ನಾಳೆ ಹನೂರು ಪಪಂ ಅಧ್ಯಕ್ಷರು, ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ

ಹನೂರು, ನ.6: ಪಟ್ಟಣ ಪಂಚಾಯಿತಿ ಅಧಿಕಾರದ ಗದ್ದುಗೆಯನ್ನು ಹಿಡಿಯಲು ಗುದ್ದಾಟ ಶುರುವಾಗಿದೆ. ಪ.ಪಂ.13 ವಾರ್ಡ್‍ಗಳಿಗೆ ಚುನಾವಣೆ ನಡೆದು ವರ್ಷಗಳು ಕಳೆದಿದ್ದರೂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿರಲಿಲ್ಲ. ಇದೀಗಾ ಇದೇ ತಿಂಗಳ ನ.7 ರಂದು ಈ ಎರಡು ಸ್ಥಾನಗಳಿಗೆ ಚುನಾವಣೆ ನಡೆಯಲಿರುವುದರಿಂದ ಅಧಿಕಾರದ ಗದ್ದುಗೆಯನ್ನು ಹಿಡಿಯಲು ನಾನಾ ಕಸರತ್ತುಗಳು ನಡೆಯುತ್ತಿವೆ.
ಪ.ಪಂ.ಚುನಾವಣೆಯಲ್ಲಿ ಜನತೆ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತವನ್ನು ನೀಡಿರಲಿಲ್ಲ. 13 ಸ್ಥಾನಗಳ ಪೈಕಿ ಜೆಡಿಎಸ್ 6, ಕಾಂಗ್ರೇಸ್ 4, ಬಿಜೆಪಿ 3 ಸ್ಥಾನಗಳನ್ನು ಗಳಿಸಿದ ಹಿನ್ನಲೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು. ಈ ಪೈಕಿ 2ನೇ ವಾರ್ಡ್‍ನಿಂದ ಸ್ಪರ್ಧಿಸಿ ಜಯಗಳಿಸಿದ್ದ ನಾಗರಾಜು ಎಂಬುವರು ನಿಧನರಾದ ಹಿನ್ನಲೆಯಲ್ಲಿ 12 ಸ್ಥಾನಗಳು ಮಾತ್ರ ಉಳಿದಿವೆ. ಅಧಿಕಾರ ಹಿಡಿಯಲು 7 ಮತಗಳ ಅವಶ್ಯಕತೆ ಇದೆ. ಆದರೆ ಯಾವ ಪಕ್ಷಗಳಲ್ಲಿಯೂ 7 ಸ್ಥಾನಗಳು ಇಲ್ಲದೇ ಇರುವುದು ಅಂತ್ರತ ಸ್ಥಿತಿಗೆ ತಂದೊಡ್ಡಿದೆ.
ಕಾಂಗ್ರೇಸ್ ಮತ್ತು ಬಿಜೆಪಿ ಮೈತ್ರಿ? : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಒಂದು ತಿಂಗಳ ಕಾಲದಲ್ಲಿ ರಾಜಕೀಯಕ್ಕೆ ಕಾಲಿಟ್ಟು 44 ಸಾವಿರ ಮತಗಳನ್ನು ಪಡೆಯುವ ಮೂಲಕ ಕಾಂಗ್ರೇಸ್ ಮತ್ತು ಬಿಜೆಪಿ ಅಭ್ಯರ್ಥಿಗಳಾಗಿದ್ದ ಶಾಸಕ ಆರ್.ನರೇಂದ್ರ, ಪರಾಜಿತ ಬಿಜೆಪಿ ನಾಯಕ ಪ್ರೀತನ್‍ನಾಗಪ್ಪನವರ ಪಾಲಿಗೆ ಮಗ್ಗಲು ಮುಳ್ಳಾಗಿದ್ದ ಆರ್.ಮಂಜುನಾಥ್ ತದ ನಂತರವೂ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಮೊಕ್ಕಂ ಹೂಡಿ ಬರೊಬ್ಬರಿ 6 ಸ್ಥಾನಗಳನ್ನು ಗಳಿಸಿ ಎರಡು ರಾಷ್ಟ್ರೀಯ ಪಕ್ಷಗಳ ನಾಯಕರ ಮುಖಭಂಗಕ್ಕೆ ಕಾರಣರಾಗಿದ್ದ ಹಿನ್ನಲೆಯನ್ನು ಅರಿತಿರುವ ಕಾಂಗ್ರೆಸ್ ಮತ್ತು ಬಿಜೆಪಿ ವರಿಷ್ಠರು ಮಂಜುನಾಥ್ ನೇತೃತ್ವದ ಜೆಡಿಎಸ್ ಅಧಿಕಾರವನ್ನು ವಹಿಸಲು ಅವಕಾಶ ಮಾಡಿಕೊಡದಿರುವ ನಿಟ್ಟಿನಲ್ಲಿ ತಮ್ಮ ರಾಜಕೀಯ ಬದ್ಧತೆಯನ್ನು ಮರೆತು ಮೈತ್ರಿಗೆ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಹೀಗಾಗಲೇ ಬಿಜೆಪಿ ಮತ್ತು ಕಾಂಗ್ರೇಸ್‍ನ ಸದಸ್ಯರುಗಳನ್ನು ರೆಸಾರ್ಟ್‍ಗೆ ಕರೆದೊಯ್ಯುವ ಮೂಲಕ ಮೈತ್ರಿ ಆಡಳಿತಕ್ಕೆ ಮಣೆ ಹಾಕುತ್ತಿದ್ದಾರೆ ಎನ್ನಲಾಗಿದೆ.
ವಿಶೇಷತೆಗಳಿಗೆ ಸಾಕ್ಷಿಯಾಗಲಿದೆ ಹನೂರು ಪ.ಪಂ:
ಹನೂರು ಪ.ಪಂ. ಆಗುವ ಮುನ್ನ ಗ್ರಾ.ಪಂ. ಆಡಳಿತ ಹೊಂದಿತ್ತು. ವಿಶೇಷ ಎಂದರೆ ಗ್ರಾ.ಪಂ. ಹಾಗೂ ಪ.ಪಂ.ಆದ ಇಲ್ಲಿಯವರೆಗೆ ಕಾಂಗ್ರೇಸ್ ಭದ್ರ ಕೋಟೆ ಎನಿಸಿಕೊಂಡಿದ್ದ ಕಾಂಗ್ರೇಸ್ ಬಿಟ್ಟು ಅಧಿಕಾರವನ್ನು ಹಿಡಿಯುವಲ್ಲಿ ಯಾವ ಪಕ್ಷಗಳು ಯಶಸ್ವಿಯಾಗಿರಲಿಲ್ಲ. ಈ ಬಾರಿ ಕಾಂಗ್ರೇಸ್ ಸ್ವತಂತ್ರವಾಗಿ ಅಧಿಕಾರ ಹಿಡಿಯಲು ಸಾಧ್ಯವಾಗದೇ ಇರುವುದರಿಂದ ಮೈತ್ರಿ ಆಡಳಿತಕ್ಕೆ ಸಾಕ್ಷಿಯಾಗುವ ನಿರೀಕ್ಷೆ ಇದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬದ್ಧ ವೈರಿಗಳಂತೆ ಬಿಜೆಪಿ ಮತು ್ತಕಾಂಗ್ರೇಸ್ ಪಕ್ಷಗಳು ಇದ್ದರೆ, ಮತ್ತೊಂದಡೆ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ನೇರಾ ಹಣಾಹಣಿ ನಡೆಸುತ್ತಾ ರಾಜಕೀಯ ಮಾಡುತ್ತಾ ಬಂದಿರುವ ಎರಡು ಕುಟುಂಬಗಳು ಸದಸ್ಯರುಗಳು ಮೊದಲ ಬಾರಿಗೆ ಅನಿವಾರ್ಯವಾಗಿ ಮೈತ್ರಿಗೆ ಮುಂದಾಗುತ್ತಿರುವುದು ವಿಶೇಷವಾಗಿದೆ.
ರಾಜಕೀಯ ವಲಯದಲ್ಲಿ ಕುತೂಹಲ ಮತ್ತು ಸಂಚಲನ: ಹನೂರು ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಘಟಾನುಘಟಿ ದಿಗ್ಗಜ ನಾಯಕರು ಎನಿಸಿಕೊಂಡ ದಿ.ಹೆಚ್.ನಾಗಪ್ಪ ಹಾಗೂ ದಿ.ಜಿ.ರಾಜೂಗೌಡ ಕುಟುಂಬ ಹಿಂದಿನಿಂದಲೂ ಬದ್ಧ ವೈರಿಗಳು. ಅವರ ತರುವಾಯ ಕೂಡ ಈ ಎರಡು ಮನೆತನದ ಸದಸ್ಯರುಗಳಾದ ಮಾಜಿ ಶಾಸಕಿ ಪರಿಮಳನಾಗಪ್ಪ, ಪ್ರೀತನ್‍ನಾಗಪ್ಪ, ಆರ್.ನರೇಂದ್ರ ಚುನಾವಣೆಗಳಲ್ಲಿ ಎದುರಾಳಿಗಳಾಗಿ ಸೆಣಸಾಡಿದವರು. ಈ ಎರಡು ಮನೆತನಗಳು ತಮ್ಮದೇ ಆದ ನಿಷ್ಟಾವಂತ ಮುಖಂಡರುಗಳು ಹಾಗೂ ಕಾರ್ಯಕರ್ತರನ್ನು ಹೊಂದಿವೆ. ಇಂತಹ ಸಂದರ್ಭದಲ್ಲಿ ಪ.ಪಂ.ಅಧಿಕಾರದ ಗದ್ದುಗೆಯನ್ನು ಹಿಡಿಯುವ ಏಕೈಕ ಕಾರಣಕ್ಕೆ ತಮ್ಮ ರಾಜಕೀಯ ಬದ್ಧತೆಯನ್ನು ಬದಿಗೊತ್ತಿ ಮೈತ್ರಿಯತ್ತ ಚಿತ್ತ ಹರಿಸುತ್ತಿರುವುದು ನಿಜಕ್ಕೂ ಮುಂಬರುವ ಗ್ರಾ.ಪಂ.ಚುನಾವಣೆ ಹಾಗೂ ಇನ್ನಿತರೆ ಚುನಾವಣೆಗಳ ಮೇಲೆ ಯಾವ ರೀತಿ ಪರಿಣಾಮ ಬೀಳಲಿದೆ ಎಂಬುದು ಕುತೂಹಲ ಮತ್ತು ಸಂಚಲನಕ್ಕೆ ಕಾರಣವಾಗಿದೆ.
ಶಾಸಕರು ಮತ್ತು ಮಾಜಿ ಶಾಸಕಿ ನಡುವೆ ಮಾತುಕತೆ ನಡೆದಿರುವುದು ಸತ್ಯಕ್ಕೆ ದೂರವಾದದ್ದು:
ಬದ್ಧ ವೈರಿಗಳಾಗಿ ಪ್ರತಿ ಬಾರಿಯ ವಿಧಾನಸಭಾ ಚುನಾವಣೆಯನ್ನು ಎದುರಿಸಿರುವ ಶಾಸಕ ಆರ್.ನರೇಂದ್ರ ಹಾಗೂ ಮಾಜಿ ಶಾಸಕಿ ಪರಿಮಳನಾಗಪ್ಪ ಪ.ಪಂ.ಅಧಿಕಾರ ಹಿಡಿಯಲು ಮಾತುಕತೆ ನಡೆಸಿರುವುದು ಸತ್ಯಕ್ಕೆ ದೂರವಾದದ್ದು ಎಂದು ಹನೂರು ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಮಹಾಲಿಂಗನಕಟ್ಟೆ ಸಿದ್ದಪ್ಪ ಸ್ಪಷ್ಟಪಡಿಸಿದ್ದಾರೆ.
ಪ.ಪಂ.ಮೈತ್ರಿ ವಿಚಾರದ ಬಗ್ಗೆ ಮಾತನಾಡಿರುವ ಸಿದ್ದಪ್ಪ, ಮಾಜಿ ಶಾಸಕಿಯರೇ ಆಗಲಿ ಯಾರೇ ಆಗಲಿ ಪಾರ್ಟಿಯ ಸಿದ್ದಾಂತದಂತೆ ಕಾರ್ಯನಿರ್ವಹಿಸಬೇಕಾಗಿದೆ. ಪಟ್ಟಣ ಪಂಚಾಯಿತಿ ಅಧ್ಯಕ್ಷರ ಚುನಾವಣೆ ವಿಚಾರದಲ್ಲಿ ಹನೂರು ಸ್ಥಳಿಯ ಮುಖಂಡರ ಅಭಿಪ್ರಾಯ ಪ್ರಮುಖವಾಗಿದೆ. ಈ ಹಿನ್ನಲೆಯಲ್ಲಿ ಈಗಾಗಲೇ ಮುಖಂಡರುಗಳ ಸಹಿಯೊಂದಿಗೆ ಜಿಲ್ಲಾ ಕಮಿಟಿಗೆ ಕಳುಹಿಸಿ ಕೊಡಲಾಗಿದೆ. ಜಿಲ್ಲಾ ಕಮಿಟಿ ರಾಜ್ಯ ಕಮಿಟಿಗೆ ಕಳುಹಿಸಿ ಕೊಡಲಿದ್ದು, ರಾಜ್ಯ ಕಮಿಟಿಯ ಅಭಿಪ್ರಾಯದಂತೆ ಹೆಜ್ಜೆ ಇಡಲಾಗುವುದು. ಮುಂಬರುವ ತಾ.ಪಂ. ಹಾಗೂ ಜಿ.ಪಂ.ಚುನಾವಣೆ ಇರುವುದರಿಂದ ಮೈತ್ರಿಯ ಮಾತಿಲ್ಲ ಎಂದಿದ್ದಾರೆ.