
ಹೊನ್ನಾಳಿ.ಮಾ.೧೪; ಮಂಡ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ನಾವು ಬಡವರ ಕೆಲಸಕ್ಕೆ ಮಾಡುತ್ತಿದ್ದರೆ, ಕಾಂಗ್ರೆಸ್ ನನ್ನನ್ನು ಸಮಾಧಿ ಮಾಡಲು ಕಾಯುತ್ತಿದೆ ಎಂದೇಳಿರುವುದು ಶುದ್ಧ ಸುಳ್ಳು. ನಾವ್ಯಾರು ಮೋದಿ ಸಾವು ಬಯಸಿಲ್ಲ. ನೂರಲ್ಲ, ನೂರ ಇಪ್ಪತ್ತು ವರ್ಷ ಬದುಕಲಿ ಎಂಬುದಾಗಿ ಹಾರೈಸುತ್ತೇವೆ. ಸುಳ್ಳು, ಆಶ್ವಾಸನೆ ಈಡೇರಿಸದ ಬಿಜೆಪಿಗೆ ಮತ ಹಾಕಬೇಡಿ. ಮಾತು ತಪ್ಪಿದ ಇಂಥ ಪಕ್ಷಕ್ಕೆ ಮತ ಚಲಾಯಿಸಲು ಬಿಡಬೇಡಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದರು.ಹೊನ್ನಾಳಿ ಪಟ್ಟಣದಲ್ಲಿ ಜನಧ್ವನಿ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೋದಿ ಅವರು ಬಡವರ ಪರವಾಗಿ ಕೆಲಸ ಮಾಡುತ್ತಿಲ್ಲ. ರಾಜ್ಯಕ್ಕೆ ಬಂದಾಗಲೆಲ್ಲಾ ಸುಳ್ಳು ಹೇಳಿ ಹೋಗುತ್ತಿದ್ದಾರೆ. ಭಾವಾನಾತ್ಮಕ, ಕರುಣೆಯ ಮೂಲಕ ಮತ ಪಡೆಯಲು ಹವಣಿಸುತ್ತಿದೆ. ಮೋದಿ ಅಧಿಕಾರಕ್ಕೆ ಬಂದು 9 ವರ್ಷ ಆದರೂ ಅಚ್ಚೆ ದಿನ್ ಬರಲಿಲ್ಲ. ಬೆಲೆ ಏರಿಕೆ ಕಡಿಮೆ ಆಗಲಿಲ್ಲ. ರೈತರ ಆದಾಯ ದುಪ್ಪಟ್ಟು ಆಗಲಿಲ್ಲ. ಬಿಜೆಪಿ ಅಂದರೆ ಭ್ರಷ್ಟ ಜನತಾ ಪಾರ್ಟಿ. ಭ್ರಷ್ಟಾಚಾರದಿಂದ ಹುಟ್ಟಿದ, ಪ್ರೋತ್ಸಾಹಿಸುತ್ತಿರುವ ಪಕ್ಷ ಎಂದು ವಾಗ್ದಾಳಿ ನಡೆಸಿದರು.ಸುಮಾರು 45 ವರ್ಷಗಳಿಂದಲೂ ಸಕ್ರಿಯ ರಾಜಕಾರಣದಲ್ಲಿದ್ದೇನೆ. ಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಿದ್ದೇನೆ. ರಾಜಕೀಯ ಜೀವನದಲ್ಲಿ ಬಿಜೆಪಿಯಂಥ ಭ್ರಷ್ಟ ಸರ್ಕಾರ ನೋಡೇ ಇರಲಿಲ್ಲ. ಜನರು ಶೇ. 40 ಕಮೀಷನ್ ಸರ್ಕಾರ ಎಂದು ಸುಮ್ಮನೆ ಕರೆಯಲ್ಲ. ವಿಪಕ್ಷದವರು ಹೇಳಿದ್ದಲ್ಲ. ರಾಜ್ಯ ಗುತ್ತಿಗೆದಾರ ಸಂಘದವರು ಪ್ರಧಾನಿ ಅವರಿಗೆ ಪತ್ರ ಬರೆದಿದ್ದಾರೆ. ಶೇ. 40ರಷ್ಟು ಕಮೀಷನ್ ಕೊಟ್ಟರೆ ಗುಣಮಟ್ಟದ ಕೆಲಸ ಮಾಡಲು ಆಗಲ್ಲ. ರಕ್ಷಣೆ ಮಾಡಿ ಅಂತೇಳಿ ಕೆಂಪಣ್ಣ ಅವರು ಪ್ರಧಾನಿಗೆ ಪತ್ರ ಬರೆದು ಒಂದೂವರೆ ವರ್ಷವಾದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಬಸವರಾಜ್ ಬೊಮ್ಮಾಯಿ ಅವರು ಪತ್ರ ಬರೆದಿದ್ದರೂ ದಾಖಲಾತಿ ಕೊಟ್ಟರೆ ತನಿಖೆ ಮಾಡಿಸುತ್ತೇನೆ ಎನ್ನುತ್ತಾರೆ. ಪತ್ರ ಬರೆದಿರುವುದು ದಾಖಲಾತಿ ಅಲ್ವಾ ಎಂದು ಪ್ರಶ್ನಿಸಿದರು.ಜನರ ಆಶೀರ್ವಾದ ಪಡೆದು ಬಿಜೆಪಿ ಅಧಿಕಾರಕ್ಕೆ ಬರಲಿಲ್ಲ. ಆಪರೇಷನ್ ಕಮಲ ಮಾಡಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಬೇರೆ ಪಕ್ಷದ ಶಾಸಕರನ್ನು ಖರೀದಿಸಿ ಅನೈತಿಕವಾಗಿ ಅಧಿಕಾರಕ್ಕೆ ಬಂದ ಪಕ್ಷ ಬಿಜೆಪಿ ಎಂದು ವಾಗ್ದಾಳಿ ನಡೆಸಿದರು.