ನಾಳೆ ಮೊದಲ ಹಂತ ಮತದಾನ

ನವದೆಹಲಿ,ಏ.೧೮:ಜಿದ್ದಾಜಿದ್ದಿನ ಅಖಾಡವೆನಿಸಿರುವ ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ ೧೦೨ ಕ್ಷೇತ್ರಗಳಿಗೆ ನಾಳೆ ಮತದಾನ ನಡೆಯಲಿದೆ. ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಹ್ಯಾಟ್ರಿಕ್ ಅಧಿಕಾರದ ಕನಸು ಕಾಣುತ್ತಿದ್ದರೆ, ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಎನ್‌ಡಿಎಗೆ ತಿರುಗೇಟು ನೀಡಲು ತಂತ್ರ ರೂಪಿಸಿದೆ.
ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವೆನಿಸಿರುವ ಭಾರತದಲ್ಲಿ ನಾಳೆ ಮೊದಲ ಹಂತದ ಮತ ಹಬ್ಬಕ್ಕೆ ವೇದಿಕೆ ಸಜ್ಜಾಗಿದೆ. ಅದರಲ್ಲೂ ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸಲು ಯುವಕರು ಅತ್ಯಂತ ಉತ್ಸಾಹದಿಂದ ಅಣಿಯಾಗಿದ್ದಾರೆ.
ಈಗಾಗಲೇ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಅಭ್ಯರ್ಥಿಗಳು ಮನೆ ಮನೆ ಪ್ರಚಾರದಲ್ಲಿ ತೊಡಗಿಸಿಕೊಂಡು ಕಡೆ ಘಳಿಗೆಯಲ್ಲಿ ಮತದಾರರನ್ನು ಓಲೈಸಲು ಕಸರತ್ತು ನಡೆಸಿದ್ದಾರೆ.
ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಚುನಾವಣಾ ಆಯೋಗ ವ್ಯಾಪಕಭದ್ರತೆ ಒದಗಿಸಿದೆ. ೧೦೨ ಕ್ಷೇತ್ರಗಳಿಗೆ ನಡೆಯಲಿವ ಚುನಾವಣೆಗಾಗಿ ಮತಯಂತ್ರ, ಚುನಾವಣಾ ಸಿಬ್ಬಂದಿ, ಇನ್ನಿತರ ಸಾಮಗ್ರಿಗಳನ್ನು ಆಯೋಗ ನಿಗದಿ ಮಾಡಿರುವ ಮತಗಟ್ಟೆ ಕೇಂದ್ರಗಳಿಗೆ ಸಿಬ್ಬಂದಿಗಳು ತೆರಳಿದ್ದಾರೆ.
ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟ ಕಳೆದ ಬಾರಿಯಂತೆ ಈ ಬಾರಿಯೂ ೩೮ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲಿದೆ. ಆದರೆ, ಅಣ್ಣಾ ಡಿಎಂಕೆ ಮತ್ತು ಬಿಜೆಪಿಯು ಚುನಾವಣಾ ಅಖಾಡದಲ್ಲಿ ಸಡ್ಡು ಹೊಡೆದಿದೆ. ಈ ಬಾರಿ ತಮಿಳುನಾಡಿನಲ್ಲಿ ಬಿಜೆಪಿ ಖಾತೆ ತೆರೆಯುವ ನಿರೀಕ್ಷೆಯಲ್ಲಿದೆ.
ಮೊದಲ ಹಂತದ ಚುನಾವಣಾ ಅಖಾಡದಲ್ಲಿ ೮ ಮಂದಿ ಕೇಂದ್ರ ಸಚಿವರು, ಮಾಜಿ ಮಖ್ಯಮಂತ್ರಿಗಳು ಹಾಗೂ ಮಾಜಿ ರಾಜ್ಯಪಾಲ ಅವರ ಭವಿಷ್ಯ ನಿರ್ಧಾರವಾಗಲಿದೆ. ಕೇಂದ್ರ ಸಚಿವ ನಿತಿನ್‌ಗಡ್ಕರಿ, ನಾಗ್ಪುರ ಕ್ಷೇತ್ರದಿಂದ ೩ನೇ ಬಾರಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಅದೇ ರೀತಿ ಜಿತೇಂದ್ರಸಿಂಗ್‌ಥೋಮರ್, ಉದಂಪುರದಿಂದ ಹ್ಯಾಟ್ರಿಕ್ ಗೆಲುವು ಸಾಧಿಸುವ ವಿಶ್ವಾಸದಲ್ಲಿದ್ದಾರೆ.
ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ ಅರುಣಾಚಲ ಪ್ರದೇಶ ೨,ಅಸ್ಸಾಂ ೫, ಬಿಹಾರ ೪, ಛತ್ತೀಸ್‌ಘಡ ೧, ಮಧ್ಯಪ್ರದೇಶ ೬,ಮಹಾರಾಷ್ಟ್ರ ೫, ಮಣಿಪುರ ೨, ಮೇಘಾಲಯ ೨,ಮಿಜೋರಾಂ ೧, ನಾಗಾಲ್ಯಾಂಡ್ ೧, ರಾಜಸ್ತಾನ ೧೨, ಸಿಕ್ಕಿಂ ೧೧, ತಮಿಳುನಾಡು ೩೯, ತ್ರಿಪುರಾ ೧, ಉತ್ತರ ಪ್ರದೇಶ ೮, ಉತ್ತರಾಖಂಡ ೫, ಪಶ್ಚಿಮ ಬಂಗಾಳ ೩, ಅಂಡಮಾನ್ ಮತ್ತು ನಿಖೋಬಾರ್ ೧, ಜಮ್ಮು ಮತ್ತು ಕಾಶ್ಮೀರ ೧, ಲಕ್ಷದ್ವೀಪ ೧, ಪುದುಚೆರಿಯ ೧ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಮೊದಲ ಹಂತದಲ್ಲಿ ನಡೆಯಲಿರುವ ೧೦೨ ಕ್ಷೇತ್ರಗಳಲ್ಲಿ ಎನ್‌ಡಿಎ ಮೈತ್ರಿಕೂಟದ ನಾಯಕರು ಅಬ್ಬರದ ಪ್ರಚಾರ ನಡೆಸಿ ಮತಯಾಚಿಸಿದ್ದರು. ನಾಳೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಕ್ಷೇತ್ರ ತೊರೆಯುವಂತೆಯೂ ಚುನಾವಣಾ ಆಯೋಗ ನಿರ್ದೇಶನ ನೀಡಿದೆ.
೧೮ನೇ ಲೋಕಸಭೆ ರಚನೆಗಾಗಿ ೫೪೩ ಸದಸ್ಯರ ಆಯ್ಕೆಗಾಗಿ ನಾಳೆಯಿಂದ ಜೂ. ೧ರವರೆಗೆ ೭ ಹಂತಗಳಲ್ಲಿ ಸಾರ್ವತ್ರಿಕ ಚುನಾವಣೆನಡೆಯಲಿದೆ. ಜೂ. ೪ ರಂದು ಫಲಿತಾಂಶ ಪ್ರಕಟವಾಗಲಿದೆ.