ನಾಳೆ ಯಾದಗಿರಿ ಜಿಲ್ಲೆಗೆ ಪ್ರಧಾನಿ ಆಗಮನ

ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಭೂಮಿಪೂಜೆ
ರಾಯಚೂರು,ಜ.೧೮- ಪ್ರಧಾನಮಂತ್ರಿ ನರೇಂದ್ರ ಮೋದಿ ನಾಳೆ(ಜ.೧೯ ರಂದು) ನಾರಾಯಣಪುರ ಎಡದಂಡೆ ಕಾಲುವೆಯ ವಿಸ್ತರಣೆ, ಪುನಶ್ಚೇತನ ಹಾಗೂ ನವೀಕರಣ ಯೋಜನೆ ಉದ್ಘಾಟನೆ ಮತ್ತು ಸೂರತ್- ಚೆನ್ನೈ ಎಕ್ಸ್ ಪ್ರೆಸ್ ವೇ ಶಂಕುಸ್ಥಾಪನೆ ಹಾಗೂ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ನಾರಾಯಣಪುರ ಎಡದಂಡೆ (ಎನ್.ಎಲ್.ಬಿ.ಸಿ) ಕಾಲುವೆ ನಾರಾಯಣಪುರ ಅಣೆಕಟ್ಟಿನಿಂದ ಪ್ರಾರಂಭವಾಗಿ ಮತ್ತು ೪.೫ ಲಕ್ಷ ಹೆಕ್ಟೇರ್ ಕಮಾಂಡ್ ಪ್ರದೇಶಕ್ಕೆ ನೀರಾವರಿ ಕಲ್ಪಿಸಲು ೧೦,೦೦೦ ಕ್ಯೂಸಕ್ಸ್ ನೀರು ಸಾಗಿಸುವ ಸಾಮರ್ಥ್ಯವನ್ನು ಕಾಲುವೆ ಹೊಂದಿದೆ. ಕಲಬುರಗಿ,ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ೫೬೦ ಗ್ರಾಮಗಳ ೩.೩೪ ಲಕ್ಷ ರೈತರಿಗೆ ಇದರಿಂದ ಅನುಕೂಲವಾಗುತ್ತದೆ.
ಎನ್.ಎಲ್.ಬಿ.ಸಿ ಮತ್ತು ಅದರ ಉಪ ಕಾಲುವೆಗಳ ಒಟ್ಟು ೩೪೭೭ ಕಿಲೋಮೀಟರ್ ಗಳಷ್ಟು ಮರುರೂಪಿಸುವಿಕೆ ಒಳಗೊಂಡಿದೆ.
ಎನ್.ಎಲ್.ಬಿ.ಸಿ ಕಾಲುವೆ ವ್ಯವಸ್ಥೆಯಲ್ಲಿ ೪೫೬೫ ಸ್ವಯಂಚಾಲಿತ ಇಂಟಿಗ್ರೇಟೆಡ್ ಗೇಟ್ ಗಳು ಸ್ಕಾಡಾ ಯೊಂದಿಗೆ ಸ್ಥಾಪನೆ. ಇದರ ಒಟ್ಟು ಯೋಜನೆಯ ಒಟ್ಟು ವೆಚ್ಚ ೪೬೯೯ ಕೋಟಿ ರೂಗಳು. ಇದಕ್ಕೆ ೧೦೧೦.೫೦ ಕೋಟಿ ರೂಗಳನ್ನು ಕೇಂದ್ರ ಸರ್ಕಾರ ನೆರವು ನೀಡುತ್ತಿದೆ ಎಂದು ಹೇಳಿದರು.
ಸೂರತ್- ಚೈನ್ನೈ ಎಕ್ಸ್ ಪ್ರೆಸ್ ವೇಯ ಶಂಕುಸ್ಥಾಪನೆ : ಭಾರತಮಾಲಾ ಯೋಜನೆಯ ಅಡಿಯಲ್ಲಿ ನಿಂಬಾಳ ನಿಂದ ಸಿಂಗನೋಡಿಗೆ ೬ ಪಥ ಗ್ರೀನ್ ಫೀಲ್ಡ್ ಎಕ್ಸ್ಪ್ರೆಸ್ ವೇ ನಿರ್ಮಾಣ, ಎನ್ ಹೆಚ್- ೧೫೦ ಸಿ ಯ ಒಟ್ಟು ೬೫.೫ ಕಿಲೊಮೀಟರ್ ಭಾಗ(ಅಕ್ಕಲಕೋಟ್- ಕೆಎನ್/ಟಿಎಸ್ ಗಡಿ ವಿಭಾಗದ ಪ್ಯಾಕೇಜ್ ಮೂರು ಒಳಗೊಂಡಿದೆ .ಈ ಯೋಜನೆಯ ಒಟ್ಟು ವೆಚ್ಚ ೨೦೦೦ ಕೋಟಿ ರೂಪಾಯಿಗಳು ಇದೆ.
ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗೆ ಶಂಕುಸ್ಥಾಪನೆ : ಈ ಯೋಜನೆಯಿಂದ ಕೃಷ್ಣಾ ನದಿಯ ನಾರಾಯಣಪುರ ಆಣೆಕಟ್ಟಿನಿಂದ ೧೪.೯೩ ಲಕ್ಷ ಜನರು ಸಂಸ್ಕರಿಸಿದ ನೀರನ್ನು ಪಡೆಯುತ್ತಾರೆ.ಈ ಯೋಜನೆಯಿಂದ ೭೧೦ ಗ್ರಾಮೀಣ ವಸತಿಗಳು ಮತ್ತು ೩ ಪಟ್ಟಣಗಳು ಸುಸ್ಥಿರ ಶುದ್ದ ಕುಡಿಯುವ ನೀರನ್ನು ಪಡೆಯಲಿವೆ ಹಾಗೂ ೧೧೭ ಎಂ ಎಲ್ ಡಿ ನೀರು ಸಂಸ್ಕರಣ ಘಟಕ ನಿರ್ಮಿಸಲಾಗುವುದು. ಈ ಯೋಜನೆಯ ವೆಚ್ಚ ೨೦೫೪ ಕೋಟಿ ರೂಪಾಯಿಗಳಿದ್ದು, ಕೇಂದ್ರ ಸರ್ಕಾರವು ರೂ ೭೬೬ ಕೋಟಿ ರೂಪಾಯಿಗಳನ್ನು ನೆರವು ನೀಡಲಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಡಾ. ಶಿವರಾಜ್ ಪಾಟೀಲ, ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಲು ಅಂಜಿನೇಯ್ಯ, ಎಪಿಎಂಸಿ ಅಧ್ಯಕ್ಷ ಅಚ್ಚುತ್ ರೆಡ್ಡಿ, ಕೆ. ಎಮ್ ಪಾಟೀಲ್, ನರಸರೆಡ್ಡಿ,ಶಂಖರ ರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.