ನಾಳೆ ಮಲ್ಲಿಕಾರ್ಜುನ ದೇವಾಲಯ ಜೀರ್ಣೋದ್ಧಾರ ವಾಸ್ತುಪೂಜೆ

ಕಲಬುರಗಿ,ಏ 4: ಇಲ್ಲಿನ ಅಳಂದ ರಸ್ತೆಯಲ್ಲಿರುವ ಕೈಲಾಸ ನಗರದ ಶ್ರೀ ಮಲ್ಲಿಕಾರ್ಜುನ ದೇವಾಲಯದ 24ನೇ ಜಾತ್ರೋತ್ಸವ ಹಾಗೂ ಜೀರ್ಣೋದ್ಧಾರಗೊಂಡ ಶ್ರೀ ಮಲ್ಲಿಕಾರ್ಜುನ ದೇವಾಲಯದ ವಾಸ್ತುಪೂಜೆ ಇದೇ ಏ.5ರಂದು ಬೆಳಗ್ಗೆ 6ಕ್ಕೆ ನೆರವೇರಲಿದೆ ಎಂದು ಪತಂಜಲಿ ಯೋಗ ಸಮಿತಿಯ ಯೋಗಗುರು ಶಿವಾನಂದ ಸಾಲಿಮಠ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಏ.5ರಂದು ನಡೆಯಲಿರುವ ಜೀಣೋದ್ಧಾರಗೊಂಡ ದೇವಾಲಯದ ವಾಸ್ತುಪೂಜೆ ಸಮಾರಂಭದಲ್ಲಿ ಚಿಣಮಗೇರಾ ಮಹಾಂತ ಮಠದ ಕಾಯಕಯೋಗಿ ಸಿದ್ಧರಾಮ ಶಿವಾಚಾರ್ಯರು, ಕಡಗಂಚಿ ಕಟ್ಟಿಮಠದ ವೀರಭದ್ರ ಶಿವಾಚಾರ್ಯರು ಕಟ್ಟಿಮಠ, ಬಡದಾಳ ತೇರಿನಮಠದ ಡಾ.ಚನ್ನಮಲ್ಲ ಶಿವಾಚಾರ್ಯರು, ಚಿಣಮಗೇರಾ ಮಹಾಂತೇಶ್ವರ ಮಠದ ವೀರ ಮಹಾಂತ ಶಿವಾಚಾರ್ಯರು ಹಾಗೂ ಅಂತಾರಾಷ್ಟ್ರೀಯ ಯೋಗ ಗುರು ಮತ್ತು ಪತಂಜಲಿ ಯೋಗ ಪೀಠದ ವರಿಷ್ಠ ರಾಜ್ಯ ಪ್ರಭಾರಿ ಭವರ್‍ಲಾಲ್ ಆರ್ಯ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಈಗಾಗಲೇ ಜಾತ್ರೋತ್ಸವದ ಪ್ರಯುಕ್ತ ಮಾ.30ರಿಂದ ಮಹಾಂತ ಮಡಿವಾಳೇಶ್ವರ ಮಹಾಪುರಾಣ ಆರಂಭಗೊಂಡಿದೆ. ಚಿಣಮಗೇರಾ ಮಹಾಂತೇಶ್ವರ ಮಠದ ಶ್ರೀ ವೀರಮಹಾಂತ ಶಿವಾಚಾರ್ಯರು ಪುರಾಣ ದಾಸೋಹ ಒದಗಿಸುತ್ತಿದ್ದಾರೆ. ಮಹಾಪುರಾಣ ಕಾರ್ಯಕ್ರಮ ಏ.9ರವರೆಗೆ ನಡೆಯಲಿದೆ ಎಂದರು.
ಇನ್ನು ಏ.9ರಂದು ಧರ್ಮಸಭೆ ಹಾಗೂ ಪುರಾಣ ಮಂಗಲ ಮತ್ತು ಮಹಾಪ್ರಸಾದ ಕಾರ್ಯಕ್ರಮ ನೆರವೇರಲಿದ್ದು, ಮಲ್ಲಿಕಾರ್ಜುನ ದೇವಾಲಯದ ಪ್ರಧಾನ ಅರ್ಚಕ ವೈದಿಕ ರತ್ನ ರೇವಣಯ್ಯಸ್ವಾಮಿ ಸುಂಟನೂರ ಹಾಗೂ ಸಮಿತಿಯ ಅಧ್ಯಕ್ಷ ಬಸವರಾಜ ಬೆಣ್ಣೆಸೂರ ಸೇರಿದಂತೆ ಸಮಿತಿಯ ಎಲ್ಲ ಸದಸ್ಯರು ಮತ್ತು ಭಕ್ತಾದಿಗಳು ಉಪಸ್ಥಿತರಿರುತ್ತಾರೆ ಎಂದು ವಿವರಿಸಿದರು.ಸಮಿತಿಯ ಅಧ್ಯಕ್ಷ ಬಸವರಾಜ ಬೆಣ್ಣೆಸೂರ, ಪರಮೇಶ್ವರ ಹಳಿಜೋಳ, ಕಾರ್ಯದರ್ಶಿ ಶರಣಗೌಡ ಪಾಟೀಲ್ ಸದಸ್ಯರಾದ ಸಿದ್ದಲಿಂಗ ದುರ್ಗೆ, ವೀರಣ್ಣ ತಡಕಲ್, ವೀರಸಂಗಪ್ಪ ಬುಳ್ಳಾ ಇದ್ದರು.