
ವಿಜಯಪುರ,ಏ 22: ನಗರಕ್ಕೆ ನಾಳೆ ( ಏ 23 ) ಎಐಸಿಸಿ ನಾಯಕ ರಾಹುಲ್ ಗಾಂಧಿ ಭೇಟಿ ನೀಡಲಿದ್ದು, ಸಂಜೆ ಬೃಹತ್ ರೋಡ್ ಷೋ ನಡೆಸಲಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಎಂ.ಬಿ ಪಾಟೀಲ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದ ಅವರು, ದಿ.23 ರಂದು ಕೂಡಲಸಂಗಮದಿಂದ ಸಂಜೆ 5 ಗಂಟೆಗೆ ವಿಜಯಪುರ ನಗರಕ್ಕೆ ಭೇಟಿ ನೀಡಲಿದ್ದು, ವಿಜಯಪುರ ನಗರದಲ್ಲಿ ಶಿವಾಜಿ ವೃತ್ತದಿಂದ ಬೃಹತ್ ರೋಡ್ ಷೋ ನಡೆಸಲಿದ್ದಾರೆ.ಗಾಂಧೀ ವೃತ್ತ, ಡಾ.ಬಿ.ಆರ್. ಅಂಬೇಡ್ಕರ ವೃತ್ತದಿಂದ ರೋಡ್ ಷೋ ನಡೆಯಲಿದ್ದು, ಭಕ್ತ ಕನಕದಾಸ ವೃತ್ತಕ್ಕೆ ತಲುಪಿ ಈ ರೋಡ್ ಷೋ ಸಂಪನ್ನಗೊಳ್ಳಲಿದ್ದು, ಅಲ್ಲಿ ಸಾರ್ವಜನಿಕರನ್ನುದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಲಿದ್ದು ,ವಿಜಯಪುರದಲ್ಲಿಯೇ ವಾಸ್ತವ್ಯ ಮಾಡಲಿದ್ದಾರೆ ಸರಿಸುಮಾರು 1 ಲಕ್ಷಕ್ಕೂ ಅಧಿಕ ಜನರು ಈ ರ್ಯಾಲಿಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪೆÇ್ರ.ರಾಜು ಆಲಗೂರ, ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್, ಡಾ.ಮಹಾಂತೇಶ ಬಿರಾದಾರ ಮೊದಲಾದವರು ಪತ್ರಿಕಾಗೋಷ್ಠೀಯಲ್ಲಿ ಉಪಸ್ಥಿತರಿದ್ದರು.
ಕೂಡಲಸಂಗಮದಲ್ಲಿ ಬಸವ ಜಯಂತಿಯಲ್ಲಿ ರಾಹುಲ್ ಭಾಗಿ:
ಎಐಸಿಸಿ ನಾಯಕ ರಾಹುಲ್ ಗಾಂಧಿ .23 ರಂದು ಬೆಳಿಗ್ಗೆ ಕೂಡಲಸಂಗಮದಲ್ಲಿರುವ ಬಸವಣ್ಣನವರ ಐಕ್ಯಮಂಟಪಕ್ಕೆ ನಮನ ಸಲ್ಲಿಸಲಿದ್ದು, ನಂತರ ಬಸವ ಭವನದಲ್ಲಿ ಆಯೋಜಿಸಲಾಗಿರುವ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಕೂಡಲಸಂಗಮದಲ್ಲಿ ನಡೆಯಲಿರುವ ಕಾರ್ಯಕ್ರಮ ರಾಜಕೀಯ ಕಾರ್ಯಕ್ರಮವಲ್ಲ, ಬಸವ ಉತ್ಸವ ಸಮಿತಿ ನೇತೃತ್ವದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಬಸವ ಜಯಂತಿ ಉತ್ಸವದಲ್ಲಿ ತೋಂಟದಾರ್ಯ ಮಠದ ಡಾ.ಸಿದ್ಧರಾಮ ಮಹಾಸ್ವಾಮೀಜಿ ಅವರು ಬಸವಾದಿ ಶರಣರು, ಬಸವ ತತ್ವದ ಬಗ್ಗೆ ಮಾತನಾಡಲಿದ್ದಾರೆ. ಕೂಡಲಸಂಗಮ ಪಂಚಮಸಾಲಿ ಜಗದ್ಗುರುಗಳು, ಭಾಲ್ಕಿ ಜಗದ್ಗುರುಗಳು ಸೇರಿದಂತೆ ಹಲವಾರು ಮಠಾಧೀಶರಿಗೆ ಆಹ್ವಾನ ನೀಡಲಾಗಿದೆ ಎಂದರು.
ನಾಳೆ ಬೆಳಿಗ್ಗೆ ಹೈದರಾಬಾದ್ ಮೂಲಕ 11.30ಕ್ಕೆ ಕೂಡಲಸಂಗಮಕ್ಕೆ ರಾಹುಲ್ ಗಾಂಧೀ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಲಿದ್ದಾರೆ, ನಂತರ ಕೂಡಲಸಂಗಮದ ಐಕ್ಯಮಂಟಪಕ್ಕೆ ನಮನ ಸಲ್ಲಿಸಲಿದ್ದು, ನಂತರ 1.30 ರವರೆಗೆ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ, ನಂತರ ಜನಸಾಮಾನ್ಯರ ಸಮ್ಮುಖದಲ್ಲಿಯೇ ದಾಸೋಹ ಭವನದಲ್ಲಿ ದಾಸೋಹ ಸ್ವೀಕರಿಸುವ ಆಶಯ ವ್ಯಕ್ತಪಡಿಸಿದ್ದಾರೆ ಎಂದು ಪಾಟೀಲ ತಿಳಿಸಿದರು.
ಇದು ಸಂಪೂರ್ಣ ರಾಜಕೀಯ ರಹಿತ ಕಾರ್ಯಕ್ರಮವಾಗಿದ್ದು, ಯಾವ ಪಕ್ಷದ ಬ್ಯಾನರ್ ಅಲ್ಲಿರುವುದಿಲ್ಲ ಎಂದರು.
ಲಿಂಗಾಯತರು ಮರಳಿ ಮನೆಗೆ:
ಲಿಂಗಾಯತ ನಾಯಕರು ಬಿಜೆಪಿಯಲ್ಲಿರುವ ವಾತಾವರಣದಿಂದ ಗಾಬರಿಯಾಗಿದ್ದು, ಮರಳಿ ಕಾಂಗ್ರೆಸ್ ಮನೆಗೆ ಬರುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ನಾಯಕರನ್ನು ಬಿಜೆಪಿ ದಮನ ಮಾಡುತ್ತಿದೆ, ಈಗ ವಿರೇಂದ್ರ ಪಾಟೀಲರ ಹೆಸರನ್ನು ಪ್ರಸ್ತಾಪಿಸುತ್ತಿದೆ, ವಿರೇಂದ್ರ ಪಾಟೀಲರಿಗೆ ಅನಾರೋಗ್ಯ ಸಮಸ್ಯೆ ಎದುರಾಗಿತ್ತು, ಮುಖ್ಯಮಂತ್ರಿಗಳಿಗೆ ಕಾರ್ಯನಿರ್ವಹಿಸಲು ಅವರಿಗೆ ತೊಂದರೆಯಾದ ಕಾರಣ ರಾಜ್ಯದ ಹಿತದೃಷ್ಟಿಯಿಂದ ಅವರನ್ನು ಬದಲಾಯಿಸಲಾಯಿತು, ಆದರೆ ಯಡಿಯೂರಪ್ಪನವರಿಗೆ ಯಾವ ಸಮಸ್ಯೆಯೂ ಇರಲಿಲ್ಲ, ಆಪರೇಷನ್ ಕಮಲ ಮಾಡಿಸಲು ಯಡಿಯೂರಪ್ಪನವರಿಗೆ ಪೆÇ್ರೀತ್ಸಾಹಿಸಿ ಅವರಿಗೆ ಕೆಟ್ಟ ಹೆಸರು ತಂದು ನಂತರ ಅವರನ್ನು ಕೈ ಬಿಡಲಾಯಿತು. ಒಬ್ಬ ಲಿಂಗಾಯತ ಹಿರಿಯ ಮುತ್ಸದ್ಧಿ ನಾಯಕ ಯಡಿಯೂರಪ್ಪ ಅವರನ್ನು ಕೆಳಗಿಳಿಸಿ ಬಸವರಾಜ ಬೊಮ್ಮಾಯಿ ಅವರಿಗೆ ಪ್ರತಿಷ್ಠಾಪನೆ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿ ಹಿಡನ್ ಅಜೆಂಡಾ ಇರಿಸಿಕೊಂಡಿದೆ. ಆಗಿನ ಪರಿಸ್ಥಿತಿಗೆ ಹೆದರಿ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು.
ಜಗದೀಶ ಶೆಟ್ಟರ್, ಲಕ್ಷ್ಮಣ ಸವದಿಗೆ ಆಗಿರುವ ಪರಿಸ್ಥಿತಿ ಬಸವರಾಜ ಬೊಮ್ಮಾಯಿ ಅವರಿಗೂ ಬರಲಿದೆ, ಬಿಜೆಪಿ ಹಿಡನ್ ಅಜೆಂಡಾ ಈಗ ಸ್ಪಷ್ಟವಾಗುತ್ತಾ ಸಾಗಿದೆ.
ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಶಾಸಕಾಂಗ ಪಕ್ಷದ ಸಭೆ ನಡೆಯುತ್ತದೆ.ಎಲ್ಲ ಶಾಸಕರ ಒಟ್ಟಾಭಿಪ್ರಾಯ ಸಂಗ್ರಹಿಸಿ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡುತ್ತಾ ಬರಲಾಗುತ್ತಿದೆ, ಈ ಸಂಪ್ರದಾಯ ಜನರಿಗೂ ಗೊತ್ತಿದೆ, ಆದರೂ ಸಹ ಬಿಜೆಪಿ ಈ ವಿಷಯದಲ್ಲಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ, ಬಿಜೆಪಿ ಹಿಡನ್ ಅಜೆಂಡಾ ಬಗ್ಗೆ ಲಿಂಗಾಯತರಿಗೆ ಅರಿವಾಗಿದೆ ಎಂದರು.ನಮ್ಮ ಹೈಕಮಾಂಡ್ ಬಯಸಿದರೆ ಯಾರೂ ಬೇಕಾದರೂ ಮುಖ್ಯಮಂತ್ರಿ ಆಗಬಹುದು, ಸಿದ್ಧರಾಮಯ್ಯ, ಡಿ.ಕೆ. ಶೀವಕುಮಾರ, ಡಾ.ಪರಮೇಶ್ವರ, ನಾನು, ಕೃಷ್ಣ ಭೈರೇಗೌಡ ಹೀಗೆ ಅನೇಕ ಸಮರ್ಥ ನಾಯಕರಿದ್ದಾರೆ, ನಾನು ಸಹ ಒಬ್ಬ ಸಮರ್ಥ ನಾಯಕ ಎಂದು ಹೇಳಬಲ್ಲೆ, ಆದರೂ ಸಹ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.