ನಾಳೆ ಸಂಡೂರಿನಲ್ಲಿ ಇ.ಎಸ್.ಐ.ಸಿ ಕಾರ್ಮಿಕರ ಆಸ್ಪತ್ರೆ ಪ್ರಾರಂಭ


ಸಂಜೆವಾಣಿ ವಾರ್ತೆ
ಸಂಡೂರು: ಜ: 17: ಸಂಡೂರಿನಲ್ಲಿ 522 ಕಾರ್ಮಿಕ ಗುತ್ತಿಗೆದಾರರಿದ್ದು 20562 ಅವಲಂಬಿತ ಕಾರ್ಮಿಕರಿದ್ದಾರೆ. ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು ಗಣಿಗೆ ತವರೂರಾಗಿದ್ದು ಇಲ್ಲಿನ ಗಣಿ ಕಾರ್ಮಿಕರಿಗೆ ಇ.ಎಸ್.ಐ.ಸಿ. ಸೌಲಭ್ಯಗಳಿಲ್ಲದೇ ಇರುವುದು ಶೋಚನೀಯ ಸಂಗತಿಯಾಗಿದ್ದು ಈಗಾಗಲೇ ಕಾರ್ಮಿಕ ಸಚಿವ ಶ್ರೀ ರಾಮ ಹೆಬ್ಳಕರ್ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಈ.ತುಕರಾಂರವರನ್ನು ಸಂಪರ್ಕಿಸಿದಾಗ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟದಿಂದಕಾರ್ಮಿಕರ ರಾಜ್ಯ ವಿಮಾ ಯೋಜನೆಯಡಿಯಲ್ಲಿ ಅಸಂಘಟಿತ ಕಾರ್ಮಿಕರು, ಚಾಲಕರು, ಹಾಗೂ ಈ.ಎಸ್.ಐ.ಸಿ ಕಾರ್ಮಿಕರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಹಾಗೂ ಕಾರ್ಮಿಕ ಇಲಾಖೆಯಿಂದ ಸಿಗುವ ಸೌಲಭ್ಯಗಳಿಗೆ ಸಂಡೂರಿನಲ್ಲಿ ಖಾಸಗಿ ಜಾಗವನ್ನು ನೋಡಿ ಪ್ರಾರಂಭಿಸಲು ಹಾಗೂ ಅ ಕಟ್ಟಡದ ಜಾಗಕ್ಕೆ ನಿಗದಿಪಡಿಸಿದ ಬಾಡಿಗೆಯ ಮೊತ್ತವನ್ನು ಸರ್ಕಾರವೇ ವಹಿಸಲಿದ್ದು ಶ್ರೀನಿವಾಸ ಚಿತ್ರಮಂದಿರದ ಹತ್ತಿರ ಇರುವ ಕಟ್ಟಡದಲ್ಲಿ ಇ.ಎಸ್.ಐ.ಸಿ. ಕಾರ್ಮಿಕರ ಆಸ್ಪತ್ರೆಯನ್ನು ಸಂಡೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಈ.ತುಕರಾಂರವರು ಉದ್ಘಾಟಿಸುವರು ಎಂದು ಬಳ್ಳಾರಿ ಜಿಲ್ಲೆ ಅಸಂಘಟಿತ ಕಾರ್ಮಿಕ ಒಕ್ಕೂಟದ ಅಧ್ಯಕ್ಷ ತಿಪ್ಪೇಸ್ವಾಮಿ ಗಡ್ಡೆಯವರು ತಿಳಿಸಿದರು.
ಅವರು ಹೊಸಪೇಟೆ ರಸ್ತೆಯಲ್ಲಿರುವ ಸಂಡೂರಿನ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಅವರು ಮುಂದುವರೆದು ಮಾತನಾಡಿ ಕಾರ್ಮಿಕ ಇಲಾಖೆಯಿಮದ ಸಿಗುವ ಸೌಲಭ್ಯಗಳ ಬಗ್ಗೆ ಧ್ವನಿವರ್ಧಕದ ಮೂಲಕ ಕರಪತ್ರಗಳನ್ನು ಹಂಚುವುದರ ಮೂಲಕ ಜನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು 18-19-20 ರಂದು ಮೂರು ದಿನಗಳ ಕಾಲ ಅಂದರೆ 18ರ ಬೆಳಿಗ್ಗೆ 10 ಗಂಟೆಗೆ ಸಂಡೂರು ಶಾಸಕರು ಉದ್ಘಾಟಿಸಿದ ನಂತರ ಅಂದೇ ಸಂಡೂರು ವಿಜಯ ವೃತ್ತದಿಂದ ವಾಲ್ಮೀಕಿ ವೃತ್ತ ಮುಖ್ಯಬೀದಿ, ವಿರಕ್ತಮಠ, ಕೃಷ್ಣಾನಗರ, ದೌಲತ್‍ಪುರ, 19 ರಂದು ಮತ್ತೆ ಸಂಡೂರು ವಿಜಯ ವೃತ್ತದಿಂದ ಬಸ್‍ನಿಲ್ದಾಣ , ಸಂತೆ ಮಾರುಕಟ್ಟೆ ಪ್ರದೇಶ, ಕುರುಮಟ್ಟಿ, ಲಕ್ಷ್ಮೀಪುರ, ಮರಾಠ ಸಮಾಜ, 20 ರಂದು ಸಂಡೂರು ಪಟ್ಟಣ, ಯಶವಂತನಗರ, ಧರ್ಮಾಪುರ ಬೈಪಾಸ್ ರಸ್ತೆ ಬಾಬಯ್ಯ ಕ್ರಾಸ್ ಬಳಿ ಕರಪತ್ರ ಹಂಚುವುದರ ಮೂಲಕ ಜನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇ.ಎಸ್.ಐ.ಸಿ. ಅಡಿಯಲ್ಲಿ ಕಾರ್ಮಿಕರಿಗೆ ಸಿಗುವ ಸೌಲಭ್ಯ:- ಕಾಯಿಲೆ ನಗದು, ವರ್ಧಿತ ಕಾಯಿಲೆ ನಗದು, ಅಂಗವಿಕಲ ಭತ್ಯೆ, ಆಶ್ರಿತ ನಗದು ಭತ್ಯೆ, ಮಾತೃತ್ವ ನಗದು ಸೌಲಭ್ಯ, ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳನ್ನು ಪಡೆಯಬಹುದು, ಬಳ್ಳಾರಿಯಲ್ಲಿ ನೂರು ಬೆಡ್ ಕಾರ್ಮಿಕರ ಆಸ್ಪತ್ರೆ ಪ್ರಾರಂಭವಾಗಿದ್ದು ಕೇಂದ್ರ ಕಾರ್ಮಿಕ ಸಚಿವರ ಉದ್ಘಾಟನೆಯ ದಿನಾಂಕಕ್ಕಾಗಿ ಕಾಯುತ್ತಿದೆ. ಜಿಂದಾಲ್‍ನ ಸಂಜೀವಿನಿ ಆಸ್ಪತ್ರೆ ಸಂಡೂರಿನ ಆಸ್ಪತ್ರೆಗೆ ಟೈ ಅಗಿದ್ದು ಜಿಂದಾಲ್‍ನ ಸಂಜೀವಿನಿ ಆಸ್ಪತ್ರೆಯವರು ಸಂಡೂರಿನ ಇ.ಎಸ್.ಐ.ಸಿ. ಯವರು ಪ್ರಮಾಣ ಪತ್ರ ನೀಡುವರು ಅಲ್ಲಿ ಅವರಿಗೆ ಉಚಿತವಾಗಿ ಸೌಲಭ್ಯ ನೀಡಲಿದ್ದು ಸಂಡೂರಿನ ಈ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಮಾತ್ರ ನೀಡಲಾಗುವುದು.
ಫಲಾನುಭವಿಗಳಿಗೆ ಸಿಗುವ ಸೌಲಭ್ಯ: ಮೂರು ವರ್ಷ ಸದಸ್ಯತ್ವ ಪೂರೈಸಿದ 60 ವರ್ಷದ ಫಲಾನುಭವಿಗೆ ಮಾಸಿಕ 2000 , ದುರ್ಬಲತೆಯ ಪಿಂಚಣಿ, ಟ್ರೈನಿಂಗ್ ಕಮ್ ಟೂಲ್ಕಿಟ್ , ಶ್ರಮ ಸಾಮ ಸಾಮಥ್ರ್ಯ ವಸತಿ ಸೌಲಭ್ಯ, ಹೆರಿಗೆ ಸೌಲಭ್ಯ, ಅಂತ್ಯಕ್ರಿಯೆ ವೆಚ್ಚ, ವೈದ್ಯಕೀಯ ಸಹಾಯಧನ, ಪ್ರಮುಖ ವೈದೈಕೀಯ ವೆಚ್ಚ ಸಹಾಯಧನ, ಮದುವೆಗೆ ಸಹಾಯಧನ, ತಾಯಿ ಮಗು ಸಹಾಯ ಹಸ್ತ.
ಶೈಕ್ಷಣಿಕ ಸಹಾಯ ಧನ:- ಶಿಶುಪಾಲನ 1 ರಿಂದ 4ನೇ ತರಗತಿ ಮಕ್ಕಳಿಗೆ 5000 ರೂ. 5 ರಿಂದ 8ನೇ ತರಗತಿ 8000 ರೂ. 9 ರಿಂದ 10ನೇ ತರಗತಿ 12000 ರೂ. ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿ.ಯು.ಸಿ. 15000 ರೂ. ಐ.ಟಿ.ಐ, ಡಿಪ್ಲೋಮೋ 20000, ರು ಹೀಗೆ ಶಿಕ್ಷಣದ ಅರ್ಹತೆಯ ಮೇಲೆ ಹೆಚ್ಚಳದ ವಾರ್ಷಿಕ ಸಹಾಯಧನ ಫಲಾನುಭವಿಯ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಿಗುವದು.
ಕ.ರಾ.ವಿ. ಚಿಕಿತ್ಸಾಲಯ ಸಿಗುವ ಸೌಲಭ್ಯ: ಕಾರ್ಮಿಕರು ಹಾಗೂ ಕುಟುಂಬ ಅವಲಂಬಿತರಿಗೆ ತುರ್ತು ಸಂದರ್ಭದಲ್ಲಿ ಹೊಂದಾಣಿಕೆಯಾಗಿರುವ ಅಸ್ಪತ್ರೆಯ ಶಿಫಾರಸ್ಸು ಪತ್ರ ಅನಾರೋಗ್ಯವಾದಾಗ ವ್ಯದ್ಯರ ಸಲಹೆ ಮೇರೆಗೆ ರಜಾ ಆದ ದಿನಗಳ 10 ರಿಂದ 30 ದಿನಗಳವರೆಗೆ ವೇತನ ವನ್ನು ಕ.ರಾ.ವಿ. ಚಿಕಿತ್ಸಾ ಕೇಂದ್ರದಲ್ಲಿ ವೇತನ ಪಡೆಯಬಹುದು ಅವಲಂಬಿತರಿಗೆ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಅಸ್ಪತ್ರೆಗೆ ಶಿಫಾರಸ್ಸು ಪತ್ರ ನೀಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿ.ಸಂ. ಕಾ. ವಿ ಹೂಲೇಶ್, ಜಿಲ್ಲಾ ಉಪಾಧ್ಯಕ್ಷ ಭರತ್‍ಕುಮಾರ್ ಆಚಾರ್, ತಾ.ಪ್ರ. ಕಾರ್ಯದರ್ಶಿ ಗೋವಿಂದರಾಜೂ, ಚೋರನೂರು ಹೋಬಳಿ ಅಧ್ಯಕ್ಷ ಮೆಹಬೂಬ್ ಭಾಷಾ, ವಿಠಲಾಪುರದ ಅಧ್ಯಕ್ಷ ಕೋರಿ ಅಂಜಿನೇಯ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.