ನಾಳೆ ರಾಜ್ಯಕ್ಕೆ ನಡ್ಡಾ ಭೇಟಿ

ಬೆಂಗಳೂರು,ಜ.೨೦:ವಿಧಾನಸಭಾ ಚುನಾವಣೆ ಸನ್ನಿಹಿತವಾಗುತ್ತಿರುವಂತೆಯೇ ಬಿಜೆಪಿ ರಾಷ್ಟ್ರೀಯ ನಾಯಕರುಗಳ ರಾಜ್ಯಭೇಟಿ ಹೆಚ್ಚುತ್ತಿದ್ದು, ಪ್ರಧಾನಿ ಮೋದಿ ಅವರು ಒಂದೇ ವಾರದಲ್ಲಿ ರಾಜ್ಯಕ್ಕೆ ಎರಡು ಬಾರಿ ಭೇಟಿ ನೀಡಿದ್ದ ಬೆನ್ನಲ್ಲೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸಹ ನಾಳೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಬಿಜೆಪಿಯ ವಿಜಯಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡುವರು.
ಮುಂದಿನ ವಿಧಾನಸಭಾ ಚುನಾವಣೆಗೆ ಸರ್ವರೀತಿಯಲ್ಲೂ ತಯಾರಿ ನಡೆಸಿರುವ ಬಿಜೆಪಿ, ನಾಳೆಯಿಂದ ವಿಜಯ ಸಂಕಲ್ಪ ಅಭಿಯಾನ ಆರಂಭಿಸುತ್ತಿದ್ದು, ಈ ಯಾತ್ರೆಗೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ವಿಜಯಪುರದ ನಾಗಠಾಣಾ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಈ ಅಭಿಯಾನವನ್ನು ಉದ್ಘಾಟಿಸುವರು.ನಾಳೆ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಕಲಬುರಗಿಗೆ ಆಗಮಿಸುವ ಜೆ.ಪಿ. ನಡ್ಡಾ ವಿಜಯಪುರದ ಜ್ಞಾನಯೋಗಾಶ್ರಮಕ್ಕೆ ಭೇಟಿ ನೀಡಿ ಶ್ರೀ ಸಿದ್ದೇಶ್ವರ ಸ್ವಾಮೀಜಿರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಅಲ್ಲಿಂದ ನಾಗಠಾಣಾ ವಿಧಾನಸಭಾ ಕ್ಷೇತ್ರಕ್ಕೆ ತೆರಳಿ ವಿಜಯಸಂಕಲ್ಪ ಅಭಿಯಾನ ಉದ್ಘಾಟಿಸುವರು. ಜತೆಗೆ ಮನೆ ಮನೆಗೆ ಭೇಟಿ ನೀಡಿ ಕರಪತ್ರ ವಿತರಣೆಯನ್ನೂ ಮಾಡಲಿರುವ ಜೆ.ಪಿ. ನಡ್ಡಾ ಅವರು, ಗೋಡೆಬರಹ ಅಭಿಯಾನದಲ್ಲೂ ಭಾಗಿಯಾಗುವರು. ನಂತರ ಸಿಂಧಗಿ ಕ್ಷೇತ್ರಕ್ಕೆ ತೆರಳಿ ಅಲ್ಲಿ ಬಿಜಪೆಯ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಗುಲ್ಬರ್ಗಾದಿಂದ ನಾಳೆ ರಾತ್ರಿಯೇ ದೆಹಲಿಗೆ ವಾಪಸ್ ತೆರಳುವರು.
ಬಿಜೆಪಿಯ ವಿಜಯಸಂಕಲ್ಪ ಅಭಿಯಾನ ನಾಳೆಯಿಂದ ಜ. ೨೯ರವರೆಗೂ ನಡೆಯಲಿದ್ದು, ಈ ಅಭಿಯಾನದಲ್ಲಿ ಕೇಂದ್ರ ಹಾಗೂ ರಾಜ್ಯಸರ್ಕಾರಗಳ ಸಾಧನೆ, ಕಾರ್ಯಕ್ರಮಗಳ ಕುರಿತು ಮನೆ ಮನೆಗೆ ಕರಪತ್ರಗಳ ಹಂಚಿಕೆ ಮಾಡಿ ೨ ಕೋಟಿ ಮತದಾರರ ಸಂಪರ್ಕಿಸುವ ಉದ್ದೇಶವನ್ನು ಬಿಜೆಪಿ ಹೊಂದಿದೆ. ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಈ ಅಭಿಯಾನ ನಡೆಯಲಿದೆ.