ನಾಳೆ ಮುದ್ದೇಬಿಹಾಳಕ್ಕೆ ಯಡಿಯೂರಪ್ಪ

ತಾಳಿಕೋಟೆ:ಏ.26: ರಾಜ್ಯದ ಮಾಜಿ ಮುಖ್ಯಮಂತ್ರಿ ಭಾರತೀಯ ಜನತಾ ಪಕ್ಷದ ಮಾಜಿ ರಾಜಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಇದೇ ದಿ.27 ರಂದು ಮುದ್ದೇಬಿಹಾಳ ಪಟ್ಟಣಕ್ಕೆ ಆಗಮಿಸಲಿದ್ದಾರೆಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಅವರು ತಿಳಿಸಿದ್ದಾರೆ.
ಲೋಕಸಭಾ ಚುನಾವಣಾ ನಿಮಿತ್ಯ ವಿಜಯಪುರ ಮಿಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಪರ ಮತಯಾಚನೆ ಮಾಡಲು ಆಗಮಿಸುತ್ತಿದ್ದು ಅಂದು ಬೆಳಿಗ್ಗೆ 11 ಗಂಟೆಗೆ ಮುದ್ದೇಬಿಹಾಳದ ಶ್ರೀ ಬನಶಂಕರಿ ದೇವಸ್ಥಾನದ ಆವರಣದಲ್ಲಿ ನಡೆಯಲಿರುವ ಬೃಹತ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆಂದು ಅವರು ತಿಳಿಸಿದ್ದಾರೆ.
ಈ ಸಾರ್ವಜನಿಕ ಸಭೆಯಲ್ಲಿ ಮುದ್ದೇಬಿಹಾಳ ಮತಕ್ಷೇತ್ರದಿಂದ ಕನಿಷ್ಠ 20 ಸಾವಿರಕ್ಕೂ ಅಧಿಕ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಪಾಲ್ಗೊಳ್ಳಲಿದ್ದು ಕಾರ್ಯಕ್ರಮಕ್ಕೂ ಮುಂಚೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ರೋಡ ಶೋ ಮೂಲಕ ಮತಯಾಚನೆಯನ್ನೂ ಕೂಡಾ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಎನ್‍ಡಿಎ ಅಭ್ಯರ್ಥಿ ರಮೇಶ ಜಿಗಜಿಣಗಿ, ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ(ಕು.ಸಾಲವಾಡಗಿ), ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ), ಎಸ್.ಕೆ.ಬೆಳ್ಳುಬ್ಬಿ, ಅರುಣ ಶಹಾಪೂರ, ಸೋಮನಗೌಡ ಪಾಟೀಲ(ಸಾಸನೂರ), ಒಳಗೊಂಡಂತೆ ಜಿಲ್ಲೆಯ ಮಾಜಿ ಶಾಸಕರು, ಮುಖಂಡರುಗಳು ಭಾಗಿಯಾಗಲಿದ್ದಾರೆಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಅವರು ತಿಳಿಸಿದ್ದಾರಲ್ಲದೇ ಕಾರಣ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಎಲ್ಲ ಕಾರ್ಯಕರ್ತರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.