ನಾವು ನಮ್ಮನ್ನು ರಕ್ಷಿಸಿಕೊಳ್ಳುವುದರೊಂದಿಗೆ ಇತರರನ್ನು ರಕ್ಷಿಸೋಣ

ಮೂಡುಬಿದಿರೆ, ಎ.೨೭- ಕೊರೊನಾ ಹರಡದಂತೆ ಎಲ್ಲಾ ಗ್ರಾಮಗಳಲ್ಲಿ ಸ್ವಯಂಸೇವಕರನ್ನು ಒಳಗೊಂಡ ಸಮಿತಿಗಳನ್ನು ರಚಿಸುವುದು ಹಾಗೂ ಪ್ರತೀ ಗ್ರಾಮಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಕೇಂದ್ರಗಳನ್ನು ತೆರೆಯುವುದು.
ಒಂದು ತಿಂಗಳೊಳಗೆ ಎಲ್ಲರಿಗೂ ಕೊರೊನಾ ಲಸಿಕೆ ದೊರಕಿಸಿಕೊಡುವುದೆಂದು ಸೋಮವಾರ ಕನ್ನಡಭವನದಲ್ಲಿ ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಶಾಸಕ ಉಮಾನಾಥ
ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆದ ಮೂಡುಬಿದಿರೆ ತಾಲೂಕು ಮಟ್ಟದ ಕೊರೊನಾ
ಜಾಗೃತಿ ಸಭೆಯಲ್ಲಿ ನಿರ್ಧರಿಸಲಾಯಿತು.
ನಾವು ನಮ್ಮನ್ನು ರಕ್ಷಿಸಿಕೊಳ್ಳುವುದರೊಂದಿಗೆ ಇತರರನ್ನು ರಕ್ಷಿಸಬೇಕು. ಸರ್ಕಾರ ಜನತಾ ಕರ್ಪ್ಯೂ ವಿಧಿಸಿರುವುದರಿಂದ ಬದುಕು ಮತ್ತಷ್ಟು ಕಠಿಣವಾಗಲಿದ್ದು ಇದನ್ನು ಎದುರಿಸಬೇಕು ಎಂದು ಕೋಟ್ಯಾನ್ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ ಮಾತನಾಡಿ ಕೊರೊನಾ ಸೋಂಕು ಎದುರಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಸಣ್ಣ ರೋಗ ಲಕ್ಷಣಗಳು ಬಂದಾಗಲೇ ಸೂಕ್ತ ಚಿಕಿತ್ಸೆ ಪಡೆಯಲು ಪ್ರೇರೇಪಿಸಬೇಕು. ತಮ್ಮ ಸಂಸ್ಥೆಯ ಲಭ್ಯ ವೈದ್ಯಕೀಯ ತಂಡವನ್ನು ಈ ಕೆಲಸಕ್ಕೆ ನಿಯೋಜಿಸಲಾಗುವುದು ಹಾಗೂ ಎಲ್ಲರಿಗೂ ದೈಹಿಕ ಕ್ಷಮತೆಯನ್ನು ಹೆಚ್ಚಿಸುವ ಹೋಮಿಯೋಪಥಿ ಔಷಧಿಯನ್ನು ಉಚಿತವಾಗಿ ನೀಡುವುದಾಗಿ ಹೇಳಿದರು.
ಮದುವೆ ಸಹಿತ ಇತರ ಕಾರ್ಯಕ್ರಮಗಳಲ್ಲಿ ಜನರು ಕೊರೋನಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿರುವುದರಿಂದ ಕೊರೋನಾ ಹೆಚ್ಚುತ್ತಿದೆ. ತಾಲೂಕಿನಲ್ಲಿ ಪ್ರಸ್ತುತ ೧೨೦ ಪ್ರಕರಣಗಳು ಸಕ್ರಿಯವಾಗಿದ್ದು ಈ ಪೈಕಿ ೯೨ ಮಂದಿ ಮನೆಯಲ್ಲಿ ಹಾಗೂ ೨೨ ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ೧೧೨೦ ಮಂದಿ ಲಸಿಕೆ ಪಡೆದುಕೊಂಡಿದ್ದು ಇನ್ನೂ ೧೬ ಸಾವಿರ ಮಂದಿಗೆ ಬಾಕಿಯಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಸುಜಯ್ ಭಂಡಾರಿ ಮಾಹಿತಿ ನೀಡಿದರು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಮಾತನಾಡಿ ನಿರ್ಲಕ್ಷ್ಯದಿಂದಲೇ ಕೊರೊನಾ ಹೆಚ್ಚುತ್ತಿದ್ದು ಜನರಲ್ಲಿ ಜಾಗೃತಿ
ಮೂಡಿಸಬೇಕು. ಆರೋಗ್ಯದ
ಹಿತದೃಷ್ಟಿಯಿಂದ ಪರಿಸರ ಸ್ವಚ್ಛತೆಗೂ ಆದ್ಯತೆ ನೀಡಬೇಕು ಎಂದರು. ಪಾಲಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮನೀಷಾ, ಮೂಡುಬಿದಿರೆ ಸಮುದಾಯ ಆರೋಗ್ಯ
ಕೇಂದ್ರದ ವೈದ್ಯಾಧಿಕಾರಿ ಡಾ.ಶಶಿಕಲಾ ಅವರು ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರು.
ಪುರಸಭಾ ಮುಖ್ಯಾಧಿಕಾರಿ ಇಂದು ಎಂ. ಹಾಗೂ ವೃತ್ತನಿರೀಕ್ಷಕ ದಿನೇಶ್‌ಕುಮಾರ್ ಲಾಕ್‌ಡೌನ್ ಮತ್ತು ರಾತ್ರಿ ಕರ್ಫ್ಯೂ ಸಂದರ್ಭದಲ್ಲಿ ಇಲಾಖೆ ಕೈಗೊಂಡ ಕಾರ್ಯಯೋಜನೆಗಳ ಬಗ್ಗೆ ವಿವರ ನೀಡಿ ಸಹಕರಿಸುವಂತೆ ವಿನಂತಿಸಿದರು.
ತಹಸೀಲ್ದಾರ್ ಪುಟ್ಟುರಾಜು,
ತಾ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾವತಿ, ಜಿ.ಪಂ.ಸದಸ್ಯ ಕೆ.ಪಿ.ಸುಚರಿತ ಶೆಟ್ಟಿ, ಪುರಸಭಾಧ್ಯಕ್ಷ ಪ್ರಸಾದ್‌ಕುಮಾರ್, ತಾ.ಪಂ ಅಧ್ಯಕ್ಷೆ ರೇಖಾ ಸಾಲ್ಯಾನ್, ಮೂಡಾ ಅಧ್ಯಕ್ಷ ಮೇಘನಾಥ ಶೆಟ್ಟಿ, ಸ್ಥಳೀಯ ಉದ್ಯಮಿ ಶ್ರೀಪತಿ ಭಟ್, ಚೌಟರ ಅರಮನೆಯ ಕುಲದೀಪ್ ಎಂ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜೆಡಿಎಸ್ ಮುಖಂಡ ದಿವಾಕರ ಶೆಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷ ಸುನಿಲ್ ಆಳ್ವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಪ್ರೆಸ್‌ಕ್ಲಬ್ ಅಧ್ಯಕ್ಷ ವೇಣುಗೋಪಾಲ್, ಬೆಳುವಾಯಿ ಭಾಸ್ಕರ ಆಚಾರ್ಯ, ಹಿರಿಯ ವಕೀಲ ಕೆ.ಆರ್.ಪಂಡಿತ್, ಲಕ್ಷ್ಮಣ್ ಬನ್ನಡ್ಕ ಮತ್ತಿತರರು ಸಲಹೆ ನೀಡಿದರು. ಗೋಪಾಲ್ ಶೆಟ್ಟಿಗಾರ್ ಕಾರ್ಯಕ್ರಮ ನಿರ್ವಹಿಸಿದರು.