ನಾಳೆ ಹಿಂದುಳಿದ ವರ್ಗಗಳ ಸಮಾವೇಶ

ಸಂಜೆವಾಣಿ ನ್ಯೂಸ್
ಮೈಸೂರು:ಏ.21:- ನಾಳೆ ಮೈಸೂರಿನಲ್ಲಿ ಹಿಂದುಳಿದ ವರ್ಗಗಳ ಸಮಾವೇಶ ಆಯೋಜನೆ ಮಾಡಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಮಾವೇಶ ಉದ್ಘಾಟನೆ ಮಾಡಲಿದ್ದಾರೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ತಿಳಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಘು ಕೌಟಿಲ್ಯ, ಹಿಂದುಳಿದ ಸಮುದಾಯಗಳು ಈ ಬಾರಿ ಬಿಜೆಪಿಯನ್ನ ಬೆಂಬಲಿಸುತ್ತವೆ. ಕಾಂಗ್ರೆಸ್ ಸರ್ಕಾರದಿಂದ ಹಿಂದುಳಿದ ಸಮುದಾಯಕ್ಕೆ ಯಾವುದೇ ಕೊಡುಗೆ ಕೊಟ್ಟಿಲ್ಲ. ಗ್ಯಾರಂಟಿ ಮೂಲಕ ಸಣ್ಣ ಸಮುದಾಯದ ಆರ್ಥಿಕ ಬೆಳವಣಿಗೆಗೆ ಹಿನ್ನೆಡೆ ಉಂಟು ಮಾಡಿದೆ. ಸಿದ್ದರಾಮಯ್ಯನವರು ನಾನು ಹಿಂದುಳಿದ ನಾಯಕ ಎನ್ನುತ್ತಾರೆ. ಆದರೆ ಹಿಂದುಳಿದ ಸಮಾಜದ ನಿಗಮಗಳಿಗೆ ಒಂದು ರೂಪಾಯಿ ಅನುದಾನ ನೀಡಿಲ್ಲ ಎಂದು ಕಿಡಿಕಾರಿದರು.
ಕಾವೇರಿ ನೀರನ್ನು ಬೇರೆಯವರಿಗೆ ಕೊಟ್ಟು ರೈತರಿಗೆ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಪಕ್ಷ ತನ್ನ ಭಾಗ್ಯಗಳ ಭ್ರಮೆಯಲ್ಲಿ ಸಮುದಾಯಗಳ ಹಿತಾಸಕ್ತಿ ಸಂಪೂರ್ಣ ಕಡೆಗಣಿಸಿದೆ. ಕಾಯಕ ಸಮುದಾಯಗಳಿಗೆ ಚೆಂಬೂ ನೀಡಿದೆ. ನಿಗಮಗಳಿಗೆ ಒಂದು ರೂಪಾಯಿ ನೀಡಿಲ್ಲವೆಂದು ಕಿಡಿಕಾರಿದರು.
ವಸ್ತು ಪ್ರದರ್ಶನ ಆವರಣದಲ್ಲಿ ಬೆ.11.30ಕ್ಕೆ ಸಮಾವೇಶ ನಡೆಯಲಿದ್ದು, ಕಾಯಕ ಸಮಾಜಗಳೆಲ್ಲವೂ ಭಾಗವಹಿಸಲಿದ್ದು, ಅಲ್ಲಿ ಕಾಂಗ್ರೆಸ್ ನಿಜ ಬಣ್ಣವನ್ನು ಜನತೆಮುಂದೆ ತೆರೆದಿಡುತ್ತೇವೆಂದರು. ಬಾಬು ಪತ್ತಾರ್, ಗಾಣಿಗ ಚನ್ನಕೇಶವ, ನೇಕಾರ ಚೆಲುವರಾಜ, ರಶ್ಮಿ, ಜಗದೀಶ್ ಇತರರು ಇದ್ದರು.