ನಾಳೆ ಮುಖ್ಯಮಂತ್ರಿ ಅಂಜನಾದ್ರಿಗೆ ಭೇಟಿ.
ಅಭಿವೃದ್ಧಿಗೆ ಚರ್ಚೆ: ಶಾಸಕ ಪರಣ್ಣ ಹರ್ಷ


ಸಂಜೆವಾಣಿ ವಾರ್ತೆ
ಗಂಗಾವತಿ, ಜು.31: ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ನಮ್ಮ ತಾಲೂಕಿನ ಐತಿಹಾಸಿಕ ಅಂಜನಾದ್ರಿ ಪರ್ವತದ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಿದೆ.  ಈ ಹಿನ್ನೆಯಲ್ಲಿ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರೂ.20 ಕೋಟಿ ಮತ್ತು ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರೂ.100 ಕೋಟಿ ಅನುದಾನ ಘೋಷಣೆ ಮಾಡಿದ್ದಾರೆ.  ಈ ಅನುದಾನವನ್ನು ಬಳಕೆ ಮಾಡುವ ಕುರಿತು ಈಗಾಗಲೇ ಸರಕಾರದ ಮಟ್ಟದಲ್ಲಿ ಎಲ್ಲಾ ರೀತಿಯ ಯೋಜನೆಗಳನ್ನು ರೂಪಿಸಿದ್ದು, ಸ್ವತಃ ಮುಖ್ಯಮಂತ್ರಿ ಬೊಮ್ಮಾಯಿ ಅವರು ಆ.1 ರಂದು ಅಂಜನಾದ್ರಿ ಪರ್ವತಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ ಎಂದು ಶಾಸಕ ಪರಣ್ಣ ಮುನವಳ್ಳಿ ಹರ್ಷ ವ್ಯಕ್ತಪಡಿಸಿದರು.
ಶನಿವಾರ ಬಿಜೆಪಿ ಕಚೇರಿಯಲ್ಲಿ ಅವರು ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.  ಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿಗಳು ಅಂಜನಾದ್ರಿ ಪರ್ವತಕ್ಕೆ ಭೇಟಿ ನೀಡಿ ವಿಕ್ಷಣೆ ಮಾಡಲಿದ್ದಾರೆ.  ಜನರ ಬೇಡಿಕೆಯಂತೆ ಅಂಜನಾದ್ರಿ ಪರ್ವತವನ್ನು ಐತಿಹಾಸಿಕವಾಗಿ ಅಭಿವೃದ್ಧಿಗೊಳಿಸಲು ಸಿದ್ಧತೆ ನಡೆದಿದೆ.  ಗಂಗಾವತಿಯಿಂದ ಹಿಟ್ನಾಳ್ ಕ್ರಾಸ್‍ವರೆಗೂ ಚತುಸ್ಪಥ ರಸ್ತೆ ನಿರ್ಮಾಣ, ಅಂಜನಾದ್ರಿ ಹತ್ತಿರ ಯಾತ್ರಿ ನಿವಾಸ, ಪ್ರದಕ್ಷಣೆ ಪತ, ರೂಪವೇ ಸೇರಿ ಇನ್ನಿತರ ಅಭಿವೃದ್ಧಿ ಕಾರ್ಯಗಳ ನೀಲನಕ್ಷೆಯನ್ನು ಮುಖ್ಯಮಂತ್ರಿಗಳು ಪರಿಶೀಲಿಸಿದ್ದು, ಖುದ್ದು ಭೇಟಿ ನೀಡಿ ಪರಿಶೀಲಿಸಲಿದ್ದಾರೆ.  ನಂತರ ಅಧಿಕಾರಿಗಳೊಂದಿಗೆ ಪರಿಸ್ಥಿತಿ ಅವಲೋಕಿಸಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ಯೋಜನೆ ರೂಪಿಸಲಿದ್ದಾರೆ.  ಅಂಜನಾದ್ರಿ ಸುತ್ತಲು ವಿವಿಧ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸುತ್ತಲಿ ರೈತರ ಸುಮಾರು 61 ಎಕರೆ ಭೂಮಿಯನ್ನು ಸ್ವಾಧಿಪಡಿಸಿಕೊಳ್ಳಲು ರೈತನ್ನು ಮನವಲಿಸಲಾಗಿದೆ.  ರೈತರ ಬೇಡಿಕೆಗೆ ಮನ್ನಣೆ ನೀಡಿ ಸುಮಾರು ಎಕರೆಗೆ ರೂ.57 ಲಕ್ಷವರೆಗೆ ಪರಿಹಾರ ನೀಡುವ ಕುರಿತು ಚಿಂತನೆ ನಡೆಸಲಾಗಿದೆ.  ಚತುಸ್ಪಥ ರಸ್ತೆಗೆ ಅವಶ್ಯವಿರುವ ಭೂಮಿಯನ್ನು ಸ್ವಾಧಿನಪಡಿಸಿಕೊಳ್ಳಲು ಲೋಕೋಪಯೋಗಿ ಇಲಾಖೆ ಮೂಲಕ ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ ಎಂದರು.
ಅಂಜನಾದ್ರಿ ಪರ್ವತದ ದೇಶ, ವಿದೇಶಿಗಳಲ್ಲಿ ಪ್ರಶಿದ್ಧಿ ಹೊಂದಿದ್ದು, ನಿತ್ಯ ಸಾವಿರಾರು ಭಕ್ತರು ದರ್ಶನಕ್ಕೆ ಬರುತ್ತಿದ್ದಾರೆ.  ಇಂತಹ ಐತಿಹಾಸಿಕ ಧಾರ್ಮಿಕ ಪುಣ್ಯ ಕ್ಷೇತ್ರದ ಅಭಿವೃದ್ಧಿ ಕೈಗೊಳ್ಳಬೇಕೆಂಬ ಜನರ ಬೇಡಿಕೆಗೆ ನಮ್ಮ ಸರಕಾರ ಸ್ಪಂದಿಸಿರುವುದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ.  ಆ.1 ರಂದು ದಾವಣಗೇರಿಯಿಂದ ನೇರವಾಗಿ ಹೆಲಿಕಾಪ್ಟರ್ ಮೂಲಕ ಮುಖ್ಯಮಂತ್ರಿ ಅವರು ಆನೆಗೊಂದಿಗೆ ಆಗಮಿಸಿ ನಂತರ ಅಂಜನಾದ್ರಿ ಪರ್ವತಕ್ಕೆ ಭೇಟಿ ನೀಡಿ, ಅಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ.  ನಂತರ ಕೊಪ್ಪಳಕ್ಕೆ ಭೇಟಿ ನೀಡಿ ಆಸ್ಪತ್ರೆ ಉದ್ಘಾಟನೆ ಮಾಡಲಿದ್ದಾರೆ.  ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಪ್ರವಾಸೋಧ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆರೋಗ್ಯ ಸಚಿವರು ಸೇರಿದಂತೆ ಸಂಸದರು, ಶಾಸಕರು ಸಹ ಉಪಸ್ಥಿತರಿರುತ್ತಾರೆ ಎಂದು ಪರಣ್ಣ ಮುನವಳ್ಳಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ವಿರುಪಾಕ್ಷಪ್ಪ ಸಿಂಗನಾಳ, ಅಧ್ಯಕ್ಷರಾದ ಚನ್ನಪ್ಪ ಮಳಗಿ, ಕಾಶಿನಾಥ ಚಿತ್ರಗಾರ, ನಗರ ಪ್ರಾಧಿಕಾರದ ಅಧ್ಯಕ್ಷ ಮಹಾಲಿಂಗಪ್ಪ ಬನ್ನಿಕೊಪ್ಪ, ನಗರಸಭೆ ಸದಸ್ಯ ನವೀನ ಪಾಟೀಲ್, ಉಮೇಶ ಸಿಂಗನಾಳ, ಬಿಜೆಪಿ ಹಿಂದುಳಿದ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ ಅಮರಜ್ಯೋತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಗ್‍ರಾವ್ ಕುಲಕರ್ಣಿ, ಮುಖಂಡರಾದ ಸಂತೊಷ ಕೆಲೋಜಿ, ರಾಚಪ್ಪ ಸಿದ್ಧಾಪುರ, ಕೆ.ವೆಂಕಟೇಶ, ಶಿವಪ್ಪ ಮಾದಿಗ, ಬಸವರಾಜ, ಶ್ರೀನಿವಾಸ ಧೂಲ,  ಮತ್ತಿತರು ಇದ್ದರು.