ನಾಳೆ ಮೋದಿಯವರ ಕೊನೆಯ ಸಂಪುಟ ಸಭೆ

ನವದೆಹಲಿ,ಮಾ.೨- ದೇಶದಲ್ಲಿ ಹೊಸ ಸರ್ಕಾರ ರಚನೆಗಾಗಿ ಏಪ್ರಿಲ್- ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ತನ್ನ ಮಂತ್ರಿಮಂಡಲದ ಸದಸ್ಯರೊಂದಿಗೆ ನಾಳೆ ಮಹತ್ವದ ಸಭೆ ಕರೆದಿದ್ದಾರೆ.
ನಾಳಿನ ಸಭೆಯಲ್ಲಿ ಲೋಕಸಭೆ ಚುನಾವಣೆ ಎದುರಿಸಲು ಅನುಸರಿಸಬೇಕಾದ ರಣತಂತ್ರ, ೨೦೪೭ ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮುವ ಮಾರ್ಗಸೂಚಿ ಕುರಿತಂತೆ ಚರ್ಚೆ ನಡೆಯಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ
ನಾಳೆ ನಡೆಯಲಿರುವ ಸಭೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಕೊನೆಯ ಮಂತ್ರಿಮಂಡಲದ ಸಭೆಯಾಗಿದೆ. ಮುಂದಿನ ವಾರದೊಳಗ ಲೋಕಸಭೆ ಚುನಾವಣೆಗೆ ಮುಹೂರ್ತ ನಿಗದಿಯಾಗಲಿರುವ ಹಿನ್ನೆಲೆಯಲ್ಲಿ ನಾಳಿನ ಸಭೆ ಮಹತ್ವ ಪಡೆದುಕೊಂಡಿದೆ.
ಪ್ರಧಾನಿ ಅವರು ನಾಳೆ ಕರೆದಿರುವ ಸಭೆಯಲ್ಲಿ ಮಂತ್ರಿಮಂಡಲದ ಸದಸ್ಯರ ಮುಂದೆ “ವಿಷನ್ ಇಂಡಿಯಾ@೨೦೪೭” ನ ಮೊದಲ ಸಭೆಯಾಗಿದೆ. ಈ ಸಭೆಯಲ್ಲಿ ಮೂಲಸೌಕರ್ಯ ಮತ್ತು ಸಮಾಜ ಕಲ್ಯಾಣದಂತಹ ಕ್ಷೇತ್ರಗಳಿಗೆ ಸಂಬಂಧಿಸಿದ ಕೆಲವು ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಯಲಿದೆ ಎಂದು ತಿಳಿಸಲಾಗಿದೆ
ಮಧ್ಯಂತರ ಬಜೆಟ್ ಮಂಡಿಸುವಾಗಲೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಜುಲೈನಲ್ಲಿ ಪೂರ್ಣ ಬಜೆಟ್‌ನಲ್ಲಿ ವಿಕಸಿತ ಭಾರತ್’ಕ್ಕಾಗಿ ಹಲವು ಮಾರ್ಗ ಸೂಚಿ ಪ್ರಕಟಿಸಲಿದೆ ಎಂದು ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳಿನ ಸಭೆ ಮಹತ್ವ ಪಡೆದುಕೊಂಡಿದೆ.
ಲೋಕಸಭೆ ಚುನಾವಣೆ ಬಳಿಕ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಸತತ ಮೂರನೇ ಬಾರಿಗೆ ಅಧಿಕಾರ ಹಿಡಿಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಈಗಾಗಲೇ ಹಲವು ಭಾರಿ ವಿಶ್ವಾಸ ವ್ಯಕ್ತಪಡಿಸಿದ್ದು ನಮ್ಮದೇ ಸರ್ಕಾರ ಎಂದು ಪ್ರತಿಪಾದಿಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪ್ರಚಾರ ಮತ್ತು ಚುನಾವಣೆಯನ್ನು ಜೊತೆಯಾಗಿ ಎದುರಿಸುವುದು ಹಾಗು ಹಲವು ಕೇಂದ್ರ ಸಚಿವರಾಗಿರುವ ರಾಜ್ಯಸಭೆ ಸದಸ್ಯರಿಗೆ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ನೀಡಿಕೆ ಸೇರಿದಂತೆ ಮಹತ್ವದ ವಿಚಾರಗಳೂ ಕೂಡ ಚರ್ಚೆಗೆ ಬರಲಿದೆ ಎಂದು ಹೇಳಲಾಗಿದೆ.
೩೦ ಟ್ರಿಲಿಯನ್ ಡಾಲರ್ ಆರ್ಥಿಕತೆ ದೇಶ
ಭಾರತ ೨೦೪೭ ರ ವೇಳೆಗೆ ೩೦ ಟ್ರಿಲಿಯನ್ ಡಾಲರ್ ಆರ್ಥಿಕತೆ ಅಭಿವೃದ್ಧಿ ಹೊಂದಿದ ದೇಶವಾಗಲಿದೆ ಎಂದು ಕೇಂದ್ರ ಸರ್ಕಾರ ಅಂದಾಜು ಮಾಡಿದ್ದು ಈ ನಿಟ್ಟಿನಲ್ಲಿ ಅನುಸರಿಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಯಲಿದೆ ಎನ್ನಲಾಗಿದೆ
ವಲಯವಾರು ವರದಿಗಳನ್ನು ಸಂಗ್ರಹಿಸಿರುವ ಸರ್ಕಾರಿ ಚಿಂತಕರ ಚಾವಡಿ ನೀತಿ ಆಯೋಗ ನಾಳಿನ ಸಭೆಯಲ್ಲಿ ವರದಿಯನ್ನು ಮಂಡಿಸಲಿದೆ. ಸುಧಾರಣೆಗಳು ಮತ್ತು ಜೀವನ ಸುಲಭಕ್ಕಾಗಿ ಮಾರ್ಗಸೂಚಿ ಸೂಚಿಸುವುದರ ಜೊತೆಗೆ, ಡಾಕ್ಯುಮೆಂಟ್ ಜಾಗತಿಕ ನಾಯಕರಾಗಿ ಹೊರಹೊಮ್ಮುವ ಭಾರತೀಯ ಕಂಪನಿಗಳನ್ನು ರೂಪಿಸುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.