ನಾಳೆ ಸೀತಾ ಸ್ವಯಂವರ ನಾಟಕ ಪ್ರದರ್ಶನ

ಮೈಸೂರು:ಜ.13: ನಾಳೆ ರಂಗಾಯಣದ ವನರಂಗದಲ್ಲಿ ಉದಯೋನ್ಮುಖ ರಂಗ ನಿರ್ದೇಶಕ ಜೀವನ್ಕುಮಾರ್ ಬಿ. ಹೆಗ್ಗೋಡು ನಿರ್ದೇಶಿಸಿದ ಸೀತಾ ಸ್ವಯಂವರ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ತಿಳಿಸಿದರು.
ರಂಗಾಯಣದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಂಗಾಯಣಕ್ಕೆ ಮಹತ್ವದ ದಿನ. ರಂಗಾಯಣ ಮೈಸೂರು 1989 ಜನವರಿ 14 ರಂದು ರಂಗಭೀಷ್ಮ ಬಿ.ವಿ. ಕಾರಂತರ ಸಾರಥ್ಯದಲ್ಲಿ ಸ್ಥಾಪನೆಯಾದ ದಿನ. ಆ ದಿನಗಳಲ್ಲಿ ಕಾರಂತರಿಗೆ ಹೆಗಲು ಕೊಟ್ಟವರು ಮೈಸೂರಿನ ಹವ್ಯಾಸಿ ಕಲಾವಿದರು, ರಂಗಸಂಸ್ಥೆಗಳು, ಸ್ಥಳೀಯ ರಂಗಾಸಕ್ತರು. ಮೈಸೂರಿನ ಹವ್ಯಾಸಿ ಕಲಾವಿದರು ಕನ್ನಡ ರಂಗಭೂಮಿಯನ್ನು ಉತ್ತಮವಾಗಿ ಕಟ್ಟಿ ಬೆಳೆಸಿದ್ದಾರೆ. ವೃತ್ತಿ ಕಂಪೆನಿಯಿಂದ ಹವ್ಯಾಸಿವರೆಗೆ ಮೈಸೂರು ರಂಗಭೂಮಿಗೆ ಬಹುದೊಡ್ಡ ಇತಿಹಾಸವಿದೆ. ಈ ಇತಿಹಾಸದ ಹಿನ್ನಲೆಯಲ್ಲೇ ಇತ್ತೀಚಿನ ದಿನಗಳಲ್ಲಿ ಈ ಭಾಗದ ಯುವ ರಂಗಪ್ರತಿಭೆಗಳು ಕನ್ನಡ ರಂಗಭೂಮಿಗೆ ಧಾವಿಸಿ ಬರುತ್ತಿದ್ದಾರೆ. ಅವರಿಗೆ ಸೂಕ್ತ ತರಬೇತಿಯ ಅವಶ್ಯಕತೆಯಿದೆ. ಅಭಿನಯದಲ್ಲಿ ಆಸಕ್ತಿ ಬೆಳೆಸಿಕೊಂಡು ರಂಗಭೂಮಿಯನ್ನೇ ನೆಚ್ಚಿ ಬರುವ ಈ ಯುವ ಪ್ರತಿಭೆಗಳಿಗೆ ರಂಗಭೂಮಿಯ ಪ್ರಾಥಮಿಕ ತರಬೇತಿ ನೀಡಿ ಅವರಿಂದ ಒಂದು ನಾಟಕವನ್ನು ಸಿದ್ಧಪಡಿಸಿ ಪ್ರದರ್ಶನ ನೀಡುವ ಉದ್ದೇಶ ಮೈಸೂರು ರಂಗಾಯಣದ ಕನಸು. ಈ ಕನಸನ್ನು ನನಸು ಮಾಡಲು ಮೈಸೂರಿನ ಖ್ಯಾತ ನಟ, ರಂಗಭೂಮಿಯ ಚೇತನಶಕ್ತಿಯಾಗಿದ್ದ ಸುಬ್ಬಯ್ಯನಾಯ್ಡು ಹೆಸರಿನಲ್ಲಿ ಮೂರು ತಿಂಗಳ ಸಂಜೆಯ ಅಭಿನಯ ರಂಗತರಬೇತಿ ಕಾರ್ಯಾಗಾರವನ್ನು ರಂಗಾಯಣ ಮೈಸೂರು 2020 ಅಕ್ಟೋಬರ್ 15 ರಿಂದ ಆರಂಭಿಸಿತು ಎಂದು ಮಾಹಿತಿ ನೀಡಿದರು.
ಈ ಕಾರ್ಯಾಗಾರದಲ್ಲಿ 26 ಯುವ ಕಲಾವಿದರು ಅತ್ಯಂತ ಉತ್ಸಾಹದಿಂದಲೇ ಭಾಗವಹಿಸಿದ್ದಾರೆ. ಉದಯೋನ್ಮುಖ ರಂಗ ನಿರ್ದೇಶಕ ಜೀವನ್ಕುಮಾರ್ ಬಿ. ಹೆಗ್ಗೋಡು ಅವರು ಈ ಕಾರ್ಯಾಗಾರವನ್ನು ನಡೆಸಿಕೊಟ್ಟು ಎಂ.ಎಲ್. ಶ್ರೀಕಂಠೇಶಗೌಡ ಅವರ ಸೀತಾ ಸ್ವಯಂವರಂ’ ಎಂಬ ನಾಟಕವನ್ನು ನಿರ್ದೇಶನ ಮಾಡಿದ್ದಾರೆ. ಅನೇಕ ಸಂಪನ್ಮೂಲ ವ್ಯಕ್ತಿಗಳು ಶಿಬಿರಕ್ಕೆ ಆಗಮಿಸಿ ಶಿಬಿರಾರ್ಥಿಗಳಿಗೆ ರಂಗಭೂಮಿಯ - ನಾಟಕದ ಪರಿಚಯ ಮಾಡಿಕೊಟ್ಟಿದ್ದಾರೆ. ರಂಗಾಯಣದ ಹಿರಿಯ ಕಲಾವಿದರಾದ ಗೀತಾ ಮೋಂಟಡ್ಕ ಮತ್ತು ಕೃಷ್ಣಕುಮಾರ್ ನಾರ್ಣಕಜೆ ಕಾರ್ಯಾಗಾರದ ನಿರ್ವಹಣೆ ಮಾಡಿದ್ದು, ಅರಸೀಕೆರೆ ಯೋಗಾನಂದ ಅವರು ಸಂಚಾಲಕರಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ತಿಳಿಸಿದರು. ರಂಗಾಯಣ ಮೈಸೂರು ಹವ್ಯಾಸಿ ಯುವ ಪ್ರತಿಭೆಗಳಿಗಾಗಿ ಕಟ್ಟಿಕೊಂಡ ಕನಸು, ಅವರು ಮುಂದೆ ಒಂದು ರಂಗಭೂಮಿಯಲ್ಲಿ ಕ್ರಿಯಾಶೀಲರಾಗಿ ತೊಡಗಿಕೊಂಡರೆ ನನಸಾಗಲಿದೆ ಎಂಬ ಆಶಾಭಾವನೆಯಿದೆ.ಸೀತಾ ಸ್ವಯಂವರಂ’ ನಾಟಕ ರಂಗಾಯಣದ ವಾರಾಂತ್ಯದಲ್ಲೂ ಪ್ರದರ್ಶನ ನೀಡಲು ಸಿದ್ಧವಾಗಿದೆ. ಇದು ರಂಗಾಯಣಕ್ಕೆ ಹರ್ಷ ತಂದಿದೆ ಎಂದು ತಿಳಿಸಿದರು.
ನಾಳೆ ಸಂಜೆ 6.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಮೈಸೂರು ಪೇಯಿಂಟ್ಸ್ &ವಾರ್ಮಿಷ್ ಲಿಮಿಟೆಡ್ ಅಧ್ಯಕ್ಷ ಎನ್.ವಿ.ಫಣೀಶ್ ಬ್ರೋಷರ್ ಬಿಡುಗಡೆ ಗೊಳಿಸಲಿದ್ದಾರೆ. ಕಾರ್ಯಾಗಾರದ ಸಮಾರೋಪ ಸಮಾರಂಭವೂ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಹಿರಿಯ ರಂಗನಿರ್ದೇಶಕ ಪೆÇ್ರ.ಹೆಚ್.ಎಸ್.ಉಮೇಶ್ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.ಜ.15ರಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ-ಸಾಹಿತ್ಯ ಅಕಾಡೆಮಿಯ ಅರೆಭಾಷೆ ನಾಟಕ ಸಾಹೇಬ್ರು ಬಂದವೇ!!! ಜೀವನ್ ರಾಂ ಸುಳ್ಯ ನಿರ್ದೇಶನದ ನಾಟಕ ಕಿರುರಂಗಮಂದಿರದಲ್ಲಿ 6.30ಕ್ಕೆ ಪ್ರದರ್ಶನಗೊಳ್ಳಲಿದೆ ಎಂದರು. ಈ ಸಂದರ್ಭ ಶಾಸಕ ಕೆ.ಜಿ.ಬೋಪಯ್ಯ, ಕೊಡಗು ಗೌಡ ಸಮಾಜದ ಅಧ್ಯಕ್ಷ ತೋಟಂಬೈಲು ಮನೋಹರ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರಂಗಾಯಣದ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಗೀತಾ ಮೋಂಟಡ್ಕ ಮತ್ತಿತರರು ಉಪಸ್ಥಿತರಿದ್ದರು.