ನಾಳೆ ಸ್ಪಂದನಾ ಅಂತ್ಯಕ್ರಿಯೆ

ಬೆಂಗಳೂರು,ಆ.೮- ಬ್ಯಾಂಕಾಕ್‌ನಲ್ಲಿ ಹೃದಾಯಾಘಾತದಿಂದ ನಿಧನರಾದ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಪಾರ್ಥೀವ ಶರೀರದ ಅಂತ್ಯಕ್ರಿಯೆ ನಾಳೆ ಮಧ್ಯಾಹ್ನದ ನಂತರ ನಡೆಯುವ ಸಾಧ್ಯತೆಗಳಿವೆ.ಸ್ಪಂದನಾ ಅವರ ತಂದೆ ಬಿ.ಕೆ ಶಿವರಾಮ್ ಅವರ ಫಾರ್ಮ್‌ಹೌಸ್‌ನಲ್ಲಿ ಅಂತ್ಯಕ್ರಿಯೆ ನಡೆಸಲು ಕುಟುಂಬದ ಮೂಲಗಳು ನಿರ್ಧರಿಸಿವೆ ಎಂದು ಹೇಳಲಾಗಿದ್ದು ಅಂತಿಮವಾಗಿ ವಿಜಯ ರಾಘವೇಂದ್ರ ಅವರೊಂದಿಗೆ ಚರ್ಚೆ ನಡೆಸಿ ಅಂತ್ಯಕ್ರಿಯೆ ಸ್ಥಳ ನಿಗದಿ ಪಡಿಸಲಾಗುವುದು ಎಂದು ತಿಳಿಸಲಾಗಿದೆ.
ಬ್ಯಾಂಕಾಕ್‌ನಿಂದ ಇಂದು ಸಂಜೆ ಅಥವಾ ರಾತ್ರಿ ವೇಳೆ ಸ್ಪಂದನ ಪಾರ್ಥೀವ ಶರೀರವನ್ನು ಬೆಂಗಳೂರಿಗೆ ತರಲಿದ್ದು ಮಲ್ಲೇಶ್ವರಂನಲ್ಲಿರುವ ಬಿಕೆ ಶಿವರಾಮ್ ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲು ನಿರ್ಧರಿಸಲಾಗಿದೆ.ಪಾರ್ಥೀವ ಶರೀರದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ಬಾಂಕಾಕ್‌ನಿಂದ ಮೃತ ದೇಹವನ್ನು ತರಲು ಕೆಲ ಕಾನೂನು ಪ್ರಕ್ರಿಯೆ ಇರುವುದರಿಂದ ಮೃತ ತರುವುದು ವಿಳಂಬವಾಗುತ್ತಿದೆ ಎನ್ನಲಾಗಿದೆ.ಈ ಮುಂಚೆ ಇಂದು ಮಧ್ಯಾಹ್ನದ ವೇಳೆ ಪಾರ್ಥಿವ ಶರೀರದ ತರಲಾಗುತ್ತಿದೆ ಎನ್ನಲಾಗಿದ್ದು, ಕಾನೂನು ಪ್ರಕ್ರಿಯೆ ವಿಳಂಬ ಹಿನ್ನೆಲೆಯಲ್ಲಿ ರಾತ್ರಿ ೧ ಗಂಟೆಯ ಸುಮಾರಿಗೆ ವಿಶೇಷ ವಿಮಾನದ ಮೂಲಕ ಪಾರ್ಥೀವ ಶರೀರ ತರಲು ನಿರ್ಧರಿಸಲಾಗಿದೆ.
ನಾಳೆ ಮಧ್ಯಾಹ್ನದವರೆಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಿದ್ದು ಆ ನಂತರ ಈಡಿಗ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಸಲು ನಿರ್ಧರಿಸಿದ್ದಾರೆ.ಸ್ಪಂದನ ನಿಧನರಾಗಿದ್ದಾರೆ ಎನ್ನುವ ಮಾಹಿತಿ ತಿಳಿಯುತ್ತಿದ್ದಂತೆ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ ಶಿವರಾಮ್ ಸೇರಿದಂತೆ ಕುಟುಂಬದ ಸದಸ್ಯರು ನಿನ್ನೆಯೇ ಬ್ಯಾಂಕಾಕ್‌ಗೆ ತೆರಳಿದ್ದರು. ಎಲ್ಲಾ ಕಾನೂನು ಪ್ರಕ್ರಿಯೆ ಮುಗಿಸಿಕೊಂದು ಇಂದು ಸಂಜೆ ಅಥವಾ ರಾತ್ರಿ ವೇಳೆಗೆ ಸ್ಪಂದನ ಅವರ ಪಾರ್ಥೀವ ಶರೀರ ಬೆಂಗಳೂರಿಗೆ ಬರಲಿದೆ ಎನ್ನಲಾಗಿದೆ.
ಚಿತ್ರರಂಗ ಕಂಬನಿ:
ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ನಿಧನಕ್ಕೆ ಇಡೀ ಚಿತ್ರರಂಗ ಕಂಬನಿ ಮಿಡಿದು, ವಿಜಯ ರಾಘವೇಂದ್ರ ಅವರ ಪರಿಸ್ಥಿತಿಯನ್ನು ನೆನಪು ಕಣ್ಣೀರಿಟ್ಟಿದ್ದಾರೆ.
ಚಿತ್ರರಂಗದಲ್ಲಿ ಚಿನ್ನಾರಿ ಮುತ್ತ ಎಂದೇ ಖ್ಯಾತಿ ಪಡೆದಿರುವ ವಿಜಯ ರಾಘವೇಂದ್ರ ಎಲ್ಲರ ಅಚ್ಚು ಮೆಚ್ಚು. ಪತ್ನಿ ಕಳೆದುಕೊಂಡು ನೋವಿನಲ್ಲಿರುವ ವಿಜಯ್ ರಾಘವೇಂದ್ರ ಮತ್ತು ದುಃಖದಲ್ಲಿರುವ ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳಿದ್ದಾರೆ.