ನಾಳೆ ಹೋಮಿಯೋಪಥಿ ಭವನ ಉದ್ಘಾಟನೆ: ಡಾ. ರುದ್ರೇಶ್ ಕನಸು ನನಸು

ಬೆಂಗಳೂರು, ಎ. ೧೯- ಖ್ಯಾತ ವೈದ್ಯ ಡಾ. ಬಿ.ಟಿ. ರುದ್ರೇಶ್ ಅವರ ಬಹುದಿನಗಳು ಕನಸು ನಾಳೆ ನನಸಾಗಲಿದೆ.
ನಗರದ ಕೆಹೆಚ್‌ಬಿ. ಕಾಲೋನಿಯಲ್ಲಿ ತಲೆ ಎತ್ತಿರುವ ಹೋಮಿಯೋಪತಿ ಭವನ ನಾಳೆ ಲೋಕಾರ್ಪಣೆಯಾಗಲಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಈ ಭವನವನ್ನು ನಾಳೆ ಲೋಕಾರ್ಪಣೆಗೊಳಿಸಲಿದ್ದಾರೆ.
ಕರ್ನಾಟಕ ಹೋಮಿಯೋಪತಿ ಮಂಡಳಿಗೆ ಸ್ವಂತ ಸೂರು ಕಲ್ಪಿಸಬೇಕೆಂಬುದು ಡಾ. ಬಿ.ಟಿ. ರುದ್ರೇಶ್ ಅವರ ಸಂಕಲ್ಪವಾಗಿತ್ತು. ಈ ಸಂಕಲ್ಪ ಕಾರ್ಯರೂಪಕ್ಕೆ ತರಲು ಅವರು ಪಟ್ಟ ಶ್ರಮ ಅಪಾರ. ದೇಶದಲ್ಲೇ ಹೋಮಿಯೋಪತಿ ಮಂಡಳಿ ಹೊಂದಿರುವ ಮೊದಲ ಹೋಮಿಯೋ ಭವನ ಇದಾಗಿದ್ದು ನಾಡೋಜ ಬಿ.ಟಿ. ರುದ್ರೇಶ್ ಅವರ ಕನಸಿನ ಕೂಸಾಗಿದೆ.
ಸುಮಾರು ೧ ಕೋಟಿ ರೂ. ವೆಚ್ಚದಲ್ಲಿ ಈ ಭವನವನ್ನು ನಿರ್ಮಾಣ ಮಾಡಲಾಗಿದೆ. ಹೋಮಿಯೋಪತಿ ಮಂಡಳಿಯ ಚುನಾಯಿತ ಅಧ್ಯಕ್ಷರಾಗಿ ಕಳೆದ ೮ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಡಾ. ಬಿ.ಟಿ.ಆರ್. ಹೋಮಿಯೋಪತಿ ಚಿಕಿತ್ಸಾ ವಿಧಾನ ಜನಪ್ರಿಯಗೊಳ್ಳಲು ಕಾರಣಿಭೂತರಾಗಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ನಗರದ ಮೆಜೆಸ್ಪಿಕ್ ಪ್ರದೇಶದಲ್ಲಿ ಹೋಮಿಯೋಪತಿ ಮಂಡಳಿ ಕಾರ್ಯ ನಿರ್ವಹಿಸುತ್ತಿದ್ದು, ಈಗ ಮಾಗಡಿ ರಸ್ತೆಯಲ್ಲಿ ತಲೆ ಎತ್ತಿರುವ ಸುಸಜ್ಜಿತ ಭವನಕ್ಕೆ ಸ್ಥಳಾಂತರವಾಗಲಿದೆ.
ಹೋಮಿಯೋಪತಿ ವೈದ್ಯರ ನೋಂದಣಿ, ರಕ್ಷಣೆ ಯೋಗಕ್ಷೇಮ ವೃತ್ತಿ ಪರತೆ ಕಾಪಾಡುವುದು ಸೇರಿದಂತೆ ಮತ್ತಿತರ ವಿಚಾರಗಳ ಬಗ್ಗೆ ಗಮನಹರಿಸಲು ಹೋಮಿಯೋಪತಿ ಮಂಡಳಿ ಸ್ಥಾಪಿಸಲಾಗಿದೆ.
ಕಳೆದ ೮ ವರ್ಷಗಳಿಂದ ಹೋಮಿಯೋಪತಿ ಮಂಡಳಿಯ ಅಧ್ಯಕ್ಷರಾಗಿರುವ ಡಾ. ಬಿ.ಟಿ. ರುದ್ರೇಶ್ ಅವರು ಈ ಭವನಕ್ಕೆ ತಗುಲಿರುವ ೧ ಕೋಟಿ ರೂ.ಗಳನ್ನು ಸ್ವಂತ ಪರಿಶ್ರಮದಿಂದಲೇ ಹೊಂದಿಸಿದ್ದಾರೆ. ಪ್ರತಿ ತಿಂಗಳ ವೇತನವನ್ನು ಭವನ ನಿರ್ಮಾಣಕ್ಕೆ ವಿನಿಯೋಗಿಸಿ ಸುಮಾರು ೪೫ ಲಕ್ಷ ರೂ.ಗಳನ್ನು ವೆಚ್ಚ ಮಾಡಿದ್ದಾರೆ. ಜೊತೆಗೆ ಸರ್ಕಾರ ಕಾರಣ– ವೆಚ್ಚ ೧೫ ಲಕ್ಷ ರೂ. ಮತ್ತಿತರ ಬಾಬ್ತಿನಿಂದ ಹಣ ಸರಿದೂಗಿಸಿ ತಮ್ಮ ಕನಸಿನ ಭವನ ಸಾಕಾರಗೊಳ್ಳಲು ಕಾರಣಕರ್ತರಾಗಿದ್ದಾರೆ.
ರಾಜ್ಯದಲ್ಲಿ ಸುಮಾರು ೧೫ ಸಾವಿರ ನೋಂದಾಯಿತ ಹೋಮಿಯೋಪತಿ ಪದವೀಧರರು ಇದ್ದು ಇವರಿಗೆಲ್ಲಾ ನೋಂದಣಿ, ಎಂ.ಡಿ. ಪದವೀಧರರಿಗೂ ನೋಂದಣಿ ನೀಡುವುದು ಮಂಡಳಿಯ ಮುಖ್ಯ ಕೆಲಸವಾಗಿದೆ.
ವೈದ್ಯಕೀಯ ವೃತ್ತಿ ಬೋಧನೆಗೆ ಈ ಕಟ್ಟಡವನ್ನು ಸದ್ದವಿನಿಯೋಗಗೊಳಿಸಲು ಉದ್ದೇಶಿಸಿದ್ದಾರೆ. ಆಡಳಿತ ಕಚೇರಿ ಅಂತೆಯೇ ೨೦೦ ಮಂದಿಗೆ ಆಸನ ವ್ಯವಸ್ಥೆಯ ಸುಸಜ್ಜಿತ ಸಭಾಂಗಣವನ್ನು ಈ ಭವನ ಒಳಗೊಂಡಿದೆ.
ಈ ಭವನವನ್ನು ನಾಳೆ ಮಧ್ಯಾಹ್ನ ೧೨ ಗಂಟೆಗೆ ಉದ್ಘಾಟಿಸಲಿದ್ದು, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಯುಷ್ ಇಲಾಖೆಯ ಆಯುಕ್ತರಾದ ಮೀನಾಕ್ಷಿ ನೇಗಿ ಮತ್ತಿತರರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.