ನಾ ಬಸವ ಅನುಯಾಯಿ, ಲಿಂಗಾಯಿತ ವಿರೋಧಿಯಲ್ಲ:ಸಿದ್ದರಾಮಯ್ಯ


ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಏ.27: ‘ನಾನು ಬಸವಣ್ಣನವರ ಅನುಯಾಯಿ, ಲಿಂಗಾಯಿತ ವಿರೋಧಿಯಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಿ.ಟಿ.ಪರಮೇಶ್ವರನಾಯ್ಕ ಪರ ಮತಯಾಚಿಸಿ ಮಾತನಾಡಿದ ಅವರು, ಭ್ರಷ್ಟಾಚಾರದಲ್ಲಿ ಮುಳುಗಿರುವ ಬಸವರಾಜ ಬೊಮ್ಮಾಯಿ ಕರ್ನಾಟಕಕ್ಕೆ ಕಳಂಕ ತಂದಿದ್ದಾರೆ. ಅವರನ್ನು ಟೀಕಿಸಿದ್ದಕ್ಕಾಗಿ ನನ್ನನ್ನು ಲಿಂಗಾಯಿತ ವಿರೋಧಿ ಎಂದು ಬಿಂಬಿಸಿದ್ದಾರೆ. ಸಾಮಾಜಿಕ ಒಳಿತು ಬಯಸಿದ ಬುದ್ದ, ಬಸವ, ಪ್ರಗತಿಪರ ಚಿಂತಕರನ್ನೇ ಈ ಜನ ಬಿಟ್ಟಿಲ್ಲ, ನನ್ನ ಬಿಡುತ್ತಾರೆಯೇ ಎಂದರು.
ಅಧಿಕಾರಕ್ಕೆ ಬಂದಾಗಿನಿಂದಲೂ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ವಿಧಾನಸೌಧದ ಪ್ರತೀ ಗೋಡೆಗಳು ಲಂಚ ಲಂಚ.. ಎಂದು ಪಿಸುಗುಟ್ಟಿತ್ತಿವೆ. ‘ನಾ ತಿನ್ನಲ್ಲ, ತಿನ್ನಲು ಬಿಡಲ್ಲ’ ಎಂದು ಬೊಬ್ಬೆ ಹಾಕುವ ಪ್ರಧಾನಿ ಮೋದಿಯವರು ಸಿಎಂ ಬೊಮ್ಮಾಯಿ ಅವರನ್ನು ಕಮಿಷನ್ ಹೊಡೆಯಲು ಪರವಾನಗಿ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ದೇಶದಲ್ಲಿ 1931ರಲ್ಲಿ ಮಾತ್ರ ಜಾತಿ ಆಧಾರಿತ ಜನಗಣತಿ ನಡೆಸಲಾಗಿತ್ತು. ನಂತರ ಯಾವ ನಾನು ಮುಖ್ಯಮಂತ್ರಿಯಾಗಿದ್ದಾಗ ಜಾತಿವಾರು ಜನಗಣತಿ ವರದಿ ತಯಾರಿಸಲು ಹಿಂದುಳಿದ ವರ್ಗಗಳ ಆಯೋಗಕ್ಕೆ 168 ಕೋಟಿ ರೂ. ಬಿಡುಗಡೆಗೊಳಿಸಿದ್ದೆ. ನಂತರ ಬಂದ ಜೆಡಿಎಸ್ ಮತ್ತು ಬಿಜೆಪಿ ಸರ್ಕಾರಗಳು ಆ ವರದಿಯನ್ನು ಸ್ವೀಕರಿಸಿಲ್ಲ.  ಈ ಬಾರಿ ಕಾಂಗ್ರೆಸ್ 130ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬರಲಿದ್ದು, ನಾವು ಅಧಿಕಾರಕ್ಕೆ ಬಂದ ತಕ್ಷಣ ಜಾತಿಗಣತಿ ವರದಿ ಆಧಾರದಲ್ಲಿ ಆಯಾ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿ ಆಧರಿಸಿ ಅಭಿವೃದ್ಧಿ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತೇವೆ. ಆ ಮೂಲಕ ಬಡವರು, ಹಿಂದುಳಿದವರನ್ನು ಮೇಲೆತ್ತುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಕ್ಷೇತ್ರದ ಸಮಗ್ರ ಅಭಿವೃದ್ಧಿ ಚಿಂತಿಸುವ ಜನಪರ ಕಾಳಜಿಯ ರಾಜಕಾರಣಿ ಪಿ.ಟಿ.ಪರಮೇಶ್ವರನಾಯ್ಕ ಅವರಿಗೆ ರಾಜಕೀಯ ಭವಿಷ್ಯವಿದ್ದು, ಈ ಚುನಾವಣೆಯಲ್ಲಿ ಅವರನ್ನು ಬೆಂಬಲಿಸಬೇಕು. ಅವರಿಗೆ ನೀಡುವ ಒಂದೊಂದು ಮತವೂ ನನಗೆ ನೀಡಿದಂತೆ ಎಂದು ಹೇಳಿದರು.
ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಮಾತನಾಡಿ, ನನ್ನ 10 ವರ್ಷಗಳ ಆಡಳಿತಾವಧಿಯಲ್ಲಿ ಕ್ಷೇತ್ರದಲ್ಲಿ ದೌರ್ಜನ್ಯ, ದಬ್ಬಾಳಿಕೆಗೆ ಅವಕಾಶ ಮಾಡಿಕೊಟ್ಟಿಲ್ಲ. ಕ್ಷೇತ್ರವನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿಸಲು ಮತ್ತೊಮ್ಮೆ ನನಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕ್ಷೇತ್ರಕ್ಕೆ 2500ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿರುವೆ. ಕ್ಷೇತ್ರದ ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ ಎಂದರು.
ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿರಾಜ್ ಶೇಖ್ ಮಾತನಾಡಿದರು. ಹರಪನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೊಟ್ರೇಶ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶಿವಯೋಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಟವಾಳಗಿ ಕೊಟ್ರೇಶ, ಬಿ.ಹನುಮಂತಪ್ಪ, ಹನಕನಹಳ್ಳಿ ಹಾಲೇಶ, ಪುರಸಭೆ ಅಧ್ಯಕ್ಷ ಜ್ಯೋತಿ ಮಲ್ಲಣ್ಣ, ಉಪಾಧ್ಯಕ್ಷ ಎಸ್.ತಿಮ್ಮಣ್ಣ, ಮುಖಂಡರಾದ ಗುರುವಿನ ಕೊಟ್ರಯ್ಯ, ಹಾಲಪ್ಪ, ಎಸ್.ದೂದನಾಯ್ಕ, ಎಲ್.ಮಧುನಾಯ್ಕ, ಜ್ಯೋತಿ ಮಹೇಂದ್ರ, ಸಿ.ಚಾಂದಸಾಹೇಬ್, ಕೆ.ಗೌಸ್ ಮೊದೀನ್ ಇತರರು ಉಪಸ್ಥಿತರಿದ್ದರು.