`ನಾ ಕೋಳಿಕ್ಕೆ ರಂಗ’ ಮುಂದಿನ ತಿಂಗಳು

ಮಾಸ್ಟರ್ ಆನಂದ್ ಪೂರ್ಣ ಪ್ರಮಾಣದಲ್ಲಿ ನಾಯಕನಾಗಿರುವ “ ನಾ ಕೋಳಿಕ್ಕೆ ರಂಗ” ಚಿತ್ರ ನವಂಬರ್ 10ರಂದು ಬಿಡುಗಡೆಗೆ ಸಜ್ಜಾಗಿದೆ. ಗೊರವಾಲೆ ಮಹೇಶ್ ಆಕ್ಷನ್ ಕಟ್ ಹೇಳಿರುವ ಚಿತ್ರಕ್ಕೆ ಎಸ್‍ಟಿ ಸೋಮಶೇಖರ್ ಬಂಡವಾಳ ಹಾಕಿದ್ದು ಅವರ ಪುತ್ರಿ ರಾಜೇಶ್ವರಿ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.

ಮಾಹಿತಿ ಹಂಚಿಕೊಂಡ ನಟ ಮಾಸ್ಟರ್ ಆನಂದ್, ಚಿತ್ರದಲ್ಲಿ ಕೋಳಿ, ತಾಯಿ ಮತ್ತು ರಂಗನ ಸುತ್ತ ನಡೆಯುವ ಭಾವನಾತ್ಮಕ ಕತೆ ಚಿತ್ರ ಒಳಗೊಂಡಿದೆ. ಮೌಡ್ಯಗಳ ಕುರಿತು ಮಾಡಿರುವ ಚಿತ್ರ ಇದು. ಮಂಡ್ಯದಲ್ಲಿ ಬಹುತೇಕ ಭಾಗ, ಕೆಲ ಭಾಗ ಬೆಂಗಳೂರು, ಮೈಸೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ನನ್ನ ಪರಿಚಯದ ಹಾಡಿಗೆ ಪುನೀತ್ ರಾಜ್‍ಕುಮಾರ್ ಹಾಡಿರುವುದು ಖುಷಿ ಕೊಟ್ಟಿದೆ. ಇನ್ನಷ್ಟು ಹಾಡು ಹಾಡುವ ಮಾತುಕೊಟ್ಟಿದ್ದರು. ಹೀಗಾಗುತ್ತದೆ ಎಂದು ಯಾರಿಗೆ ಗೊತ್ತಿತ್ತು ಎಂದು ಹೇಳಿಕೊಂಡರು.

ಚಿತ್ರದಲ್ಲಿ ಸೆಕ್ಸ್ ಬಾಂಬ್ ಶಕೀಲಾ ಅವರು ಬೇರೆಯದೇ ಪಾತ್ರ ಮಾಡಬಹುದು ಎನ್ನುವುದನ್ನು ತೋರಿಸಲಾಗಿದೆ. ಇದರಲ್ಲಿ ಅವರದು ಸರ್ಕಾರಿ ಶಾಲೆ ಶಿಕ್ಷಕಿ, ಓದಿ ಬಿಟ್ಟ ಮಕ್ಕಳನ್ನು ಶಾಲೆಗೆ ಕರೆತರುವ ಪಾತ್ರ ಅವರದು. ಇನ್ನೂ ಹಿರಿಯ ನಟಿ ಭವ್ಯ ಅವರು ಅಮ್ಮನ ಪಾತ್ರ ಮಾಡಿದ್ದಾರೆ.ಇದು ಖುಷಿಯ ವಿಚಾರ ಎಂದರು,

ಹಿರಿಯ ನಟಿ ಭವ್ಯ ಮಾತನಾಡಿ ಒಳ್ಳೆಯ ಪಾತ್ರ ಸಿಕ್ಕಿದೆ. ಮಾಸ್ಟರ್ ಆನಂದ್ ಜೊತೆ ಹಲವು ವರ್ಷಗಳ ಹಿಂದೆ ನಟಿಸಿದ್ದೆ ಎಂದರೆ ನಿರ್ಮಾಪಕ ಸೋಮಶೇಖರ್ ಒಳ್ಳೆಯ ಚಿತ್ರ ಮಾಡಿದ್ದೇವೆ. ಎಲ್ಲಿಯೂ ಕಡಿಮೆ ಮಾಡಿಲ್ಲ. ಜನ ಕೈ ಹಿಡಿಯುತ್ತಾರೆ ಎಂದರು.

ನಿರ್ದೇಶಕ ಗೊರವಾಲೆ ಮಹೇಶ್ ಮಾತನಾಡಿ ಮೊದಲ ಚಿತ್ರ. ಗ್ರಾಮೀಣ ಸೊಗಡಿಗೆ ಆದ್ಯತೆ ನೀಡಿ ಎಲ್ಲರಿಗೂ ಇಷ್ಟವಾಗುವ ಚಿತ್ರ ಮಾಡಲಾಗಿದೆ ಎಂದರೆ ನಾಯಕಿ ರಾಜೇಶ್ವರಿ, ಅಪ್ಪ-ಅಮ್ಮನ ಸಹಕಾರದಿಂದ ನಾಯಕಿಯಾಗಿದ್ದೇನೆ ಎಂದು ಮಾಹಿತಿ ಹಂಚಿಕೊಂಡರು.