ನಾಳೆ ಮಧ್ಯಾಹ್ನ ೨ ರಿಂದ ಜೂನ್ ೩ರ ರಾತ್ರಿ ೧೨ ಗಂಟೆಯವರಿಗೆ ಸಂಪೂರ್ಣ ನಿಬಂಧ-ಡಿಸಿ

ರಾಯಚೂರು, ಮೇ.೩೦-ಜಿಲ್ಲೆಯಾದ್ಯಂತ ಕೋವಿಡ್-೧೯ ಪ್ರಕರಣಗಳು ಹೆಚ್ಚುತ್ತಿದ್ದು, ಅದರ ನಿಯಂತ್ರಣಕ್ಕಾಗಿ ಅಗತ್ಯ ವಸ್ತುಗಳಾದ ನೀರು, ಹಾಲು ಮಾರಾಟ, ಆಸ್ಪತ್ರೆಗಳು, ಔಷಧಿ ಅಂಗಡಿಗಳು ಹಾಗೂ ಅಗತ್ಯ ಸೇವೆಗಳಾದ ಅಂಬುಲೆನ್ಸ್, ಅಗ್ನಿ ಶಾಮಕ, ವಿದ್ಯುತ್, ಪೆಟ್ರೋಲ್ ಪಂಪ್ ಮತ್ತು ಇತರೆ ತುರ್ತು ವೈದ್ಯಕೀಯ ಸೇವೆಗಳೂ ಮತ್ತು ಕೃಷಿ ಚಟುವಟಿಕೆಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಚಟುವಟಿಕೆಗಳನ್ನು ವಿಪತ್ತು ನಿರ್ವಹಣಾ ಕಾಯ್ದೆ ೨೦೦೫ರ ಕಲಂ ೩೪(ಎಂ) ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ೨೦೨೧ರ ಮೇ. ೩೧ರ ಮಧ್ಯಾಹ್ನ ೨ ರಿಂದ ಜೂನ್ ೩ರ ರಾತ್ರಿ ೧೨ ಗಂಟೆಯವರೆಗೆ ಸಂಪೂರ್ಣವಾಗಿ ನಿಬಂಧಿಸಿ ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.
ವಿನಾಯಿತಿಗಳು (ಕಂಟೈನ್ ಮೆಂಟ್ ವಲಯದ ಹೊರಗೆ) :-
ಮೇ.೩೧ರ ಸೋಮವಾರ ಬೆಳಿಗ್ಗೆ ೬ ಗಂಟೆಯಿಂದ ಮಧ್ಯಾಹ್ನ ೨ ಗಂಟೆಯವರೆಗೆ ಮಾತ್ರ ನೀಡಿರುವ ವಿನಾಯಿತಿಗಳು ಇಂತಿವೆ:
೧. ಅಗತ್ಯ ವಸ್ತುಗಳಾದ ನೀರು, ಹಾಲು, ಹಣ್ಣು, ಕಿರಾಣಿ ಅಂಗಡಿ, ತರಕಾರಿ, ಮಾಂಸ ಮಾರಾಟ ಮಾಡಲು ಮಾತ್ರ ಅವಕಾಶ ಕಲ್ಪಿಸಲಾಗಿದೆ.
ದಿನಾಂಕ: ೩೧-೦೫-೨೦೨೧(ಸೋಮವಾರ) ದಿಂದ ೦೩-೦೬-೨೦೨೧(ಗುರುವಾರ)ದವರೆಗೆ ಮಾತ್ರ ನೀಡಿರುವ ವಿನಾಯಿತಿಗಳು ಇಂತಿವೆ:
೧.ದಿನಾಂಕ: ೩೧-೦೫-೨೦೨೧ ಮಧ್ಯಾಹ್ನ ೨ ಗಂಟೆಯಿಂದ ೦೩-೦೬-೨೦೨೧ ರಾತ್ರಿ ೧೨ ಗಂಟೆವರೆಗೆ ಅಗತ್ಯ ವಸ್ತುಗಳಾದ ನೀರು, ಹಾಲು ಮಾರಾಟ, ಆಸ್ಪತ್ರೆಗಳು, ಔಷಧಿ ಅಂಗಡಿಗಳು ಹಾಗೂ ಅಗತ್ಯ ಸೇವೆಗಳಾದ ಅಂಬುಲೆನ್ಸ್, ಅಗ್ನಿ ಶಾಮಕ ಮತ್ತು ಇತರೆ ತುರ್ತು ವೈದ್ಯಕೀಯ ಸೇವೆಗಳು, ವಿದ್ಯುತ್, ಪೆಟ್ರೋಲ್ ಪಂಪ್, ನೈರ್ಮಲ್ಯ ಸೇವೆಗಳಿಗೆ ಅನುಮತಿಸಲಾಗಿದೆ.
ಇವುಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಚಟುವಟಿಕೆಗಳನ್ನು ನಿಬಂಧಿಸಲಾಗಿದೆ.
೨. ಆಸ್ಪತ್ರೆಗಳಿಗೆ ಹೋಗುವವರು ವೈದ್ಯಕೀಯ ದಾಖಲೆಗಳನ್ನು ಚೆಕ್‌ಪೋಸ್ಟ್ ಗಳಲ್ಲಿ ತೋರಿಸತಕ್ಕದ್ದು.
೩. ದಿನಪ್ರತಿಕೆ ಸರಬರಾಜು, ಎಟಿಎಂ ಸೇವೆಗಳು ಅನುಮತಿಸಲಾಗಿದೆ.
೪. ಬ್ಯಾಂಕ್‌ಗಳು ಬೆಳಿಗ್ಗೆ ೬ ಗಂಟೆಯಿಂದ ೧೦ ಗಂಟೆವರೆಗೆ ಕಾರ್ಯನಿರ್ವಹಿಸಲು ಮಾತ್ರ ಅನುಮತಿಸಲಾಗಿದೆ.
೫. ಕೃಷಿ ಚಟುವಟಿಕೆಗಳಾದ ಗೊಬ್ಬರ ಮತ್ತು ಬೀಜ ಮಾರಾಟ, ಕೃಷಿ ಯಂತ್ರೋಪಕರಣಗಳ ಅಂಗಡಿಗಳಿಗೆ ಬೆಳಿಗ್ಗೆ ೬ ರಿಂದ ೧೦ ಗಂಟೆವರೆಗೆ ಕಾರ್ಯನಿರ್ವಹಿಸಲು ಮಾತ್ರ ಅನುಮತಿಸಲಾಗಿದೆ.
೬. ಆಹಾರ ಸಂಸ್ಕರಣೆಯ ಕಾರ್ಖಾನೆಗಳು ಸೇವೆಗಳಾದ ಕೋಲ್ಡ್‌ಸ್ಟೋರೇಜ್‌ಗಳು, ಔಷಧ ಉದ್ಯಮಗಳು, ರಾಸಾಯನಿಕ ಉದ್ಯಮಗಳು, ವಿದ್ಯುತ್ ಉತ್ಪಾದನೆ ಮತ್ತು ಪ್ರಸರಣ ಘಟಕಗಳು, ಆರ್‌ಟಿಪಿಎಸ್ ಹಾಗೂ ವೈಟಿಪಿಎಸ್‌ಗಳಲ್ಲಿ ಶೇ.೫೦%ರಷ್ಟು ಸಿಬ್ಬಂದಿಯೊಂದಿಗೆ ನಿರ್ವಹಿಸಲು ಅನುಮತಿಸಲಾಗಿದೆ.
೭. ಎಲ್ಲಾ ರೀತಿಯ ಸರಕುಗಳ ಸಾಗಾಣಿಕೆಗೆ ಮತ್ತು ಖಾಲಿ ವಾಹನಗಳಿಗೆ ಅನುಮತಿಸಲಾಗಿದೆ.
೮. ಕಂದಾಯ, ಗ್ರಾಮೀಣಾಭಿವೃದ್ದಿ, ನಗರ ಸ್ಥಳೀಯ ಸಂಸ್ಥೆಗಳು, ಆರೋಗ್ಯ, ವೈದ್ಯಕೀಯ ಶಿಕ್ಷಣ, ಪೊಲೀಸ್, ಗೃಹ ರಕ್ಷಕ ದಳ, ನಾಗರಿಕ ರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ವಿಪತ್ತು ನಿರ್ವಹಣೆ, ಕಾರಾಗೃಹ, ಕಾರ್ಮಿಕ, ಖಜಾನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ಆಹಾರ ಮತ್ತು ನಾಗರೀಕ ಸರಬರಾಜು, ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳಿಗೆ ಯಾವುದೇ ನಿಬಂಧವಿರುವುದಿಲ್ಲ.
೯. ಕೋವಿಡ್-೧೯ಗೆ ಸಂಬಂಧಿಸಿದ ಕಾರ್ಯಕ್ಕೆ ನಿಯೋಜಿಸಿದ ಎಲ್ಲಾ ಕಚೇರಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು.
೧೦. ನ್ಯಾಯಾಲಯಗಳು ಹಾಗೂ ನ್ಯಾಯಾಂಗ ಕೆಲಸಗಳಿಗೆ ಸಂಬಂಧಿಸಿದ ಕಚೇರಿಗಳು ರಾಜ್ಯ ಹೈಕೋರ್ಟ್ ಹೊರಡಿಸಿರುವ ಮಾರ್ಗಸೂಚಿಗಳನ್ವಯ ಕಾರ್ಯನಿರ್ವಹಿಸುವುದು.
೧೧. ಸರ್ಕಾರೇತರ ಸಂಸ್ಥೆಗಳ ಕಚೇರಿಗಳು ಹಾಗೂ ಸ್ವಯಂ ಸೇವಕರು, ಇತರೆ ಎಲ್ಲಾ ಕಚೇರಿಗಳು ತಮ್ಮ ಸಿಬ್ಬಂದಿಯನ್ನು ಮನೆಯಿಂದಲೇ ಕೆಲಸ ನಿರ್ವಹಿಸತಕ್ಕದ್ದು ಹಾಗೂ ಕ್ರ.ಸಂ.೬ ರಲ್ಲಿ ತಿಳಿಸಿದ ಸೇವೆಗಳಿಗೆ ಸಂಬಂಧಪಟ್ಟ ಇಲಾಖೆಗಳನ್ನು ಹೊರತುಪಡಿಸಿ, ಉಳಿದ ಸರಕಾರಿ/ ಅರೆ ಸರಕಾರಿ ಮತ್ತು ಖಾಸಗಿ ಕಚೇರಿಗಳ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮನೆಯಿಂದಲೇ ಕೆಲಸ ನಿರ್ವಹಿಸುವುದು.
೧೨. ಮರಣ, ಅಂತ್ಯಕ್ರಿಯೆ, ಶವಸಂಸ್ಕಾರಕ್ಕೆ ೫ ಜನರಿಗೆ ಮಾತ್ರ ಅನುಮತಿಸಲಾಗಿದೆ.
೧೩. ಸರಕಾರಿ ಸಾರಿಗೆ ಸೇವೆಯನ್ನು ನಿಬಂಧಿಸಲಾಗಿದೆ. ಹಾಗೂ ಖಾಸಗಿ ಸಾರಿಗೆ ಸೇವೆಯನ್ನು ತುರ್ತು ವೈದ್ಯಕೀಯ ಸೇವೆಗಳಿಗೆ ಮಾತ್ರ ಅವಕಾಶವಿದ್ದು ವೈದ್ಯಕೀಯ ದಾಖಲೆಗಳನ್ನು ಚೆಕ್‌ಪ್ಟೋಸ್‌ಗಳಲ್ಲಿ ತೋರಿಸತಕ್ಕದ್ದು. ಇತರೇ ಎಲ್ಲಾ ಖಾಸಗಿ ಸಾರಿಗೆಯನ್ನು ನಿಬಂಧಿಸಲಾಗಿದೆ.
೧೪. ವೈದ್ಯಕೀಯ ಹಾಗೂ ತುರ್ತು ಸೇವೆಗಳ ಎಲ್ಲಾ ಅಧಿಕಾರಿಗಳು / ಸಿಬ್ಬಂದಿಗಳ ಕರ್ತವ್ಯ ನಿಮಿತ್ಯ ಸಂಚಾರಕ್ಕೆ ಯಾವುದೇ ನಿಬಂಧವಿರುವುದಿಲ್ಲ.
೧೫. ಮದುವೆಗಳನ್ನು ನಿಬಂಧಿಸಲಾಗಿದೆ.
೧೬. ಆಸ್ಪತ್ರೆಗಳು ಒಳ ಹಾಗೂ ಹೊರ ರೋಗಿಗಳಿಗೆ ಉಪಹಾರ/ ಊಟದ ವ್ಯವಸ್ಥೆಯನ್ನು ಕಲ್ಪಿಸುವುದು ಸಂಬಂಧಪಟ್ಟ ಆಸ್ಪತ್ರೆಗಳ ಜವಾಬ್ದಾರಿಯಾಗಿರುತ್ತದೆ.
೧೭. ಆಸ್ಪತ್ರೆಗಳಲ್ಲಿರುವ ಒಳ ಹಾಗೂ ಹೊರ ರೋಗಿಗಳಿಗೆ ಉಪಹಾರ, ಊಟದ ವ್ಯವಸ್ಥೆ ಮತ್ತು ಜ್ಯೂಸನ್ನು ಸರಬರಾಜು ಮಾಡಲು ಆಸ್ಪತ್ರೆಗಳ ಮುಂದಿರುವ ಒಂದು ಹೋಟೆಲ್ ಹಾಗೂ ಒಂದು ಹಣ್ಣಿನ ಅಂಗಡಿಗೆ ಮಾತ್ರ ಅನುಮತಿಸಲಾಗಿದೆ.
೧೮. ಅಂತರ ರಾಜ್ಯ ಮತ್ತು ಅಂತರ ಜಿಲ್ಲಾ ವ್ಯಕ್ತಿಗಳ ಸಂಚಾರವನ್ನು ಸರಕಾರದ ಆದೇಶದಲ್ಲಿ ತಿಳಿಸಿರುವಂತೆ ಅನುಮತಿಸಲಾಗಿದೆ.
ಕೋವಿಡ್-೧೯ ನಿರ್ವಹಣೆಗೆ ರಾಷ್ಟ್ರೀಯ ನಿರ್ದೇಶನಗಳು :
೧. ಮುಖಗವಸುಗಳು: ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ, ಕೆಲಸದ ಸ್ಥಳಗಳಲ್ಲಿ ಮತ್ತು ಪ್ರಯಾಣದ ಸಮಯದಲ್ಲಿ ಮುಖಗವಸನ್ನು ಧರಿಸುವುದು ಕಡ್ಡಾಯವಾಗಿದೆ. ಮುಖಗವಸನ್ನು ಧರಿಸದಿದ್ದಲ್ಲಿ ನಗರ ಪ್ರದೇಶಗಳಲ್ಲಿ ೨೫೦ ರೂ.ಗಳು ಮತ್ತು ಇನ್ನುಳಿದ ಪ್ರದೇಶಗಳಲ್ಲಿ ೧೦೦ ರೂ.ಗಳ ದಂಡ ವಿಧಿಸಲಾಗುತ್ತದೆ.
೨. ಸಾಮಾಜಿಕ ಅಂತರ: ವ್ಯಕ್ತಿಗಳು ಸಾರ್ವಜನಿಕ ಸ್ಥಳಗಳಲ್ಲಿ ಕನಿಷ್ಟ ೬ ಅಡಿ (೨ ಗಜ ಅಂತರ) ಅಂತರವನ್ನು ಕಾಯ್ದುಕೊಳ್ಳಬೇಕು.
೩. ಗುಂಪುಗೂಡುವಿಕೆ: ಬೃಹತ್ ಸಾರ್ವಜನಿಕ ಸಭೆಗಳು / ಒಟ್ಟುಗೂಡುವಿಕೆ ನಿಷೇಧವನ್ನು ಮುಂದುವರೆಸಲಾಗಿದೆ.
೪. ಶವಸಂಸ್ಕಾರ / ಅಂತಿಮ ವಿಧಿ ಸಂಬಂಧಿತ ಕಾರ್ಯಗಳು: ವ್ಯಕ್ತಿಗಳ ಸಂಖ್ಯೆ ೦೫ ಕ್ಕೆ ಮೀರಿರಬಾರದು.
೫. ಸ್ಥಳೀಯ ಪ್ರಾಧಿಕಾರಗಳು ಅದರ ಕಾನೂನುಗಳು, ನಿಯಮಗಳು ಅಥವಾ ನಿಬಂಧನೆಗಳಿಗೆ ಅನುಗುಣವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಉಗಿಯುವುದನ್ನು ನಿಬಂಧಿಸುವುದು ಹಾಗೂ ನಿಗದಿಪಡಿಸಿದ ದಂಡ ವಿಧಿಸುವುದು.
೬. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ, ಪಾನ್, ಗುಟ್ಕಾ, ತಂಬಾಕು ಇತ್ಯಾದಿಗಳ ಬಳಕೆಯನ್ನು ನಿಷೇಧಿಸಿದೆ.
ದಂಡನೀಯ ಉಪಬಂಧಗಳು.:-
ಕೋವಿಡ್-೧೯ ನಿರ್ವಹಣೆಯ ಲಾಕ್‌ಡೌನ್ ಕ್ರಮಗಳನ್ನು ರಾಷ್ಟ್ರೀಯ ನಿರ್ದೇಶನಗಳನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಯು, ವಿಪತ್ತು ನಿರ್ವಹಣಾ ಅಧಿನಿಯಮ-೨೦೦೫ರ ಸೆಕ್ಷನ್ ೫೧ ರಿಂದ ೬೦ ರ ಉಪಬಂಧಗಳು, ಅಲ್ಲದೇ ಭಾರತೀಯ ದಂಡ ಸಂಹಿತೆ ಸೆಕ್ಷನ್ ೧೮೮ ರ ಅಡಿಯಲ್ಲಿನ ಕಾನೂನು ಕ್ರಮ ಮತ್ತು ಅನ್ವಯವಾಗಬಹುದಾದ ಇತರೆ ಕಾನೂನು ಉಪಬಂಧಗಳ ಮೇರೆಗ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.