ನಾಸೀರ್ ಬಂಧನಕ್ಕೆ ಬಿವೈವಿ ಆಗ್ರಹ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಮಾ.೫:ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಪ್ರಕರಣದಲ್ಲಿ ಕಾಂಗ್ರೆಸ್‌ನಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವ ನಾಸೀರ್‌ಹುಸೇನ್ ಅವರನ್ನು ಬಂಧಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.ಬೆಳಗಾವಿ ವಿಮಾನನಿಲ್ದಾಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣ ಎಫ್‌ಐಆರ್‌ನಲ್ಲಿ ನಾಸೀರ್‌ಹುಸೇನ್ ಅವರನ್ನು ೪ನೇ ಆರೋಪಿಯಾಗಿ ಸೇರಿಸಿ ಅವರನ್ನೂ ಬಂಧಿಸಬೇಕು ಎಂದು ಒತ್ತಾಯಿಸಿದರು.ಈ ಪ್ರಕರಣದಲ್ಲಿ ಈಗಾಗಲೇ ಮೂವರನ್ನು ಬಂಧಿಸಿರುವ ಮಾಹಿತಿ ಇದೇ. ೪ನೇ ಆರೋಪಿಯಾಗಿ ನಾಸೀರ್‌ಹುಸೇನ್‌ನ್ನು ಬಂಧಿಸಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು.
ಖಾಸಗಿ ಎಫ್‌ಎಸ್‌ಎಲ್ ವರದಿ ಬಿಡುಗಡೆಯಾಗದಿದ್ದರೆ ಸರ್ಕಾರ ಪಾಕ್ ಪರ ಘೋಷಣೆ ಕೂಗಿರುವ ದೇಶದ್ರೋಹಿಗಳನ್ನು ಬಂಧಿಸಲು ಮೀನಾ ಮೇಷ ಎಣಿಸುವ ಸಾಧ್ಯತೆ ಇತ್ತು ಎಂದು ಅವರು ಹೇಳಿದರು.ವಿಧಾನಸೌಧ ಒಳಗೆ ಪಾಕ್ ಪರ ಘೋಷಣೆ ಕೂಗಿದವರನ್ನು ಬಂಧಿಸುವಂತೆ ಆಗ್ರಹಿಸಿ ಬಿಜೆಪಿ ನಿರಂತರ ಹೋರಾಟ ನಡೆಸಿದ ಫಲವಾಗಿ ಮೂವರು ದೇಶದ್ರೋಹಿಗಳ ಬಂಧನವಾಗಿದೆ. ಆದರೆ, ರಾಜ್ಯಸರ್ಕಾರ ಇನ್ನು ಎಫ್‌ಎಸ್‌ಎಲ್ ವರದಿಯನ್ನು ಬಹಿರಂಗಪಡಿಸಿಲ್ಲ. ಯಾವ ಕಾರಣಕ್ಕೆ ಎಫ್‌ಎಸ್‌ಎಲ್ ವರದಿಯನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಸೀರ್‌ಹುಸೇನ್ ಬಂಧನವಾಗಬೇಕು. ಹಾಗೆಯೇ ಈ ಪ್ರಕರಣದಲ್ಲಿ ಅವರು ನಿರ್ದೋಷಿ ಎಂದು ಸಾಬೀತಾಗುವವರೆಗೂ ರಾಜ್ಯಸಭಾ ಸದಸ್ಯತ್ವದ ಪ್ರಮಾಣವಚನಕ್ಕೆ ಅವಕಾಶಕೊಡಬಾರದು ಎಂದು ವಿಜಯೇಂದ್ರ ಒತ್ತಾಯಿಸಿದರು.
ದೇಶದ್ರೋಹದ ಪ್ರಶ್ನೆ ಬಂದಾಗ ಹಿಂದೂ, ಮುಸಲ್ಮಾನ ಯಾವುದೂ ಉದ್ಭವವಾಗುವುದಿಲ್ಲ. ದೇಶದ್ರೋಹಿಗಳ ವಿರುದ್ಧದ ಕ್ರಮಕ್ಕೆ ಜಾತಿ, ಧರ್ಮ ಅಡ್ಡಿಯಾಗಬಾರದು. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.