ನಾಳೆ ಸಿಡಿ ಯುವತಿ ಪ್ರತ್ಯಕ್ಷ

ಬೆಂಗಳೂರು,ಮಾ.೨೮- ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು ಪ್ರಕರಣದ ಸಂಬಂಧ ಯುವತಿ ನಾಳೆ ನ್ಯಾಯಾಧೀಶರ ಮುಂದೆ ಹಾಜರಾಗಿ ಸ್ವಯಂ ಪ್ರೇರಿತ ಹೇಳಿಕೆ ನೀಡುವ ಸಾಧ್ಯತೆ ದಟ್ಟವಾಗಿದೆ.
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಆರೋಪ ಪ್ರಕರಣ ದಾಖಲಾಗಿರುವ ಬೆನ್ನಲ್ಲೇ ಯುವತಿಗೆ ವಿಚಾರಣೆಗೆ ಹಾಜರಾಗುವಂತೆ ಎರಡನೇ ನೋಟಿಸ್ ಜಾರಿಯಾಗಿದ್ದು ನಾಳೆಯೊಳಗೆ ಯುವತಿಯು ನ್ಯಾಯಾಧೀಶರ ಮುಂದೆ ಹಾಜರಾಗಲಿದ್ದಾರೆ ಎಂದು ತಿಳಿದುಬಂದಿದೆ.
ಈ ನಡುವೆ ಇಂದು ಬೆಳಗ್ಗೆ ತಮ್ಮ ಸಹೋದ್ಯೋಗಿ ವಕೀಲ ಮಂಜುನಾಥ್ ಅವರ ಜತೆ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿರುವ ಯುವತಿಯ ಪರ ವಕೀಲ ಜಗದೀಶ್ ಅವರು, ಯುವತಿ ನ್ಯಾಯಾಧೀಶರ ಮುಂದೆ ಹಾಜರಾಗಿ ನಿಯಮ ೧೬೪ರಡಿ ನೀಡುವ ಹೇಳಿಕೆ ಇಡೀ ಪ್ರಕರಣಕ್ಕೆ ಹೊಸ ತಿರುವು ನೀಡಲಿದ್ದಾರೆ ಎಂದಿದ್ದಾರೆ. ಇದು ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ.
ರಹಸ್ಯ ವಿಚಾರಣೆ:
ಯುವತಿ ನ್ಯಾಯಾಲಯಕ್ಕೆ ಹಾಜರಾದರೆ ರಹಸ್ಯ ವಿಚಾರಣೆ ನಡೆಯಬೇಕಾಗುತ್ತದೆ. ಅತ್ಯಾಚಾರ, ಮಹಿಳೆಯರ ಮೇಲಿನ ದೌರ್ಜನ್ಯದಂತಹ ಪ್ರಕರಣದಲ್ಲಿ ಗೌಪ್ಯ ವಿಚಾರಣೆಗೆ ಅವಕಾಶವಿದೆ.
ಯುವತಿ ಸ್ವಯಂ ಪ್ರೇರಿತ ಹೇಳಿಕೆ ದಾಖಲಿಸಿದ ಬಳಿಕ ಆರೋಪಿ ಮತ್ತು ಸಂತ್ರಸ್ತೆ ಇಬ್ಬರೂ ವೈದ್ಯಕೀಯ ಪರೀಕ್ಷೆಗೆ ಒಳಪಡಬೇಕು.
ಪ್ರಕರಣದಲ್ಲಿ ಕೃತ್ಯ ನಡೆದಿದೆ ಎಂದು ಹೇಳಲಾದ ಮಲ್ಲೇಶ್ವರಂ ಅಪಾರ್ಟ್‌ಮೆಂಟ್ ಮತ್ತು ಅಲ್ಲಿನ ಮಂಚ ಸೇರಿದಂತೆ ಹಲವಾರು ಸಾಕ್ಷ್ಯಗಳಿವೆ. ಸ್ಥಳ ಮಹಜರು ಮಾಡಬೇಕು. ಹೇಳಿಕೆ ದಾಖಲಿಸಿಕೊಳ್ಳುವ ನ್ಯಾಯಾಧೀಶರು ತನಿಖಾ ಸಂಸ್ಥೆಗಳಿಗೆ ಸ್ಪಷ್ಟ ನಿರ್ದೇಶನ ನೀಡುವ ಅಧಿಕಾರ ಹೊಂದಿದ್ದಾರೆ ಎಂದರು.
ಪ್ರಸ್ತುತ ಪ್ರಕರಣದಲ್ಲಿ ಎರಡು ಎಫ್ ಐಆರ್ ದಾಖಲಾಗಿವೆ. ರಮೇಶ್ ಜಾರಕಿಹೊಳಿ ಅವರು ತಮ್ಮನ್ನು ಬ್ಲಾಕ್‌ಮೇಲ್ ಮಾಡಿ ಸುಲಿಗೆ ಮಾಡಲಾಗಿದೆ ಎಂದು ಸದಾಶಿವನಗರ ಠಾಣೆಗೆ ದೂರು ನೀಡಿದ್ದಾರೆ. ಅದರ ಮೇಲೆ ಪ್ರಕರಣ ದಾಖಲಾಗಿದೆ. ಸಂತ್ರಸ್ತ ಯುವತಿ ನೀಡಿರುವ ದೂರು ಆಧರಿಸಿ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಈ ಎರಡನ್ನೂ ವಿಶೇಷ ತನಿಖಾ ಸಂಸ್ಥೆ ತನಿಖೆ ನಡೆಸುತ್ತಿದೆ.
ಇದು ತಾಂತ್ರಿಕವಾಗಿ ಆಕ್ಷೇಪಾರ್ಹವಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ಎದುರಾಗುವ ಸಾಕ್ಷ್ಯಗಳು ಮತ್ತು ಸುಲಿಗೆ ಪ್ರಕರಣದಲ್ಲಿ ಕಂಡು ಬರುವ ಪುರಾವೆಗಳು ಪರಸ್ಪರ ವಿರುದ್ಧವಾಗಿರುತ್ತವೆ. ಹೀಗಾಗಿ ಒಂದೇ ಸಂಸ್ಥೆ ಎರಡು ಪ್ರಕರಣಗಳನ್ನು ತನಿಖೆ ಮಾಡುವುದು ಎಷ್ಟು ಸಾದು ಎಂಬ ಪ್ರಶ್ನೆ ಉದ್ಭವಿಸಿದೆ ಎಂದು ವಕೀಲರು ಹೇಳಿದ್ದಾರೆ.
ವಕೀಲರ ಮೂಲಕ ನೋಟೀಸ್:
ಕಬ್ಬನ್ ಪಾರ್ಕ್ ಪೊಲೀಸರು ವಕೀಲ ಜಗದೀಶ್ ಮೂಲಕ ನಿನ್ನೆ ನೋಟಿಸ್ ಜಾರಿ ಮಾಡಿದ್ದಾರೆ ನೋಟಿಸ್‌ನಲ್ಲಿ ಘಟನೆ ಸಂಬಂಧ ಸ್ಥಳ ಮಹಜರು, ಮೆಡಿಕಲ್ ಟೆಸ್ಟ್ ಮತ್ತು ಸಂತ್ರಸ್ತೆಯ ಹೇಳಿಕೆ ಅತ್ಯಗತ್ಯ ಎಂದು ತಿಳಿಸಲಾಗಿದೆ.
ಹೀಗಾಗಿ ಪ್ರಕರಣದ ಕುರಿತು ಮುಂದಿನ ತನಿಖೆಗೆ ಸಂತ್ರಸ್ತೆ ಹಾಜರಾಗುವುದು ಅನಿವಾರ್ಯವಾಗಿದ್ದು ಯಾವುದೇ ಕ್ಷಣದಲ್ಲಿ ಯುವತಿಯು ಪ್ರತ್ಯಕ್ಷವಾಗುವ ಸಾಧ್ಯತೆಯಿದೆ.
ಇವೆಲ್ಲ ಬೆಳವಣಿಗೆಗಳ ನಡುವೆ ಸಿಡಿ ಗ್ಯಾಂಗ್ ಯುವತಿಯನ್ನು ಇಂದು ಸಂಜೆ ಇಲ್ಲವೇ ನಾಳೆ ಎಸ್ ಐಟಿ ಅಧಿಕಾರಿಗಳ ಮುಂದೆ ಇಲ್ಲವೇ ನ್ಯಾಯಾಧೀಶರ ಮುಂದೆ ಯುವತಿಯನ್ನು ಹಾಜರುಪಡಿಸಿ ಹೇಳಿಕೆ ಕೊಡಿಸುವ ಸಾಧ್ಯತೆಯಿದೆ.
ನಗರದ ಹೊರವಲಯದ ರಹಸ್ಯ ಸ್ಥಳದಲ್ಲಿರುವ ಯುವತಿಯನ್ನು ಯಾರಿಗೂ ಗೊತ್ತಾಗದಂತೆ ಎಸ್ ಐಟಿ ಅಧಿಕಾರಿಗಳ ಮುಂದೆ ಇಲ್ಲವೇ ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ಗ್ಯಾಂಗ್ ಯೋಜನೆ ಹಾಕಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಡಿಕೆ ವಿರುದ್ಧ ದೂರು:
ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಹೆಸರು ಪ್ರಸ್ತಾಪವಾಗಿರುವುದರಿಂದ ಸೂತ್ರದಾರ ಅವರೇ ಆಗಿದ್ದಾರೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ದೊರು ಸಲ್ಲಿಸಲಿದ್ದಾರೆ.
ಯುವತಿಯ ಅಕ್ರಮ ಬಂಧನದಲ್ಲಿಟ್ಟು ಸಿಡಿ ಗ್ಯಾಂಗ್ ಜೊತೆಗೆ ವ್ಯವಹಾರ ನಡೆಸುತ್ತಿದ್ದಾರೆ ಎಂದು ಡಿಕೆ ವಿರುದ್ಧ ಜಾರಕಿಹೊಳಿ ಆರೋಪ ಮಾಡಿ ದೂರು ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಮತ್ತೊಂದು ದೂರು:
ಈ ನಡುವೆ ಬೆಳಗಾವಿ ಮನೆಗೆ ಸೇರಿರುವ ಸಂತ್ರಸ್ತೆ ಕುಟುಂಬ ಸದಸ್ಯರು ಅಲ್ಲಿನ ಎಪಿಎಂಸಿ ಠಾಣೆಯಲ್ಲಿ ಮತ್ತೊಂದು ದೂರು ದಾಖಲಿಸುವ ಸಾಧ್ಯತೆ ಇದೆ. ತಮ್ಮ ಪುತ್ರಿಯನ್ನು ಅಪಹರಿಸಲಾಗಿದೆ ಎಂದು ಕಳೆದ ಮಾರ್ಚ್ ೧೬ರಂದು ಯುವತಿ ಪೋಷಕರು ದೂರು ನೀಡಿ ನಿನ್ನೆಯಷ್ಟೇ ಎಸ್‌ಐಟಿ ಮುಂದೆ ಹಾಜರಾಗಿದ್ದರು.
ಇದೀಗ ಬೆಳಗಾವಿಗೆ ಬಂದಿರುವ ಪೋಷಕರು ನಾಳೆ, ನಾಡಿದ್ದು ಎಲ್ಲ ದಾಖಲೆ ನೀಡುವುದಾಗಿ ಹೇಳಿದ್ದು ದಾಖಲೆ ಬಿಡುಗಡೆ ಮಾಡಿ ಡಿಕೆಶಿ ವಿರುದ್ಧ ಪೋಷಕರು ದೂರು ದಾಖಲಿಸುವ ಸಾಧ್ಯತೆ ಇದೆ.
ಮನೆಗೆ ಬಿಗಿ ಭದ್ರತೆ:
ರಾಸಲೀಲೆ ಸಿಡಿ ಪ್ರಕರಣದ ಯುವತಿಯ ಪೋಷಕರು ವಾಸವಿರುವ ಬೆಳಗಾವಿಯ ಕುವೆಂಪು ನಗರದ ಬಾಡಿಗೆ ಮನೆಗೆ ಎಪಿಎಂಸಿ ಠಾಣೆ ಪೊಲೀಸರು ಬಿಗಿ ಭದ್ರತೆ ನೀಡಿದ್ದಾರೆ.
ಎಎಸ್‌ಐ ನೇತೃತ್ವದಲ್ಲಿ ಓರ್ವ ಮಹಿಳಾ ಕಾನ್‌ಸ್ಟೇಬಲ್, ಇಬ್ಬರು ಹೆಡ್ ಕಾನ್‌ಸ್ಟೇಬಲ್, ಇಬ್ಬರು ಕಾನ್‌ಸ್ಟೇಬಲ್‌ಗಳನ್ನು ನಿಯೋಜಿಸಿ ಮನೆ ಎದುರು ಒಂದು ಪೊಲೀಸ್ ವಾಹನ ನಿಲ್ಲಿಸಲಾಗಿದೆ. ಕುಟುಂಬದ ಭೇಟಿಗೆ ಯಾರೇ ಬಂದರೂ ಮಾಹಿತಿ ನೀಡುವಂತೆ ಮೇಲಧಿಕಾರಿಗಳು ಸೂಚನೆ ನೀಡಿದ್ದಾರೆ.
ಮುಂಜಾನೆ ಹಸ್ತಾಂತರ:
ಈ ನಡುವೆ ಯುವತಿಯ ಪೋಷಕರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ಅಧಿಕಾರಿಗಳು ನಗರದಿಂದ ಬೆಳಗಾವಿಗೆ ಕರೆದೊಯ್ದು ಅಲ್ಲಿನ ಎಪಿಎಂಸಿ ಠಾಣೆಗೆ ಇಂದು ಮುಂಜಾನೆ ಹಸ್ತಾಂತರಿಸಿದರು.
ಎಸ್‌ಐಟಿ ತಂಡದ ಎಸಿಪಿ ಪರಮೇಶ್ವರ್ ನೇತೃತ್ವದಲ್ಲಿ ೧೬ ಎಸ್‌ಐಟಿ ಸಿಬ್ಬಂದಿಯ ತಂಡ ಎಪಿಎಂಸಿ ಪೊಲೀಸ್ ಠಾಣೆಗೆ ಬಂದು, ಸಂತ್ರಸ್ತೆಯ ಕುಟುಂಬದವರನ್ನು ತಲುಪಿಸಿದರು. ಬಳಿಕ ಪೊಲೀಸರಿಗೆ ಹಸ್ತಾಂತರಿಸಿತು.
ಠಾಣೆಯಲ್ಲಿ ವಿಚಾರಣೆ:
ಠಾಣೆಯ ಸಿಪಿಐ ದಿಲೀಪ್‌ಕುಮಾರ್ ಒಂದು ಗಂಟೆಗೂ ಹೆಚ್ಚು ಕಾಲ ಕುಟುಂಬದವರನ್ನು ವಿಚಾರಣೆಗೆ ಒಳಪಡಿಸಿದರು. ಬಳಿಕ ನಗರದಲ್ಲಿ ಕುಟುಂಬ ವಾಸವಿದ್ದ ಬಾಡಿಗೆ ಮನೆಗೆ ಕರೆದೊಯ್ದರು. ಮನೆ ಬಳಿ ಎಎಸ್‌ಐ, ಮೂವರು ಕಾನ್‌ಸ್ಟೆಬಲ್‌ಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ಯುವತಿ ತಂದೆ ಮಾಧ್ಯಮದವರೊಂದಿಗೆ ಹೆಚ್ಚು ಮಾತನಾಡಲು ನಿರಾಕರಿಸಿದರು. ಈಗ ಏನನ್ನೂ ಕೇಳಬೇಡಿ. ಮತ್ತೆ ನಿಮ್ಮ ಬಳಿಗೆ ಬರುತ್ತೇನೆ. ಏನು ಹೇಳಬೇಕೋ ಅದನ್ನೆಲ್ಲವನ್ನೂ ಹೇಳಿರುವೆ ಎಂದರು.
ಮತ್ತೊಂದು ವಿಡಿಯೋ:
ಮಗಳು ಬಿಡುಗಡೆ ಮಾಡಿರುವ ಮತ್ತೊಂದು ವಿಡಿಯೊ ಹೇಳಿಕೆ ನೋಡಿದ್ದೇನೆ. ಸದ್ಯಕ್ಕೆ ಆ ಬಗ್ಗೆ ಮಾತನಾಡಲಾರೆ. ನಾವು ನೆಮ್ಮದಿಯಿಂದ ಇರಲು ಬಿಡಿ ಎಂದು ಕೋರಿದರು.
ಕುವೆಂಪು ನಗರದ ಮನೆಯಲ್ಲೀಗ ಯುವತಿಯ ತಂದೆ, ತಾಯಿ, ಇಬ್ಬರು ಸಹೋದರರು ಇದ್ದಾರೆ. ಬೆಳಗ್ಗೆ ಮನೆ ಸೇರಿರುವ ಕುಟುಂಬ ಸದಸ್ಯರು ಈವರೆಗೆ ಹೊರಬಂದಿಲ್ಲ.