ನಾಳೆ ಸಿದ್ದರಾಂಪುರದಲ್ಲಿ  ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ.

ಸಂಜೆವಾಣಿ ವಾರ್ತೆಸಿರಿಗೇರಿ ಡಿ.24. ನಾಳೆ ಡಿ. 25 ರಂದು ಸೋಮವಾರ ಬೆಳಿಗ್ಗೆ ಸಿರಿಗೇರಿ ಸಮೀಪದ ಸಿದ್ದರಾಂಪುರ ಗ್ರಾಮದ ಶ್ರೀ ಸಿದ್ದೇಶ್ವರರ ಬೃಹನ್ ಹಿರೇಮಠದಲ್ಲಿ, ಶ್ರೀಶೈಲ ಕದಳೀವನ ಶ್ರೀ ಸಿದ್ದೇಶ್ವರ ತಾತನವರ 19ನೇ ವರ್ಷದ ಪುಣ್ಯ ಸ್ಮರಣೋತ್ಸವ ಅಂಗವಾಗಿ, ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಶ್ರೀ ಡಾ. ವೀರಸೋಮೇಶ್ವರ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯಲಿದೆ. ಉತ್ಸವವು ಜರಗಿದ ನಂತರ ಮಧ್ಯಾಹ್ನ ಶ್ರೀಗಳಿಂದ ಪುಣ್ಯ ಪ್ರವಚನ ಕಾರ್ಯಕ್ರಮ ನಡೆಯಲಿದೆ. ಮರುದಿನ ಡಿಸೆಂಬರ್ 26ರಂದು ಶ್ರೀಶೈಲ ಕದಳಿವನ ಶ್ರೀ ಸಿದ್ದೇಶ್ವರ ತಾತನವರ 19ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ನಡೆಯಲಿದ್ದು, ಈ ನಿಮಿತ್ತವಾಗಿ ಮಠದಲ್ಲಿ ಪಲ್ಲಕ್ಕಿ ಉತ್ಸವ, ಜಂಗಮ ವಟುಗಳಿಗೆ ಅಯ್ಯಾಚಾರ, ಶಿವ ದೀಕ್ಷೆ, ಸಾಮೂಹಿಕ ವಿವಾಹ, ತುಲಾಭಾರ ಕಾರ್ಯಕ್ರಮಗಳು ಸಂಗೀತ ವಾದ್ಯಗಳೊಂದಿಗೆ ನಡೆಯಲಿವೆ. ಅಂದು ಸಂಜೆ ವೇಳೆಗೆ ಶ್ರೀ ಕೃಷ್ಣ ಸಂಧಾನ ಎಂಬ ನಗೆ ನಾಟಕವನ್ನು ಪ್ರಸ್ತುತಪಡಿಸಲಾಗುತ್ತಿದೆ. ಈ ಪುಣ್ಯ ಕಾರ್ಯಕ್ರಮವು ಪ್ರಸಿದ್ಧ ಮಠಗಳ ಶ್ರೀಗಳ ಸಾನಿಧ್ಯದೊಂದಿಗೆ ನಡೆಯಲಿದ್ದು, ಶ್ರೀಗಳಿಂದ ಪ್ರವಚನಗಳು, ಆಶೀರ್ವಾದಗಳು ಸಾವಿರಾರು ಭಕ್ತರಿಗೆ ದೊರೆಯಲಿದೆ, ಈ ಪುಣ್ಯ ಕಾರ್ಯಕ್ರಮಕ್ಕೆ ನಾಡಿನ ಎಲ್ಲಾ ಗ್ರಾಮಗಳಿಂದ ಸಾವಿರಾರು ಭಕ್ತರು ಪಾಲ್ಗೊಳ್ಳಬೇಕೆಂದು  ಸಿದ್ದರಾಂಪುರ ಶ್ರೀ ಸಿದ್ದೇಶ್ವರ ಮಠದ ರೂವಾರಿಗಳು, ಕಾಯಕಯೋಗಿ ಶ್ರೀ ಚಿದಾನಂದ ತಾತನವರು ಮಾಹಿತಿ ನೀಡಿದ್ದಾರೆ.