ನಾಳೆ ಸಂಜೆ ೪ಕ್ಕೆ ಸಂಪುಟ ವಿಸ್ತರಣೆ


ಬೆಂಗಳೂರು, ಜ. ೧೨- ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ನಾಳೆ ಸಂಜೆ ೪ ಗಂಟೆಗೆ ನೂತನ ಸಚಿವರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.ನಾಳೆ ಸಂಜೆ ೪ ಗಂಟೆಗೆ ಸಂಪುಟ ವಿಸ್ತರಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಸಂಪುಟ ವಿಸ್ತರಣೆಯ ಬಗ್ಗೆ ರಾಜ್ಯಪಾಲರನ್ನು ಭೇಟಿ ಮಾಡಿ ಮಾಹಿತಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಗೆ ಸಮಯ ನಿಗದಿಯಾಗಿದ್ದು, ನಾಳೆ ಸಂಜೆ ೪ ಗಂಟೆಗೆ ರಾಜ್ಯಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದರು.
ಕೆಲ ಮಾಧ್ಯಮಗಳಲ್ಲಿ ಇವರು ಸಚಿವರಾಗುತ್ತಾರೆ, ಅವರು ಸಚಿವರಾಗುತ್ತಾರೆ ಎಂದು ಬಿತ್ತರವಾಗುತ್ತಿದೆ. ಇವೆಲ್ಲಾ
ಸತ್ಯಕ್ಕೆ ದೂರವಾದವು. ಅನಗತ್ಯವಾಗಿ ಯಾರ ಹೆಸರನ್ನು ಹಾಕಬೇಡಿ. ಇದರಿಂದ ಗೊಂದಲ ಸೃಷ್ಟಿಯಾಗುತ್ತದೆ ಎಂದು ಅವರು ಹೇಳಿದರು.
ನಾಳೆ ನಡೆಯಲಿರುವ ಸಂಪುಟ ವಿಸ್ತರಣೆಯಲ್ಲಿ ಯಾರು ಸಚಿವರಾಗಲಿದ್ದಾರೆ ಎಂಬುದು ಇಂದು ಸಂಜೆ ತೀರ್ಮಾನವಾಗಲಿದೆ. ಇಂದು ಸಂಜೆಯೇ ನೂತನ ಸಚಿವರ ಪಟ್ಟಿ ಬಿಡುಗಡೆ ಮಾಡುವುದಾಗಿಯೂ ಅವರು ಹೇಳಿದರು.
ಸಂಪುಟ ವಿಸ್ತರಣೆಯೋ, ಪುನಾರಚನೆಯೋ ಎಂಬುದು ನಾಳೆ ಗೊತ್ತಾಗುತ್ತದೆ. ಸಂಪುಟಕ್ಕೆ ಯಾರು ಸೇರ್ಪಡೆಯಾಗುತ್ತಾರೇ, ಸಂಪುಟದಿಂದ ಯಾರನ್ನು ಕೈಬಿಡಲಾಗುತ್ತದೆ ಎಲ್ಲವೂ ನಾಳೆಯೇ ಇತ್ಯರ್ಥವಾಗಲಿದೆ ಎಂದು ಅವರು ಹೇಳಿದರು.
ಆಹ್ವಾನ
ಇದಕ್ಕೂ ಮೊದಲು ಮುಖ್ಯಮಂತ್ರಿ ಯಡಿಯೂರಪ್ಪನವರು ರಾಜ್ಯಪಾಲ ವಜುಭಾಯಿವಾಲಾ ಅವರನ್ನು ಭೇಟಿ ಮಾಡಿ ನಾಳೆ ಸಂಪುಟ ವಿಸ್ತರಣೆಗೆ ಸಮಯ ನಿಗದಿ ಮಾಡಿರುವ ಬಗ್ಗೆ ಮಾಹಿತಿ ನೀಡಿ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಸಿಕೊಡುವಂತೆ ಮನವಿ ಮಾಡಿದರು.