ನಾಳೆ ಮೋದಿ ನಾಮಪತ್ರ ಸಲ್ಲಿಕೆ ಸಂಜೆ ಭರ್ಜರಿ ರೋಡ್ ಶೋ

ವಾರಾಣಸಿ,ಮೇ೧೩:ಪ್ರಧಾನಿ ನರೇಂದ್ರ ಮೋದಿ ಅವರು ೩ನೇ ಬಾರಿ ಆಯ್ಕೆ ಬಯಸಿ ನಾಳೆ ವಾರಾಣಸಿ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದಾರೆ.
ನಾಳೆ ಬೆಳಿಗ್ಗೆ ೧೧.೪೦ ನಿಮಿಷಕ್ಕೆ ಅಭಿಜಿತ್ ಲಗ್ನದಲ್ಲಿ ನಾಮಪತ್ರ ಸಲ್ಲಿಕೆಗೆ ತಯಾರಿ ನಡೆಸಿದ್ದಾರೆ. ಇದಕ್ಕೂ ಮುನ್ನ ಕಾಶಿಯ ಕಾಲಭೈರವ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ನಾಮಪತ್ರ ಸಲ್ಲಿಕೆಯ ಮುಹೂರ್ತವು ಹಿಂದೂ ಪಂಚಾಂಗದ ಪ್ರಕಾರ ಅಭಿಜಿತ್ ಮುಹೂರ್ತವಾಗಿದ್ದು, ಈ ದಿನ ಅತ್ಯಂತ ಮಂಗಳಕರ ಸಮಯವಾಗಿದೆ. ಹೀಗಾಗಿ, ಈ ಸಮಯದಲ್ಲೇ ಮೋದಿ ಅವರು ನಾಮಪತ್ರ ಸಲ್ಲಿಸಲಿದ್ದಾರೆ.
ಇಂದು ಸಂಜೆ ವಾರಾಣಸಿಗೆ ಆಗಮಿಸಲಿರುವ ಪ್ರಧಾನಿ ಅವರು ಭರ್ಜರಿ ರೋಡ್ ಶೋ ನಡೆಸುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಗೇಟ್‌ನಿಂದ ರೋಡ್ ಶೋ ಆರಂಭವಾಗಲಿದ್ದು, ಈ ವೇಳೆ ಮೋದಿ ಅವರು ಬಿಹೆಚ್‌ಯು ಸಂಸ್ಥಾಪಕ ಮಹಾಮಾನ ಪಂಡಿತ್ ಮಧನ್‌ಮೋಹನ್ ಮಾಳವಿಯಾ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ಕಾಶಿವಿಶ್ವನಾಥ್ ಧಾಮದ ಗೇಟ್ ಸಂಖ್ಯೆ-೪ರಲ್ಲಿ ರೋಡ್ ಶೋ ಅಂತ್ಯಗೊಳ್ಳಲಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿಆದಿತ್ಯನಾಥ್ ಪ್ರಧಾನಿ ಅವರ ಜತೆ ರೋಡ್ ಶೋನಲ್ಲಿ ಭಾಗವಹಿಸಲಿದ್ದು, ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಲಕ್ಷಾಂತರ ಬಿಜೆಪಿ ಕಾರ್ಯಕರ್ತರು, ಸ್ಥಳೀಯ ನಿವಾಸಿಗಳು, ಕ್ರೀಡಾಪಟುಗಳು, ಕಲಾವಿದರು ಭಾಗವಹಿಸಲಿದ್ದಾರೆ.
ಪ್ರಧಾನಿಯವರ ಅದ್ಧೂರಿ ಸ್ವಾಗತಕ್ಕಾಗಿ ಹಲವು ಸಮುದಾಯಗಳು ಸಾಂಪ್ರದಾಯಿಕ ಉಡುಗೆಯಲ್ಲಿ ಸ್ವಾಗತಿಸಲು ಸಿದ್ಧತೆ ಮಾಡಿಕೊಂಡಿವೆ.
ಪ್ರಧಾನಿ ವಿರುದ್ಧ ಇಂಡಿಯಾ ಒಕ್ಕೂಟದ ಅಭ್ಯರ್ಥಿಯಾಗಿ ಅಜಯ್‌ರಾಯ್ ಸ್ಪರ್ಧಿಸುತ್ತಿದ್ದಾರೆ. ಕಳೆದ ೨ ಬಾರಿಯ ಚುನಾವಣೆಯಲ್ಲೂ ಅಜಯ್‌ರಾಯ್ ಪರಾಭವಗೊಂಡಿದ್ದರು.
ಈ ಬಾರಿ ಪ್ರಧಾನಿ ಗೆಲುವಿನ ಅಂತರವನ್ನು ೭ ಲಕ್ಷಕ್ಕೂ ಮೀರಿ ಹೆಚ್ಚಿಸುವ ಗುರಿಯನ್ನು ಬಿಜೆಪಿ ಹೊಂದಿದೆ. ೨೦೧೯ರಲ್ಲಿ ಶೇ. ೬೪ರಷ್ಟು ಮತ ಹಂಚಿಕೆಯೊಂದಿಗೆ ೪.೮ ಲಕ್ಷ ಅಂತರದಲ್ಲಿ ಮೋದಿ ಜಯಭೇರಿ ಬಾರಿಸಿದ್ದರು. ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರು ೩.೭ ಲಕ್ಷ ಮತಗಳ ಅಂತರದಿಂದ ಜಯಗಳಿಸಿದ್ದರು.