
ಸಕಲ ಸಿದ್ಧತೆ
ನಾಳೆ ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗಕ್ಕೆ ಸಕಲ ಸಿದ್ಧತೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಧರ್ಮರಾಯ ದೇವಸ್ಥಾನ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ.
ಬೆಂಗಳೂರು, ಏ.೫-ಇತಿಹಾಸ ಪ್ರಸಿದ್ಧ ಬೆಂಗಳೂರು ಧರ್ಮರಾಯಸ್ವಾಮಿ ಕರಗ ಶಕ್ತ್ಯೋತ್ಸವ ನಾಳೆ ಜರುಗಲಿದ್ದು, ಈ ಬಾರಿ ಕರಗವನ್ನು ಅತ್ಯಂತ ಸಡಗರ, ಸಂಭ್ರಮದೊಂದಿಗೆ ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ತುದಿಗಾಲಲ್ಲಿ ನಿಂತಿದ್ದಾರೆ.
ನಾಳೆ (ಏಪ್ರಿಲ್ ೬) ಚೈತ್ರ ಪೌರ್ಣಿಮೆಯ ಬೆಳದಿಂಗಳ ಬೆಳಕಲ್ಲಿ ಕರಗ ನಡೆಯಲಿದ್ದು, ಮಧ್ಯರಾತ್ರಿ ೧೨.೩೦ಕ್ಕೆ ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಹೊರಡುವ ಹೂವಿನ ಕರಗಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾಗಲಿದ್ದಾರೆ. ಇನ್ನೂ, ಈ ಬಾರಿಯೂ ಕರಗವನ್ನು ತಿಗಳ ಸಮುದಾಯದ ಅರ್ಚಕ ವಿ.ಜ್ಞಾನೇಂದ್ರ ಅವರು ಹೊರಲಿದ್ದಾರೆ.ಇಂದು ಸಂಜೆಯಿಂದಲೇ ಬಹು ನಿರೀಕ್ಷೆಯ ಮಲ್ಲಿಗೆಯಿಂದ ಅಲಂಕೃತಗೊಂಡ ಕರಗ ನೋಡಲು ಸಾಕಷ್ಟುಸಂಖ್ಯೆಯಲ್ಲಿ ಜನರು ತಿಗಳರಪೇಟೆಯಲ್ಲಿರುವ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದ ಭೇಟಿ ನೀಡಲಿದ್ದಾರೆ. ಸದ್ಯ ಉತ್ಸವದ ಪ್ರಯುಕ್ತ ದೇವಾಲಯದ ಸುತ್ತಮುತ್ತ ಗ್ರಾಮೀಣ ಜಾತ್ರೆಯ ವೈಭವ ಕಂಡುಬಂದಿದೆ.
ದೇವಸ್ಥಾನದ ಪ್ರಾಕಾರ ಹಾಗೂ ರಾಜಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರ, ವೀರಕುಮಾರರ ಅಲಗು ಸೇವೆ, ಶಂಖನಾದ, ಗುಡಿಯ ಗಂಟೆಗಳ ಸದ್ದು, ಗೋವಿಂದನ ನಾಮಸ್ಮರಣೆ ಸಡಗರಕ್ಕೆ ಮತ್ತಷ್ಟು ಮೆರುಗು ನೀಡಲಿದೆ. ಕರಗ ಸಾಗುವ ವೇಳೆ ಭಕ್ತರು ಮಲ್ಲಿಗೆಯ ಹೂಮಳೆಯ ಸುರಿಸಿ ಭಕ್ತಿಯಲ್ಲಿ ಮಿಂದಿದೆದ್ದಲಿದ್ದಾರೆ.
ಅಷ್ಟೇ ಅಲ್ಲದೆ, ಕರಗ ವೀಕ್ಷಿಸಲು ನಗರದ ತಿಗಳರಪೇಟೆ ಹಾಗೂ ಸುತ್ತಮುತ್ತಲ ನಾನಾ ಭಾಗದ ಜನರು ಸೇರಿದಂತೆ ಮಾಲೂರು, ಹೊಸಕೋಟೆ, ನೆಲಮಂಗಲ, ತುಮಕೂರು, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಕೋಲಾರ, ತಮಿಳುನಾಡಿನ ಹೊಸೂರು, ಕೃಷ್ಣಗಿರಿ, ಧರ್ಮಪುರಿ, ಸೇಲಂ, ಸುಳಗಿರಿ, ಚಪ್ಪಡಿ, ಡೆಂಕಣಿಕೋಟೆ, ಗುಮ್ಮಳಾಪುರ, ಈರೋಡ್, ಸೇಲಂ ಮುಂತಾದ ಕಡೆಗಳಿಂದ ತಿಗಳ ಸಮುದಾಯ ಸೇರಿದಂತೆ ವಿವಿಧ ಧರ್ಮೀಯ ಭಕ್ತರಸಮೂಹವೇ ಹರಿದುಬರಲಿದೆ.
ಭಾವೈಕ್ಯದ ಸಂಕೇತ: ಕಲ್ಯಾಣಪುರಿ ನಾಮಧೇಯದಿಂದ ಪ್ರಖ್ಯಾತವಾಗಿರುವ ನಗರದ ತಿಗಳರಪೇಟೆಯ ಬೆಂಗಳೂರು ಕರಗ ಉತ್ಸವ ಕೋಮು ಸೌಹಾರ್ದತೆಯ ಪ್ರತೀಕವಾಗಿದೆ. ಉತ್ಸವದಂದು ಕರಗ ಮಧ್ಯರಾತ್ರಿ ಅಕ್ಕಿಪೇಟೆಯ ಮಸ್ತಾನ್ ಸಾಹೇಬರ ದರ್ಗಾಕ್ಕೆ ಪದ್ಧತಿಯಂತೆ ಪೂಜೆ ಸಲ್ಲಿಸಲಿದೆ. ಯಾವುದೇ ಭೇದ ಭಾವವಿಲ್ಲದೆ ಹಿಂದೂ ಮುಸ್ಲಿಂ ಜನಾಂಗದವರು ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.ಇನ್ನೂ, ಕರಗದ ಮೆರವಣಿಗೆಯು ತಿಗಳರಪೇಟೆಯ ಧರ್ಮರಾಯಸ್ವಾಮಿ ದೇವಾಲಯದಿಂದ ಹೊರಟು ಹಲಸೂರುಪೇಟೆ ಆಂಜನೇಯ ಸ್ವಾಮಿ ದೇವಸ್ಥಾನ, ಶ್ರೀರಾಮ ದೇವಾಲಯ ಮತ್ತು ಪ್ರಸನ್ನ ಗಂಗಾಧರೇಶ್ವರಸ್ವಾಮಿ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಲಿದೆ. ನಂತರ ನಗರ್ತಪೇಟೆಯ ವೇಣುಗೋಪಾಲಸ್ವಾಮಿ ದೇವಾಲಯದಿಂದ ಭೈರೇದೇವರ ದೇವಾಲಯದ ಮಾರ್ಗವಾಗಿ ಕಬ್ಬನ್ ಪೇಟೆಯ ಶ್ರೀರಾಮಸೇವಾ ಮಂದಿರ, ೧೫ನೇ ಗಲ್ಲಿ ಹಾಗೂ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಲಿದೆ.ಬಳಿಕ ಮಕ್ಕಳ ಬಸವಣ್ಣ ಗುಡಿ, ಗಾಣಿಗರ ಪೇಟೆ ಚೆನ್ನರಾಯಸ್ವಾಮಿ ದೇವಸ್ಥಾನದಿಂದ ಅವಿನ್ಯೂ ರಸ್ತೆ, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ರಸ್ತೆ, ರಾಣಾಸಿಂಗ್ ಪೇಟೆ ರಸ್ತೆ, ಮಸ್ತಾನ್ ಸಾಬ್ ದರ್ಗಾ, ಬಳೇಪೇಟೆ, ಅಣ್ಣಮ್ಮ ದೇವಸ್ಥಾನ, ಕಿಲಾರಿ ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಕುಂಬಾರ ಪೇಟೆ, ಕಬ್ಬನ್‌ಪೇಟೆ ಮಾರ್ಗವಾಗಿ ಪುನಃ ತಿಗಳರಪೇಟೆಗೆ ಬಂದು ಸೇರಲಿದೆ.ಕರಗದ ವೇಳೆ ಯಾವುದೇ ಅನಾಹುತ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಇದೇ ಮಾರ್ಚ್ ೨೯ಕ್ಕೆ ಕರಗ ಉತ್ಸವ ಆರಂಭವಾಗಿದ್ದು, ಬರೋಬ್ಬರಿ ೧೧ ದಿನಗಳ ಕಾಲ ಅಂದರೆ ಏಪ್ರಿಲ್ ೮ರವರೆಗೆ ನಾನಾ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಧರ್ಮರಾಯಸ್ವಾಮಿ ಕರಗ ಅತ್ಯಂತ ಅದ್ಧೂರಿಯಾಗಿ ನಡೆಯಲಿದೆ.