ನಾಳೆ ವಯನಾಡಿಗೆ ರಾಹುಲ್ ಭೇಟಿ

ನವದೆಹಲಿ,ಏ.೧೦- ಮೋದಿ ಉಪನಾಮದ ಮಾನಹಾನಿ ಪ್ರಕರಣದಲ್ಲಿ ಲೋಕಸಭಾ ಸದಸ್ಯಸ್ಥಾನದಿಂದ ಅನರ್ಹಗೊಂಡಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ನಾಳೆ ತಾವು ಪ್ರತಿನಿಧಿಸಿದ್ದ ಕೇರಳದ ವಯನಾಡು ಲೋಕಸಭಾ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ.ತಮ್ಮ ಭೇಟಿಯ ವೇಳೆ ಅವರು ವಯನಾಡಿನಲ್ಲಿ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ.೨೦೧೯ ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿ ಅವರನ್ನು ಸೂರತ್ ನ್ಯಾಯಾಲಯ ದೋಷಿ ಮತ್ತು ಶಿಕ್ಷೆ ವಿಧಿಸಿದ ನಂತರ ಲೋಕಸಭೆಯಿಂದ ಅವರನ್ನು ಅನರ್ಹ ಮಾಡಲಾಗಿದೆ.೨೦೧೯ ರ ಲೋಕಸಭೆ ಚುನಾವಣೆಗೆ ಮುನ್ನ ಪ್ರಚಾರ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ‘ಮೋದಿ’ ಎಂಬ ಉಪನಾಮವನ್ನು ಬಳಸಿ ಮಾಡಿದ ಹೇಳಿಕೆಗೆ ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡಿದ್ದಾರೆ.೨೦೧೯ ರ ಏಪ್ರಿಲ್‌ನಲ್ಲಿ ಕರ್ನಾಟಕದ ಕೋಲಾರದಲ್ಲಿ ನಡೆದ ರ್‍ಯಾಲಿಯಲ್ಲಿ, ಪ್ರಧಾನಿ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡ ರಾಹುಲ್, “ಎಲ್ಲಾ ಕಳ್ಳರಿಗೆ ಮೋದಿ ಸಾಮಾನ್ಯ ಉಪನಾಮ ಹೇಗೆ ಎಂದು ಪ್ರಶ್ನಿಸಿದ್ದರು.೨೦೧೩ರಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪಿನ ಪ್ರಕಾರ ಮಾರ್ಚ್ ೨೪ ರಂದು ರಾಹುಲ್ ಅವರನ್ನು ಸಂಸದರಾಗಿ ಅನರ್ಹಗೊಳಿಸಲಾಯಿತು. ಈ ತೀರ್ಪಿನ ಪ್ರಕಾರ, ಯಾವುದೇ ಸಂಸದರು ಅಥವಾ ಶಾಸಕರು ತಪ್ಪಿತಸ್ಥರೆಂದು ಸಾಬೀತಾದರೆ ಮತ್ತು ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಶಿಕ್ಷೆಯಾದರೆ ಸ್ವಯಂ ಪ್ರೇರಿತರಾಗಿ ಅನರ್ಹರಾಗುತ್ತಾರೆ.ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಮಾಜಿ ಸಂಸದ ಗುಲಾಂ ನಬಿ ಆಜಾದ್, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ನಾಯಕ ಅನಿಲ್ ಆಂಟೋನಿ ಮತ್ತು ಮಾಜಿ ಮಾಜಿ ಮುಖ್ಯಮಂತ್ರಿ ಕಿರಣ್ ರೆಡ್ಡಿ ಸೇರಿದಂತೆ ಪಕ್ಷ ಬಿಟ್ಟ ಅನೇಕ ನಾಯಕರ ವಿರುದ್ದ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಮಾನನಷ್ಟ ಪ್ರಕರಣ ಹೂಡಿಕೆ:
ಈ ಕುರಿತು ಪ್ರತಿಕ್ರಿಯಿಸಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಅದಾನಿ ಗ್ರೂಪ್‌ಗೆ ಲಿಂಕ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ.
“ರಾಹುಲ್ ಗಾಂಧಿ ಯಾವುದೇ ಟ್ವೀಟ್ ಮಾಡಿದ್ದರೂ ಅದು ಮಾನಹಾನಿಕರವಾಗಿದೆ. ಹಾಗಾಗಿ ಪ್ರಧಾನಿ ಅಸ್ಸಾಂನಿಂದ ಹಿಂತಿರುಗಿದ ನಂತರ ನಾವು ಟ್ವೀಟ್‌ಗೆ ಪ್ರತಿಕ್ರಿಯಿಸುತ್ತೇವೆ ಮತ್ತು ಖಂಡಿತವಾಗಿಯೂ ಗುವಾಹಟಿಯಲ್ಲಿ ಮಾನನಷ್ಟ ಮೊಕದ್ದಮೆ ಹೂಡುತ್ತೇವೆ” ಎಂದು ಅವರು ಹೇಳಿದ್ದಾರೆ.