನಿರಾಸೆ ಹೊಂದುವಂತಾಗಿದೆ.
ಬೆಂಗಳೂರಿನಿಂದ ಜನರು ತಮ್ಮತಮ್ಮ ಊರುಗಳಿಗೆ ನೆನ್ನೆಯಿಂದ ಪ್ರವಾಹದ ರೀತಿ ತೆರಳುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹರಡುವ ಸಾಧ್ಯತೆಯಿದ್ದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.
ಬೆಂಗಳೂರಿನ ಮೆಜೆಸ್ಟಿಕ್ ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣ ಸೇರಿದಂತೆ ವಿವಿಧ ಭಾಗಗಳಲ್ಲಿ ಊರುಗಳಿಗೆ ತೆರಳಲು ಜನರು ಬಸ್ ನಿಲ್ದಾಣದಲ್ಲಿ ಕಾದು ಕುಳಿತಿರುವ ದೃಶ್ಯ ಇಂದು ಸಾಮಾನ್ಯವಾಗಿದೆ.
ಊರುಗಳಿಗೆ ತೆರಳಲು ಸಜ್ಜಾಗಿರುವ ಜನರಿಗೆ ಬಸ್ ನಿಲ್ದಾಣದಲ್ಲಿ ಕೊರೊನಾ ಸೋಂಕು ಪರೀಕ್ಷೆ ನಡೆಸಲಾಗುತ್ತಿದೆ. ತಮ್ಮ ತಮ್ಮ ಊರುಗಳಿಗೆ ತೆರಳಲು ಬಸ್ ಸಿಗದೇ ಅನೇಕ ಮಂದಿ ಬಸ್ ನಿಲ್ದಾಣದಲ್ಲಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ
ರಾಜ್ಯದಲ್ಲಿ ದಾಖಲಾಗಿರುವ ಒಟ್ಟಾರೆ ಸೋಂಕಿನ ಪೈಕಿ ಬೆಂಗಳೂರು ನಗರದಲ್ಲಿ ಅತಿಹೆಚ್ಚಿನ ಸೋಂಕು ಹೊಂದಿದೆ. ಶೇಕಡ ಅರ್ಧದಷ್ಟು ಬೆಂಗಳೂರಿನಲ್ಲಿ ಸೋಂಕು ಹೊಂದಿದೆ.ಉಳಿಸ ಜಿಲ್ಲೆಗಳಲ್ಲಿ ಇನ್ನು ಅರ್ದ ಪ್ರಮಾಣದ ಸೋಂಕು ಹೊಂದಿದೆ.
ರಾಜಧಾನಿ ಬೆಂಗಳೂರಿನಿಂದ ರಾಜ್ಯದ ವಿವಿದ ಜಿಲ್ಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿದ್ದಾರೆ ಇದು ಸಹಜವಾಗಿಯೇ ಜಿಲ್ಲಾಡಳಿತ ಗಳನ್ನು ಮತ್ತಷ್ಟು ಆತಂಕ ಹೆಚ್ಚು ಮಾಡುವಂತೆ ಮಾಡಿದೆ.
೪ ಲಕ್ಣಕ್ಕೂ ಅಧಿಕ ವಲಸೆ:
ರಾಜ್ಯದಲ್ಲಿ ೧೪ ದಿನಗಳ ಕಾಲ ಲಾಕ್ಡೌನ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಜನರು ಊರಿಗೆ ತೆರಳಿದ್ದಾರೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.
ಬೆಂಗಳೂರಿನಿಂದ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಮೂಲೆ ಮೂಲೆಗೆ ಜನರು ತೆರಳಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹೆಚ್ಚಿನ ಮುತುವರ್ಜಿ ವಹಿಸುವಂತೆ ಸೂಚಿಸಲಾಗಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ಕೆ.ವಿ ತ್ರಿಲೋಕ್ ಚಂದ್ರ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.
ಜಿಲ್ಲಾ ಆಸ್ಪತ್ರೆಗಳಲ್ಲಿ ಹೆಚ್ಚುವರಿಯಾಗಿ ಹಾಸಿಗೆಗಳನ್ನು ಕಾಯ್ದಿರಿಸುವುದು ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಜಿಲ್ಲಾಡಳಿತ ಮಾಡಿಕೊಳ್ಳಬೇಕು ಎಂದು ಅವರು ಸೂಚನೆ ನೀಡಿದ್ದಾರೆ

ಕ್ವಾರಂಟೈನ್

ಬೆಂಗಳೂರಿನಿಂದ ವಿವಿಧ ಹಳ್ಳಿಗಳಿಗೆ ತೆರಳುವ ಜನರು ಕಡ್ಡಾಯವಾಗಿ ಕ್ವಾರಂಟೈನ್ ನಲ್ಲಿ ಇರುವಂತೆ ಸೂಚಿಸಲಾಗಿದೆ. ಜನರು ಹಳ್ಳಿಗಳಿಗೆ ತೆರಳಿರುವ ಹಿನ್ನೆಲೆಯಲ್ಲಿ ಗ್ರಾಮಾಂತರ ಪ್ರದೇಶಗಳಿಗೆ ಕೊರೋನಾ ಸೋಂಕು ಹರಡುವ ಭೀತಿ ಎದುರಾಗಿದೆ.