ನಾಳೆ ರಾಜಮಾರ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ

ಮೈಸೂರು: ಏ.29:- ಅರಮನೆ ನಗರಿ ಮೈಸೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಬಿಜೆಪಿ ಅಭ್ಯರ್ಥಿ ಗಳ ಪರವಾಗಿ ಎ.30ರಂದು ಬೃಹತ್ ಚುನಾವಣಾ ಪ್ರಚಾರ ರ್ಯಾಲಿಯನ್ನು ನಡೆಸಲಿದ್ದಾರೆ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.
ಶುಕ್ರವಾರ ವಾಣಿವಿಲಾಸ ರಸ್ತೆಯಲ್ಲಿರುವ ಬಿಜೆಪಿ ಮೈಸೂರು ವಿಭಾಗ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು, ದೆಹಲಿಯಿಂದ ನೇರವಾಗಿ ಮೈಸೂರಿನ ಮಹಾರಾಜ ಕಾಲೇಜ್ ಮೈದಾನಕ್ಕೆ ಆಗಮಿಸಲಿರುವ ನರೇಂದ್ರ ಮೋದಿಯವರು ಅವರನ್ನು ಮೈಸೂರಿನ ಪಾರಂಪರಿಕ ವಸ್ತುಗಳಾದ ವಿಳ್ಯದೆಲೆ, ಶ್ರೀಗಂಧದ ಕಡ್ಡಿ, ಮೈಸೂರು ಸಿಲ್ಕ್ ಬಟ್ಟೆ ಮುಂತಾದವುಗಳನ್ನು ನೀಡಿ ಸ್ವಾಗತಿಸಲಾಗುವುದು. ನಾದಸ್ವರ ಸೇರಿದಂತೆ ಜಾನಪದ ಕಲಾತಂಡಗಳು, ಪೂರ್ಣ ಕುಂಭ ಹೊತ್ತ ಮಹಿಳೆಯರು ಭರ್ಜರಿ ಸ್ವಾಗತವನ್ನು ನೀಡಲಿದ್ದಾರೆ ಎಂದರು.
ಬಳಿಕ ಮೋದಿಯವರು ಕಾರ್‍ನ ಬಾಗಿಲ ಬಳಿ ನಿಂತುಕೊಂಡೆ ಮುಡಾ, ರಾಮಸ್ವಾಮಿ ಸರ್ಕಲ್, ಚಾಮರಾಜ ನೂರಡಿ ರಸ್ತೆ ಮೂಲಕ ಗನ್ ಹೌಸ್‍ಗೆ ಆಗಮಿಸಲಿದ್ದಾರೆ. ಸಂಜೆ 5.30 ಕ್ಕೆ ತರೆದ ವಾಹನದಲ್ಲಿ ರೋಡ್ ಶೋ ರ್ಯಾಲಿಯನ್ನು ಪ್ರಾರಂಭಿಸಲಿದ್ದಾರೆ. ಅವರನ್ನು ಸುಮಾರು 30ಕ್ಕೂ ಹೆಚ್ಚು ಕಲಾತಂಡಗಳು, ಮೈಸೂರಿನ ಪಾರಂಪರಿಕ ವೇಷಭೂಷಗಳನ್ನು ಧರಿಸಿದ 30ಸಾವಿರಕ್ಕೂ ಹೆಚ್ಚು ಜನರು ದಾರಿಯ ಉದ್ದಕ್ಕೂ ಸ್ವಾಗತಿಸಲಿದ್ದಾರೆಂದರು.
ರ್ಯಾಲಿ ಸಂಸ್ಕೃತ ಪಾಠಶಾಲೆ, ನಗರಪಾಲಿಕೆ, ಸಿಟಿ ಬಸ್ ಸ್ಟ್ಯಾಂಡ್, ಕೆಆರ್ ಸರ್ಕಲ್, ಸಯ್ಯಾಜಿರಾವ್ ರಸ್ತೆ, ಆಯುರ್ವೇದ ವೃತ್ತ, ಆರ್‍ಎಂಸಿ, ಮಿಲಿಯನ್ ಸರ್ಕಲ್ ತನಕ ಸಾಗಲಿದ್ದು, ಸುಮಾರು ಒಂದ ಲಕ್ಷಕ್ಕೂ ಹೆಚ್ಚು ಮಂದಿ ಈ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಮೋದಿಯವರು ಹಾದುಹೋಗುವ ರಸ್ತೆ ಇಕ್ಕಲೆಗಳಲ್ಲಿ ಪಾರಂಪರಿಕ ಉಡುಗೆ ತೊಟ್ಟ ಜನರು ಸ್ವಾಗತಿಸಲಿದ್ದಾರೆ. ಅಲ್ಲದೆ ರಸ್ತೆ ಇಕ್ಕಲಗಳಲ್ಲಿ ಪ್ರಧಾನ ಪ್ರಧಾನಿ ನರೇಂದ್ರ ಮೋದಿಯವರು ನಡೆದು ಬಂದ ಹಾದಿ, ಅವರು ಮಾಡಿದ ಅಭಿವೃದ್ಧಿ ಕಾರ್ಯಗಳು, ನೀಡಿದ ಕೊಡುಗೆಗಳು, ಲಾಲ್ ಚೌಕ್ ನಲ್ಲಿ ಬಾಲಕನಾಗಿದ್ದಾಗ ರಾಷ್ಟ್ರ ಧ್ವಜ ಹಾರಿಸಿದ ಚಿತ್ರದಿಂದ ಹಿಡಿದು,ಜಿ.20 ವಿಶ್ವದ ನಾಯಕನಾಗಿ ಬೆಳೆದ ಬಗೆ, ಮಾಡಿದ ಸಾಧನೆಗಳು ಮುಂತಾದವುಗಳ ಭಿತ್ತಿ ಚಿತ್ರಗಳನ್ನು ಹಾಕಲಾಗುವುದು ಎಂದು ಹೇಳಿದರು.
ಮೋದಿಯವರು ಹೊಂದಿರುವ ದೂರ ದೃಷ್ಟಿ ಕಲ್ಪನೆ ಮತ್ತು ಸಾಕಾರಗಳನ್ನು ತೋರಿಸಲಾಗುವುದು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಹಿರಿಯ ನಾಗರಿಕರು ನೋಡಲು ಅನುಕೂಲವಾಗುವಂತೆ ಐದು ಸ್ಥಳಗಳಲ್ಲಿ ಆಸನಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಸುಮಾರು ನಾಲ್ಕು ಕಿಲೋಮೀಟರ್ ರ್ಯಾಲಿಯನ್ನು ನಡೆಸಲಿರುವ ಮೋದಿಯವರು, ಮಿಲಿಯಮ್ ಸರ್ಕಲ್ ನಲ್ಲಿ ರ್ಯಾಲಿಯನ್ನು ಮುಕ್ತಾಯಗೊಳಿಸಲಿದ್ದು, ಅಲ್ಲಿಂದ ನೇರವಾಗಿ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ದೆಹಲಿಗೆ ತೆರಳಲ್ಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಸದ ಪ್ರತಾಪ್‍ಸಿಂಹ, ಕೆ.ಆರ್.ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಟಿ.ಎಸ್.ಶ್ರೀ ವತ್ಸ, ಮೈಸೂರು ವಿಭಾಗ ಪ್ರಭಾರಿ ಮೈ.ವಿ.ರವಿಶಂಕರ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಯಶಸ್ವಿ ಸೋಮಶೇಖರ್, ಮಾಜಿ ಅಧ್ಯಕ್ಷ ಎಚ್ .ವಿ. ರಾಜೀವ್ ಮೈಸೂರು ಜಿಲ್ಲಾ ಬಿಜೆಪಿ ಸಹ ವಕ್ತಾರ ಡಾ. ಕೆ ವಸಂತ್ ಕುಮಾರ್, ನಗರ ವಕ್ತಾರ ಎಂಎ ಮೋಹನ್ , ಮೈಸೂರು ವಿಭಾಗ ಮಾಧ್ಯಮ ಕೇಂದ್ರದ ಸಂಯೋಜಕ ನಾಗೇಶ್, ಜಿಲ್ಲಾ ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್ ಮತ್ತಿತರರು ಉಪಸ್ಥಿತರಿದ್ದರು.