ನಾಳೆ ಶ್ವೇತಭವನಕ್ಕೆ ಝೆಲೆನ್ಸ್ಕಿ ಭೇಟಿ

ವಾಷಿಂಗ್ಟನ್, ಡಿ.೧೧- ಕಳೆದ ಒಂದು ವರ್ಷಕ್ಕಿಂತಲೂ ಹೆಚ್ಚಿನ ಕಾಲ ರಷ್ಯಾ ಹಾಗೂ ಉಕ್ರೇನ್ ನಡುವಿನ ಕಲಹ ಮುಂದುವರೆದಿರುವ ನಡುವೆ ಇದೀಗ ಅಮೆರಿಕಾವು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಶ್ವೇತಭವನಕ್ಕೆ ಆಹ್ವಾನಿಸಿದ್ದು, ಕುತೂಲಹಕ್ಕೆ ಕಾರಣವಾಗಿದೆ.
ಉಕ್ರೇನ್ ಮತ್ತಷ್ಟು ನೆರವಿನಿ ನಿಧಿಯನ್ನು ಘೋಷಿಸುವ ಅಧ್ಯಕ್ಷ ಜೋ ಬೈಡೆನ್ ನಿರ್ಧಾರಕ್ಕೆ ಈಗಾಗಲೇ ಅಮೆರಿಕಾ ಕಾಂಗ್ರೆಸ್ ತಣ್ಣೀರೆರಚಿದ ಬಳಿಕ ಬೆಂಬಲ ರೂಪವಾಗಿ ಝೆಲೆನ್ಸ್ಕಿ ಅವರನ್ನು ಶ್ವೇತಭವನಕ್ಕೆ ಆಹ್ವಾನಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರ್, ಸದ್ಯಕ್ಕೆ ಉಕ್ರೇನ್‌ಗೆ ಬೇಕಾಗುವ ಅಗತ್ಯ ವಸ್ತುಗಳ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಲಿದ್ದಾರೆ. ಈ ನಿರ್ಣಾಯಕ ಕ್ಷಣದಲ್ಲಿ ಯುನೈಟೆಡ್ ಸ್ಟೇಟ್ಸ್ ತನ್ನ ನಿರಂತರ ಬೆಂಬಲದ ಪ್ರಮುಖ ಪ್ರಾಮುಖ್ಯತೆಯನ್ನು ಚರ್ಚಿಸಲಿದೆ ಎಂದು ಅವರು ತಿಳಿಸಿದ್ದಾರೆ. ?ಮುಂಬರುವ ವರ್ಷಗಳಲ್ಲಿ ಉಕ್ರೇನ್ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಹೆಚ್ಚಿನ ರಕ್ಷಣಾ ಸಹಕಾರ, ವಿಶೇಷವಾಗಿ ಶಸ್ತ್ರಾಸ್ತ್ರಗಳ ಉತ್ಪಾದನೆ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳ ಜಂಟಿ ಯೋಜನೆಗಳ ಮೂಲಕ ಮತ್ತು ನಮ್ಮ ನಡುವಿನ ಪ್ರಯತ್ನಗಳ ಸಮನ್ವಯತೆಯಂತಹ ಪ್ರಮುಖ ವಿಷಯಗಳ ಮೇಲೆ ಸಭೆಯು ಗಮನಹರಿಸಲಿದೆ? ಎಂದು ಉಕ್ರೇನಿಯನ್ ಅಧ್ಯಕ್ಷೀಯ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಕಳೆದ ವಾರ ರಿಪಬ್ಲಿಕನ್ ಸೆನೆಟರ್‌ಗಳು ಉಕ್ರೇನ್ ಮತ್ತು ಇಸ್ರೇಲ್‌ಗೆ ಪ್ರಾಥಮಿಕವಾಗಿ ೧೦೬ ಶತಕೋಟಿ ಡಾಲರ್‌ನ ತುರ್ತು ಸಹಾಯದ ಮಸೂದೆಯನ್ನು ನಿರ್ಬಂಧಿಸಿದ್ದರು. ಸಹಜವಾಗಿಯೇ ಇದು ಬೈಡೆನ್ ಸರ್ಕಾರಕ್ಕೆ ಮುಜುಗರ ತಂದಂತಾಗಿದೆ.