ನಾಳೆ ಸಿಎಂ ಮನೆ ಮುಂದೆ ಧರಣಿ ಸತ್ಯಾಗ್ರಹ – ತಾವರಗೇರಾ

ಲಿಂಗಸುಗೂರು.ಸೆ.೧೯- ಕೊಟ್ಟ ಮಾತಿಗೆ ತಪ್ಪಿದ ಮುಖ್ಯಮಂತ್ರಿಯವರ ಮನೆಯ ಮುಂದೆ ನಾಳೆ ೨೦ ರಂದು ಒಂದು ದಿನ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಅಮರೇಶ ತಾವರಗೇರಾ ತಿಳಿಸಿದರು.
ಸ್ಥಳೀಯ ಪತ್ರಿಕಾ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಪಂಚಮಸಾಲಿ ಸಮಾಜದಿಂದ ೨ಎ ಮೀಸಲಾತಿಗಾಗಿ ಕಳೆದ ಎರಡು ವರ್ಷಗಳಿಂದ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರ ನೇತೃತ್ವದಲ್ಲಿ ೭೨೦ ಕಿ.ಮೀ. ಪಾದಯಾತ್ರೆ ಹಾಗೂ ೩೮ ದಿನಗಳ ಧರಣಿ ಸತ್ಯಾಗ್ರಹ ನಡೆಸಲಾಗಿತ್ತು. ಆಗ ಸರಕಾರ ನಾಲ್ಕು ಬಾರಿ ಮಾತುಕೊಟ್ಟು ಮುಖ್ಯಮಂತ್ರಿಗಳು ಮಾತಿಗೆ ತಪ್ಪಿದ್ದಾರೆ. ನಾಳೆ ಬೆಳಿಗ್ಗೆ ಶಿಗ್ಗಾಂವ್‌ನ ಚನ್ನಮ್ಮ ವೃತ್ತದಲ್ಲಿ ಚನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿ ಪಾದಯಾತ್ರೆ ಮೂಲಕ ತೆರಳಿ ಮುಖ್ಯಮಂತ್ರಿಗಳ ಮನೆಯ ಮುಂದೆ ಒಂದು ದಿನದ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ. ಈ ಧರಣಿಯಲ್ಲಿ ತಾಲೂಕಿನಿಂದ ಸಮುದಾಯ ಬಾಂಧವರು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಮಹಾಂತೇಶ ಪಾಟೀಲ್, ವಿಜಯಕುಮಾರ ಹೊಸಗೌಡ್ರು, ಅಮರೇಶ ಹೆಸರೂರು, ವಿಜಯಲಕ್ಷ್ಮಿ ದೇಸಾಯಿ, ಮಲ್ಲಿಕಾರ್ಜುನ ನಾಡಗೌಡ ಇದ್ದರು.