ನಾಳೆ ಶ್ರೀಶೈಲ ಶ್ರೀಗಳ ಪಾದಯಾತ್ರೆ ನಗರಕ್ಕೆ ಆಗಮನ – ಚಂದ್ರಶೇಖರ ಪಾಟೀಲ

ರಾಯಚೂರು, ನ.೧೬- ಶ್ರೀಶೈಲದ ಡಾ.ಚನ್ನಾಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ದ್ವಾದಶಿ ಪೀಠಾರೋಹಣ ಹಾಗೂ ಜನ್ಮ ಸುವರ್ಣ ಮಹೋತ್ಸವ ಅಂಗವಾಗಿ ಬೆಳಗಾವಿ ಜಿಲ್ಲೆಯ ಶ್ರೀ ಕ್ಷೇತ್ರ ಯಡೂರದಿಂದ ಸುಕ್ಷೇತ್ರ ಶ್ರೀಶೈಲದವರೆಗೆ ಸಾಗುತ್ತಿರುವ ಪಾದಯಾತ್ರೆಯು ೧೭ರಂದು ನಗರಕ್ಕೆ ಆಗಮಿಸಲಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಾಟೀಲ ಮಿರ್ಜಾಪೂರ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಕಳೆದ ಅ.೧೯ ರಿಂದ ಚಿಕ್ಕೋಡಿ ತಾಲೂಕಿನ ಯಡೂರ ಕ್ಷೇತ್ರದಿಂದ ಸುಕ್ಷೇತ್ರ ಶ್ರೀಶೈಲದವರೆಗೆ ಹಮ್ಮಿಕೊಂಡ ಐತಿಹಾಸಿಕ ಪಾದಯಾತ್ರೆಯು ಜಾತಿ, ಮತ,ಪಂಥ, ವರ್ಗ, ವರ್ಣಗಳ ಭೇದವಿಲ್ಲದೆ ಲೋಕಕಲ್ಯಾಣಾರ್ಥವಾಗಿ ನಡೆಯಲಿದೆ. ಈ ಪಾದಯಾತ್ರೆಯಲ್ಲಿ ಜಿಲ್ಲೆಯ ಎಲ್ಲ ಭಕ್ತಾದಿಗಳು, ಧರ್ಮಾಭಿಮಾನಿಗಳು ಪಾಲ್ಗೊಂಡು ಪೂಜ್ಯರ ಕೃಪಾಶೀರ್ವಾದ ಹಾಗೂ ಶ್ರೀಶೈಲ ಶ್ರೀಮಾತಾ ಭ್ರಮರಾಂಬ ಸಮೇತ ಶ್ರೀ ಮಲ್ಲಿಕಾರ್ಜುನ ದೈವಾನುಗ್ರಹಕ್ಕೆ ಪಾತ್ರರಾಗಬೇಕು ಎಂದು ವಿನಂತಿಸಿ ಕೊಂಡರು ಪಾದಯಾತ್ರೆಯು ನ.೧೭ ರಂದು ಬೆಳಿಗ್ಗೆ ೭ ಗಂಟೆಗೆ ಗಬ್ಬೂರು ಗ್ರಾಮದಿಂದ ಪ್ರಾರಂಭವಾಗಿ ಸುಲ್ತಾನಪೂರ ಶ್ರೀಮಠದವರೆಗೆ ಸಾಗಿ ಬಂದು ಶ್ರೀಮಠದಲ್ಲಿ ಬೆಳಗಿನ ಉಪಹಾರ ಮಧ್ಯಾಹ್ನ ಕಲ್ಮಲಾದ ಕರಿಯಪ್ಪ ತಾತನವರ ದೇವಸ್ಥಾನದಲ್ಲಿ ಪೂಜೆ ಪ್ರಸಾದ ಹಾಗೂ ವಿಶ್ರಾಂತಿ ನಂತರ ರಾಯಚೂರು ಹರ್ಷಿತಾ ಗಾರ್ಡನ್ ಕಲ್ಯಾಣ ಮಂಟಪಕ್ಕೆ ಸಾಯಂಕಾಲ ಪಾದಯಾತ್ರೆ ತಲುಪಿ ಅಲ್ಲಿಯೇ ಧಾರ್ಮಿಕ ಸಭೆ ಪ್ರಸಾದ ಏರ್ಪಡಿಸಲಾಗಿದೆ ಎಂದು ವಿವರಿಸಿದರು.
ನ.೧೮ ರಂದು ಬೆಳಿಗ್ಗೆ ೭ ಗಂಟೆಗೆ ಹರ್ಷಿತಾ ಗಾರ್ಡನ್ ಕಲ್ಯಾಣಮಂಟಪದಿಂದ ಪಾದಯಾತ್ರೆ ಪ್ರಾರಂಭಗೊಂಡು ಬಸವೇಶ್ವರ ಪುತ್ಥಳಿಯವರೆಗೆ ಸಾಗಿ ಅಲ್ಲಿ ಬಸವೇಶ್ವರ ಪುತ್ಥಳಿಗೆ ಗೌರವ ನಮನ ಸಲ್ಲಿಸಿ ನಂತರ ವೀರಶೈವ ಕಲ್ಯಾಣ ಮಂಟಪಕ್ಕೆ ಆಗಮಿಸಲಿದ್ದು ಅಲ್ಲಿ ಧರ್ಮಸಭೆ,ಪೂಜೆ, ಪ್ರಸಾದ, ವಿಶ್ರಾಂತಿ ವ್ಯವಸ್ಥೆ ಏರ್ಪಾಟು ಮಾಡಲಾಗಿದೆ. ನಂತರ ಸಂಜೆ ವೀರಶೈವ ಕಲ್ಯಾಣ ಮಂಟಪದಿಂದ ಬಿಜನಗೇರಾ ಗ್ರಾಮಕ್ಕೆ ತೆರಳಿದೆ. ನಗರದಲ್ಲಿ ನಡೆಯುವ ಪಾದಯಾತ್ರೆ ಹಾಗೂ ಧರ್ಮ ಸಭೆಯಲ್ಲಿ ೧೦ ಸಾವಿರ ಜನ ಸೇರುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸೋಮವಾರ ಪೇಟೆಯ ಅಭಿನವ ರಚೋಟಿ ವೀರ ಮಹಾಸ್ವಾಮಿಗಳು, ಬಿಚ್ಚಾಲಿ,ಮಟಮಾರಿ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು ಸೇರಿದಂತೆ ಇತರರು ಇದ್ದರು ಇದ್ದರು.