ನಾಳೆ ಲೋಕಾರ್ಪಣೆ

ಹುಬ್ಬಳ್ಳಿ,ಜು21 : ಸುದೀರ್ಘ ಸೇವೆಯಲ್ಲಿರುವ ಪ್ರಿಯದರ್ಶಿನಿ ವಿವಿಧೋದ್ದೇಶಗಳ ಸಹಕಾರ ಸಂಘದ ನೂತನ ಧಾರವಾಡ ಶಾಖೆಯ ಉದ್ಘಾಟನಾ ಸಮಾರಂಭವು ಸಂಘದ ಸಂಸ್ಥಾಪಕರಾದ ಶರಣಪ್ಪ ಕೊಟಗಿ ರವರ ಜನ್ಮದಿನದಂದು ನಾಳೆ ಧಾರವಾಡದ ಕನ್ನಡ ಕುಲಪುರೋಹಿತ ಆಲೂರ ವೆಂಕಟರಾವ್ ಭವನದಲ್ಲಿ ಜರುಗಲಿದೆ.
ಸಮಾಜಸೇವಕ ಹಾಗೂ ಶಿಕ್ಷಣ ಪ್ರೇಮಿಯಾದ ಡಾ. ಶರಣಪ್ಪ ಕೊಟಗಿ ಅವರ ದೂರದೃಷ್ಟಿಯ ಹಾಗೂ ಧಾರವಾಡ ಜಿಲ್ಲೆಯ ಗ್ರಾಹಕರಿಗೆ ಪ್ರಿಯದರ್ಶಿನಿ ವಿವಿದೋದ್ದೇಶ ಸಹಕಾರ ಸಂಘದಿಂದ ಲಾಭ ದೊರೆಯಲಿ ಎಂಬ ಸದುದ್ದೇಶದಿಂದ ಈ ಸಹಕಾರ ಸಂಘ ಲೋಕಾರ್ಪಣೆಗೊಳ್ಳಲಿದೆ.
ಧಾರವಾಡ ಮುರುಘಾಮಠದ ಶ್ರೀ. ಮ.ನಿ.ಪ್ರ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿ ಅವರು ಕಾರ್ಯಕ್ರಮ ಸಾನಿಧ್ಯ ವಹಿಸಲಿದ್ದು, ಮಾಜಿ ಸಭಾಪತಿ ಡಾ. ವೀರಣ್ಣ ಮತ್ತಿಕಟ್ಟಿ ಅಧ್ಯಕ್ಷತೆ ವಹಿಸುವರು. ಹಿರಿಯ ಸಹಕಾರಿ ಧುರೀಣ ಮಾಜಿ ಸಚಿವ, ಶಾಸಕ ಎಚ್.ಕೆ ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ ಶೇರು ಪತ್ರ ಬಿಡುಗಡೆಗೊಳಿಸುವರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಠೇವಣಿ ಪತ್ರ ಬಿಡುಗಡೆ ಮಾಡುವರು. ಕೆಪಿಸಿಸಿ ಕಾಯಾಧ್ಯಕ್ಷ, ಶಾಸಕ ಈಶ್ವರ ಖಂಡ್ರೆ ಪಿಗ್ಮಿದಾರರನ್ನು ಸನ್ಮಾನಿಸುವರು. ಮುಖ್ಯ ಅತಿಥಿಗಳಾಗಿ ಶಾಸಕರಾದ ಪ್ರಸಾದ ಅಬ್ಬಯ್ಯ, ಶ್ರೀನಿವಾಸ ಮಾನೆ, ಕುಸುಮಾವತಿ ಶಿವಳ್ಳಿ ಆಗಮಿಸುವರು ಎಂದು ಪ್ರಿಯದರ್ಶಿನಿ ವಿವಿಧೋದ್ದೇಶಗಳ ಸಹಕಾರ ಸಂಘದ ಕಾರ್ಯದರ್ಶಿ ಅಮರಯ್ಯ ಗೌರಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.