ನಾಳೆ ಶುರು ಸದನ ಕದನ

(ವೈಎಸ್‌ಎಲ್ ಸ್ವಾಮಿ)
ನಾಳೆಯಿಂದ ವಿಧಾನ ಮಂಡಲ ಜಂಟಿ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಸಿಬ್ಬಂದಿಗಳು ಅಂತಿಮ ಸಿದ್ಧತೆಯಲ್ಲಿ ತೊಡಗಿರುವುದು.

ಬೆಂಗಳೂರು,ಫೆ.೧೧:ಲೋಕಸಭಾ ಚುನಾವಣೆಯ ಹೊಸ್ತಿಲಲೇ ನಾಳೆಯಿಂದ ರಾಜ್ಯ ವಿಧಾನ ಮಂಡಲದ ಅಧಿವೇಶನ ಆರಂಭವಾಗಲಿದ್ದು, ರಾಜಕೀಯ ಪಕ್ಷಗಳು ಲೋಕಸಭಾ ಚುನಾವಣೆಯತ್ತ ಚಿತ್ತ ಹರಿಸಿರುವುದರಿಂದ ಈ ವಿಧಾನಮಂಡಲ ಅಧಿವೇಶನ ರಾಜಕೀಯ ಮೇಲಾಟಕ್ಕೆ ವೇದಿಕೆಯಾಗಲಿದೆ. ಆಡಳಿತ ಮತ್ತು ವಿರೋಧ ಪಕ್ಷಗಳ ವಾಕ್ಸಮರಕ್ಕೂ ಈ ಅಧಿವೇಶನದಲ್ಲಿ ಅಖಾಡ ಸಿದ್ಧಗೊಂಡಿದೆ. ಬರ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಗೊಂದಲ,ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಕೊರತೆ, ಹದಗೆಟ್ಟಿರುವ ರಾಜ್ಯದ ಆರ್ಥಿಕ ಪರಿಸ್ಥಿತಿ, ಗುತ್ತಿಗೆದಾರರಿಂದ ಕಮಿಷನ್ ವಸೂಲಿ, ಅಲ್ಪಸಂಖ್ಯಾತರ ಓಲೈಕೆ ರಾeಕಾರಣ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರದ ಮೇಲೆ ಮುಗಿ ಬೀಳಲು ವಿಪಕ್ಷಗಳು ತುದಿಗಾಲ ಮೇಲೆ ನಿಂತಿವೆ.
ವಿರೋಧ ಪಕ್ಷವಾದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ಎರಡೂ ಪಕ್ಷಗಳು ಒಗ್ಗೂಡಿ ಸರ್ಕಾರದ ವಿರುದ್ಧ ವಾಗ್ಬಾಣಗಳನ್ನು ಬಿಡಲಿದ್ದು, ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸಹ ವಿಪಕ್ಷಗಳ ವಿರುದ್ಧ ತನ್ನದೇ ಆದ ಪ್ರತ್ಯಾಸ್ತ್ರಗಳನ್ನು ತನ್ನ ಬತ್ತಳಿಕೆಯಲ್ಲಿ ಸಿದ್ಧಪಡಿಸಿಕೊಂಡಿದೆ.
ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ ಸರ್ಕಾರ ರೈತರ ಸಂಕಷ್ಟಗಳಿಗೆ ನೆರವಾಗುತ್ತಿಲ್ಲ. ರೈತರಿಗೆ ಪರಿಹಾರ ನೀಡಿಲ್ಲ. ಬರ ನಿರ್ವಹಣೆಯಲ್ಲಿ ಆಗಿರುವ ಲೋಪಗಳನ್ನು ಸದನದಲ್ಲಿ ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ತಯಾರಾಗಿದ್ದು, ಇದಕ್ಕೆ ಪ್ರತಿಯಾಗಿ ಆಡಳಿತಾರೂಢ ಕಾಂಗ್ರೆಸ್ ಸಹ ವಿಪಕ್ಷಗಳನ್ನು ಕಟ್ಟಿ ಹಾಕಲು ಪ್ರತಿತಂತ್ರಗಳನ್ನು ರೂಪಿಸಿದ್ದು, ಸದನ ಕದನ ಕುತೂಹಲ ಕೆರಳಿಸಿದೆ.
ಕೇಂದ್ರ ಸರ್ಕಾರದ ಅನುದಾನ ತಾರತಮ್ಯ, ಬರ ಪರಿಹಾರ ಕಾರ್ಯಗಳಿಗೆ ಇದುವರೆಗೂ ಬಿಡಿಗಾಸನ್ನೂ ಕೊಡದ ಕೇಂದ್ರದ ನಡೆಯ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿ ವಿಪಕ್ಷಗಳ ಬಾಯಿ ಮುಚ್ಚಿಸಲು ಕಾಂಗ್ರೆಸ್ ಪಕ್ಷ ಸರ್ವ ರೀತಿಯಲ್ಲೂ ಸಜ್ಜುಗೊಂಡಿದ್ದು, ಸದನದಲ್ಲಿ ಈ ವಿಚಾರ ವಾಕ್ಸಮರಕ್ಕೆ ಕಾರಣವಾಗಲಿದ್ದು, ಸದನ ಕಲಾಪಗಳು ರಂಗೇರುವುದು ನಿಶ್ಚಿತ.
ಕೇಂದ್ರದ ಮಲತಾಯಿ ಧೋರಣೆ, ತೆರಿಗೆ ಪಾಲಿನ ಹಂಚಿಕೆ ಕಡಿತ ಸೇರಿದಂತೆ ಕೇಂದ್ರ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯವನ್ನು ಅಂಕಿ-ಅಂಶಗಳ ಸಮೇತ ಬಿಡಿಸಿಟ್ಟು, ವಿಪಕ್ಷಗಳ ಬಾಯಿಗೆ ಬೀಗ ಹಾಕುವ ರಣತಂತ್ರವನ್ನೂ ಕಾಂಗ್ರೆಸ್ ರೂಪಿಸಿದ್ದು, ಇದಕ್ಕೆ ಪ್ರತಿಯಾಗಿ ಬಿಜೆಪಿ ಯುಪಿಎ ಸರ್ಕಾರ ಮತ್ತು ಮೋದಿ ಸರ್ಕಾರದ ಅನುದಾನ ಬಿಡುಗಡೆಯ ಅಂಕಿ-ಅಂಶಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ನ ವಾಗ್ಬಾಣಗಳಿಗೆ ಪ್ರತಿ ಬಾಣ ಬಿಡಲು ಸಜ್ಜಾಗಿದೆ. ಈ ಅಧಿವೇಶನದಲ್ಲಿ ಕೇಂದ್ರಸರ್ಕಾರದ ನಡೆ ತಾರತಮ್ಯ ವಿಚಾರ ಸದನದಲ್ಲಿ ಗದ್ದಲ ಕೋಲಾಹಲಗಳನ್ನು ಎಬ್ಬಿಸಲಿದ್ದು, ಸದನದ ಕಲಾಪಗಳು ಕಾವೇರಲಿದೆ.
ಲೋಕಸಭಾ ಚುನಾವಣೆಗಳು ಹತ್ತಿರದಲ್ಲಿರುವುದರಿಂದ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು ರಾಜಕೀಯವಾಗಿ ಲಾಭ ಪಡೆಯಲು ಈ ಅಧಿವೇಶನದಲ್ಲಿ ಪ್ರಯತ್ನಿಸಲಿದ್ದು, ರಾಜಕೀಯ ಮೇಲಾಟಕ್ಕೆ ಅಧಿವೇಶನ ವೇದಿಕೆಯಾಗಲಿದೆ.

ನಾಳೆ ರಾಜ್ಯಪಾಲರ ಭಾಷಣ
ವಿಧಾನಮಂಡಲದ ಅಧಿವೇಶನದ ಮೊದಲ ದಿನವಾದ ನಾಳೆ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ಥಾವರ್‌ಚಂದ್‌ಗೆಲ್ಹೋಟ್ ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರನ್ನುದ್ದೇಶಿಸಿ ಭಾಷಣಮಾಡುವರು.
ಸಾಮಾನ್ಯವಾಗಿ ಪ್ರತಿವರ್ಷದ ಮೊದಲ ಅಧಿವೇಶನದಲ್ಲಿ ರಾಜ್ಯಪಾಲರು ಉಭಯ ಸದನಗಳನ್ನುದ್ದೇಶಿಸಿ ಭಾಷಣ ಮಾಡುವುದು ವಾಡಿಕೆ. ಅದರಂತೆ ನಾಳೆ ಈ ವರ್ಷದ ಮೊದಲ ಅಧಿವೇಶನವಾದ ಈ ಅಧಿವೇಶನದಲ್ಲೇ ರಾಜ್ಯಪಾಲರು ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
ರಾಜ್ಯಪಾಲರ ಭಾಷಣದಲ್ಲಿ ಸರ್ಕಾರದ ಗೊತ್ತು, ಗುರಿ, ದಿಕು, ದಿಸೆಗಳು ಪ್ರಸ್ತಾಪವಾಗುವ ನಿರೀಕ್ಷೆ ಇದೆ.

ಫೆ. ೧೬ ರಾಜ್ಯ ಬಜೆಟ್
ಈ ಅಧಿವೇಶನದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯರವರು ೨೦೨೪-೨೫ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಲಿದ್ದು, ಫೆ. ೧೬ ರಂದು ಅವರು ವಿಧಾನಸಭೆಯಲ್ಲಿ ಬಜೆಟ್ ಮಂಡಿಸುವರು.ಹಣಕಾಸು ಸಚಿವರಾಗಿಮುಖ್ಯಮಂತ್ರಿ ಸಿದ್ದರಾಮಯ್ಯರವರು ಇದುವರೆಗೂ ದಾಖಲೆಯ ೧೪ ಬಜೆಟ್ ಮಂಡಿಸಿದ್ದು, ನಾಳಿನ ಅವರ ಬಜೆಟ್ ೧೫ನೇ ಬಜೆಟ್ ಆಗಿದೆ.
ರಾಜ್ಯದ ಇತಿಹಾಸದಲ್ಲೇ ಹಣಕಾಸು ಸಚಿವರೊಬ್ಬರು ಅತೀ ಹೆಚ್ಚು ಬಜೆಟ್ ಮಂಡಿಸಿದ ಕೀರ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಜನರಾಗಿದ್ದು, ಈ ಹಿಂದೆ ಹಣಕಾಸು ಸಚಿವರಾಗಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರು ೧೩ ಬಜೆಟ್ ಮಂಡಿಸಿದ್ದರು.