ನಾಸಾದ ಹಳೆಯ ಭೂಮಿಯ ಪೋಸ್ಟ್‌ಗೆ ಭಾರೀ ಜನಸ್ಪಂದನೆ

ನ್ಯೂಯಾರ್ಕ್, ಮಾ.೨೪- ವಿಶ್ವದ ಪ್ರಸಿದ್ಧ ಬಾಹ್ಯಾಕಾಶ ಸಂಸ್ಥೆಗಳಲ್ಲಿ ಒಂದಾಗಿರುವ ನಾಸಾ ಇತ್ತೀಚಿಗೆ ತನ್ನ ಹಳೆಯ ರಾತ್ರಿ ಸಮಯದ ಭೂಮಿಯ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದು, ನಾಗರಿಕರ ವಸಾಹತು ಪ್ರದೇಶಗಳ ಕುರಿತು ಮಾಹಿತಿ ನೀಡಿದೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ನಾಸಾದ ಪೋಸ್ಟ್‌ಗೆ ಹೆಚ್ಚಿನ ಲೈಕ್ಸ್‌ಗಳು ಬಂದಿದ್ದು, ಭಾರೀ ಜನಸ್ಪಂದನೆ ವ್ಯಕ್ತವಾಗಿದೆ.
೨೦೧೬ರಲ್ಲಿ ತೆಗೆದ ಚಿತ್ರವನ್ನು ನಾಸಾ ಇದೀಗ ಹಂಚಿಕೊಂಡಿದೆ. ಚಿತ್ರದಲ್ಲಿ ಇದು ತಿಳಿ ನೀಲಿ ಬಣ್ಣದಲ್ಲಿ ಹೊಳೆಯುತ್ತಿರುವ ಭೂಮಿಯ ಬಾಹ್ಯರೇಖೆಯನ್ನು ತೋರಿಸುತ್ತದೆ. ಇದು ಯುರೋಪ್ ಮತ್ತು ಉತ್ತರ ಆಫ್ರಿಕಾದ ನಗರ ದೀಪಗಳು ಪ್ರಕಾಶಮಾನವಾಗಿ ಹೊಳೆಯುತ್ತಿರುವುದನ್ನು ತೋರಿಸುತ್ತದೆ. ಚಿತ್ರವು ೨೦೧೬ ರಲ್ಲಿ ಗಮನಿಸಿದಂತೆ ಭೂಮಿಯಲ್ಲಿ ರಾತ್ರಿ ದೀಪಗಳನ್ನು ತೋರಿಸುತ್ತದೆ. ೨೦೧೬ ರಲ್ಲಿ ಪ್ರತೀ ಭೂಪ್ರದೇಶದ ಮೇಲೆ ಪ್ರತೀ ತಿಂಗಳು ಅತ್ಯುತ್ತಮ ಮೋಡ-ಮುಕ್ತ ರಾತ್ರಿಗಳನ್ನು ಆಯ್ಕೆ ಮಾಡುವ ಸಂಯೋಜನೆಯ ತಂತ್ರದಿಂದ ಇದನ್ನು ಪಡೆಯಲಾಗಿದೆ ಎಂದು ಪೋಸ್ಟ್‌ನ ಶೀರ್ಷಿಕೆಯಲ್ಲಿ ನಾಸಾ ಬರೆದಿದೆ. ನಾಸಾದ ಪೋಸ್ಟ್‌ಗೆ ಕೇವಲ ಒಂದೇ ದಿನ ತುಂಬಿದ್ದು, ಆದರೆ ಅದರೊಳಗೆ ೧೦ ಲಕ್ಷಕ್ಕಿಂತಲೂ ಹೆಚ್ಚಿನ ಲೈಕ್‌ಗಳು ಹಾಗೂ ಸಾವಿರಕ್ಕಿಂತಲೂ ಹೆಚ್ಚಿನ ಕಮೆಂಟ್‌ಗಳು ವ್ಯಕ್ತವಾಗಿದೆ. ಅದರಲ್ಲೂ ಭಾರತೀಯ ಸಾಮಾಜಿಕ ಜಾಲತಾಣ ಬಳಕೆದಾರರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಕಮೆಂಟ್ ಮಾಡಿದ್ದು, ಭಾರತ ಹೆಚ್ಚಿನ ಪ್ರಮಾಣದಲ್ಲಿ ಹೊಳೆಯುತ್ತಿದೆ ಎಂದು ತಿಳಿಸಿದ್ದಾರೆ. ಉಳಿದಂತೆ ಧನಾತ್ಮಕ ರೀತಿಯಲ್ಲಿ ಕಮೆಂಟ್‌ಗಳು ಬಂದಿದ್ದು, ನಾಸಾಗೆ ಸಂತಸ ಮೂಡಿಸಿದ್ದು ಮಾತ್ರ ಸುಳ್ಳಲ್ಲ.