ನಾಳೆ ಸೌಹಾರ್ದ ಸಂಯುಕ್ತ ಸಹಕಾರಿ ಆಡಳಿತ ಮಂಡಳಿ ಚುನಾವಣೆ

ತುಮಕೂರು, ಜು. ೨೩- ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಆಡಳಿತ ಮಂಡಳಿ ಸದಸ್ಯರ ಚುನಾವಣೆ ಜೂ. ೨೪ ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಬಿ.ಹೆಚ್. ಕೃಷ್ಣಾರೆಡ್ಡಿ ನೇತೃತ್ವದಲ್ಲಿ ಆಡಳಿತ ಮಂಡಳಿತ ಚುನಾವಣೆ ಕುರಿತು ನಗರದಲ್ಲಿ ಸಭೆ ನಡೆಸಲಾಯಿತು.
ಪ್ರಸ್ತುತ ಐದು ವರ್ಷಗಳ ಅವಧಿ ಮುಗಿದಿರುವುದರಿಂದ ಸಂಯುಕ್ತ ಸಹಕಾರಿಯ ಚುನಾವಣಾ ಪ್ರಕ್ರಿಯೆ ಜಾರಿಯಲ್ಲಿದ್ದು, ಜು. ೨೪ ರಂದು ಮತದಾನ ನಿಗದಿಯಾಗಿದೆ. ಅರ್ಹ ಮತದಾರರ ಪಟ್ಟಿಯಲ್ಲಿ ೨೮೦೮ ಜನ ಮತದಾರರಿದ್ದು, ನಾಲ್ಕು ಪ್ರಾಂತ್ಯಗಳಿಂದ ೨೧ ಮಂದಿ ಆಡಳಿತ ಮಂಡಳಿ ಸದಸ್ಯರನ್ನು ಆಯ್ಕೆ ಮಾಡಬೇಕಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಜು. ೨೪ ರಂದು ಮತದಾನ ಪ್ರಕ್ರಿಯೆಯು ಬೆಂಗಳೂರಿನ ಮಲ್ಲೇಶ್ವರಂನ ೧೧ನೇ ಮುಖ್ಯ ರಸ್ತೆ ೧೮ನೇ ಅಡ್ಡ ರಸ್ತೆಯಲ್ಲಿರುವ ನಿರ್ಮಲಾ ರಾಣಿ ಪ್ರೌಢಶಾಲೆಯಲ್ಲಿ ನಡೆಯಲಿದೆ. ಮತದಾನದ ನಂತರ ಅದೇ ದಿನ ಮತ ಎಣಿಕೆ ಕಾರ್ಯ ನಡೆದು ಫಲಿತಾಂಶವೂ ಪ್ರಕಟವಾಗಲಿದೆ ಎಂದು ಕೃಷ್ಣಾರೆಡ್ಡಿ ಸಭೆಯಲ್ಲಿ ತಿಳಿಸಿದರು.
ಸಂಯುಕ್ತ ಸಹಕಾರಿಯ ಆಡಳಿತ ಮಂಡಳಿಯ ನಿಗದಿತ ೨೧ ನಿರ್ದೇಶಕರುಗಳ ಆಯ್ಕೆಯನ್ನು ಪ್ರಾಂತೀಯವಾರು ಸಹಕಾರಿಗಳ ಸಂಖ್ಯೆಗಳ ಆಧಾರದ ಮೇಲೆ ವಿಂಗಡಿಸಲಾಗಿದೆ. ಬೆಂಗಳೂರು ವಿಭಾಗದಿಂದ ೬ ಜನ, ಮೈಸೂರು ವಿಭಾಗದಿಂದ ೨ ಜನ, ಬೆಳಗಾವಿ ವಿಭಾಗದಿಂದ ೭ ಜನ, ಕಲ್ಬುರ್ಗಿ ವಿಭಾಗದಿಂದ ೬ ಜನ ಹೀಗೆ ಪ್ರಾಂತವಾರು ವಿಂಗಡಿಸಲಾಗಿದೆ. ಹಾಗಾಗಿ ಮತದಾರರು ಪ್ರಾಂತೀಯವಾಗಿಯೇ ಮತದಾನ ಮಾಡಬೇಕಾಗಿದೆ ಎಂದು ಹೇಳಿದರು.
ಸಹಕಾರಿಯ ಆಡಳಿತ ಮಂಡಳಿಯ ಚುನಾವಣೆ ಪ್ರತಿ ೫ ವರ್ಷಕ್ಕೆ ಒಂದು ಬಾರಿ ನಡೆಯುತ್ತದೆ. ರಾಜ್ಯದ ನಾಲ್ಕು ಕಂದಾಯ ವಿಭಾಗಗಳಿಂದ ೨೧ ನಿರ್ದೇಶಕರನ್ನು ಚುನಾವಣೆಯಲ್ಲಿ ಆಯ್ಕೆ ಮಾಡಬೇಕಾಗಿದೆ. ಅರ್ಹ ಮತದಾರರ ಪಟ್ಟಿಯಲ್ಲಿರುವ ಸೌಹಾರ್ದ ಸಹಕಾರಿಗಳ ಡೆಲಿಗೇಟ್‌ಗಳು ಈ ಚುನಾವಣೆಯಲ್ಲಿ ಮತದಾನ ಮಾಡಬೇಕು ಎಂದು ಅವರು ಮನವಿ ಮಾಡಿದರು.
ಬೆಂಗಳೂರು ವಿಭಾಗದಿಂದ ಸಹಕಾರ ಭಾರತಿ ನೇತೃತ್ವದಲ್ಲಿ ೬ ಜನ ಅಭ್ಯರ್ಥಿಗಳಾದ ಕೃಷ್ಣರೆಡ್ಡಿ, ಬಿ.ಎಸ್.ಗುಂಡುರಾವ್, ಎಂ.ಆರ್. ಪ್ರಭುದೇವ್, ಎ.ಆರ್. ಪ್ರಸನ್ನಕುಮಾರ್, ರಘುರಾಮರೆಡ್ಡಿ, ವಿಜಯ್ ಸಿ.ಪಿ. ರವರು ಸ್ಪರ್ಧಿಸಿದ್ದು, ಇವರುಗಳಿಗೆ ತುಮಕೂರು ಜಿಲ್ಲೆಯ ಎಲ್ಲಾ ಸೌಹಾರ್ದ ಸಹಕಾರಿಗಳು ಮತ ನೀಡಿ ಜಯಶೀಲರನ್ನಾಗಿಸಬೇಕು ಎಂದು ಅವರು ಕೋರಿದರು.
ಜು. ೨೪ ರಂದು ನಡೆಯುವ ಮತದಾನದಲ್ಲಿ ಸೌಹಾರ್ದ ಸಹಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮತದಾನ ಮಾಡುವ ಮೂಲಕ ಸಂಯುಕ್ತ ಸಹಕಾರಿಯ ಆಡಳಿತ ಮಂಡಳಿ ಚುನಾವಣೆಯಲ್ಲಿ ಯಶಸ್ವಿಗೊಳಿಸಬೇಕು ಎಂದು ಸಭೆಯಲ್ಲಿ ಮನವಿ ಮಾಡಲಾಯಿತು.
ಸಭೆಯಲ್ಲಿ ಬಿ.ಎಸ್. ಗುಂಡರಾವ್, ಎಂ.ಆರ್. ಪ್ರಭುದೇವ್, ಎ.ಆರ್. ಪ್ರಸನ್ನಕುಮಾರ್, ರಘುರಾಮರೆಡ್ಡಿ, ವಿಜಯ ಸಿ.ಪಿ. ಉಪಸ್ಥಿತರಿದ್ದರು.