ನಾವು ಸಾಧನೆ ಮಾಡಬೇಕಾದರೆ ನಮಗೆ ಶಿಕ್ಷಣ ಬೇಕು

ಸಂಜೆವಾಣಿ ವಾರ್ತೆ

ದಾವಣಗೆರೆ.ಆ.೬: ೧೨ನೇ ಶತಮಾನದ ವಚನ ಚಳವಳಿ ಚರಿತ್ರಾರ್ಹವಾದುದು. ಕನ್ನಡ ನಾಡಿನ ಸಾಂಸ್ಕೃತಿಕ, ಸಾಮಾಜಿಕ ಮತ್ತು ಧಾರ್ಮಿಕ ಪರಿವರ್ತನೆಗೆ ಕಾರಣವಾದವು. ಈ ಚಳವಳಿಯು ಸಮಾಜದ ಶೋಷಿತ ವರ್ಗದ ದಲಿತರು, ಅದರಲ್ಲೂ ಮುಖ್ಯವಾಗಿ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡಿತು. ಇಂತಹ ಶರಣರ ವಚನ ಚಳವಳಿಯಲ್ಲಿ ಹಡಪದ ಅಪ್ಪಣ್ಣನವರೂ ಒಬ್ಬರಾಗಿದ್ದರು ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.  ತಾಲೂಕಿನ ಆನಗೋಡು ಗ್ರಾಮದಲ್ಲಿ  ನಿಜಸುಖಿ ಹಡಪದ ಅಪ್ಪಣ್ಣನವರ ೮೮೯ನೇ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಹಡಪದ ಅಪ್ಪಣ್ಣನವರು ತಮ್ಮ ಜೀವನವೀಡಿ ಬಸವಣ್ಣನವರ ನಂಬಿಕಸ್ಥ ಸಹಾಯಕರಾಗಿದ್ದರು. ಶರಣರೆಲ್ಲರ ಪ್ರೀತಿ ಗೌರವಕ್ಕೆ ಪಾತ್ರರಾಗಿದ್ದರು. ಲೌಕಿಕ ಮತ್ತು ಅಧ್ಯಾತ್ಮಿಕ ಬದುಕಿಗೆ ಯಾವ ಲೋಪವೂ ಬಾರದಂತೆ ನಡೆದುಕೊಳ್ಳುತ್ತಿದ್ದರಿಂದ ಶರಣ ಸಮೂಹ ಅವರನ್ನು ನಿಜಸುಖಿ ಅಪ್ಪಣ್ಣ ಎಂದು ಕರೆಯಿತು ಎಂದು ಸ್ಮರಿಸಿದರು.ನಾವು ಸಾಧನೆ ಮಾಡಬೇಕಾದರೆ ನಮಗೆ ಶಿಕ್ಷಣ ಬೇಕು. ಡಾ.ಬಿ.ಆರ್.ಅಂಬೇಡ್ಕರ್ ಹೇಳಿದಂತೆ ಮೊದಲ ಆದ್ಯತೆ ಶಿಕ್ಷಣವಾಗಿದೆ. ಯಾರು ಶಿಕ್ಷಣಕ್ಕೆ ಆದ್ಯತೆ ಕೊಡುತ್ತಾರೆ, ಅವರು ಮೇಲೆ ಬರಲು ಸಾಧ್ಯ. ನಾನು ಕೂಡ ಶಿಕ್ಷಣ ಪಡೆದಿದ್ದರಿಂದ ನಿಮ್ಮ ಮುಂದೆ ಶಾಸಕನ್ನಾಗಿ ಬಂದು ನಿಂತಿದ್ದೇನೆ. ಹೀಗಾಗಿ ನೀವು ಕಾಯಕ ಮಾಡುವ ಜೊತೆಗೆ ಹಡಪದ ಅಪ್ಪಣ್ಣನವರ ಆದರ್ಶ ಮೈಗೂಡಿಸಿಕೊಂಡು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ ಸಮಾಜದ ಸತ್ಪ್ರಜೆಗಳನ್ನಾಗಿ ಮಾಡಬೇಕೆಂದು ಕಿವಿಮಾತು ಹೇಳಿದರು.ಪ್ರತಿಯೊಬ್ಬರ ಜನರ ಕಾಯಕ ಮಾಡುವ ಈ ಸಮಾಜ  ಅನ್ಯಾಯಕ್ಕೊಳಗಾಗುತ್ತಿದ್ದರೂ ಯಾರು ಕೂಡ ಗಮನ ಹರಿಸುತ್ತಿಲ್ಲ. ಈ ಸಮಾಜ ೩ಎ ಮೀಸಲಾತಿಯಿಂದ ೨ಎ ಮೀಸಲಾತಿ ಸಿಕ್ಕರೆ ಸರ್ಕಾರದ ಸೌಲಭ್ಯಗಳು ಲಭಿಸಿ ಸಮಾಜ ಅಭಿವೃದ್ಧಿಯಾಗಲು ಸಹಕಾರಿಯಾಗುತ್ತದೆ. ಈ ಬಗ್ಗೆ ಸರ್ಕಾರಕ್ಕೆ ಒತ್ತಡ ತರಲಾಗುವುದು ಎಂದು ಭರವಸೆ ನೀಡಿದರು.ಇದೇ ವೇಳೆ ಸಮುದಾಯ ಭವನ ನಿರ್ಮಾಣಕ್ಕೆ ೫೦ ಲಕ್ಷ ರೂ. ಅನುದಾನ ನೀಡುವಂತೆ ಸಮಾಜದಿಂದ ಮನವಿ ಸಲ್ಲಿಸಲಾಯಿತು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಅನುದಾನ ಬಿಡುಗಡೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.