ನಾಳೆ ಮತ ಎಣಿಕೆ ಕುತೂಹಲ ಕೆರಳಿಸಿದ ಫಲಿತಾಂಶ

ಮಿನಿಸಮರ

ನವದೆಹಲಿ,ಮೇ ೧- ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಪಶ್ಚಿಮ ಬಂಗಾಳ, ತಮಿಳುನಾಡು ಸೇರಿದಂತೆ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಮತ್ತು ಕರ್ನಾಟಕದ ಬೆಳಗಾವಿ ಲೋಕಸಭಾ ಕ್ಷೇತ್ರ, ಬಸವ ಕಲ್ಯಾಣ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ನಾಳೆ ನಡೆಯಲಿದ್ದು, ಮತದಾರರ ತೀರ್ಪು ಏನೆಂಬುದು ನಾಳೆ ಬಹಿರಂಗವಾಗಲಿದೆ.
ಈ ಚುನಾವಣಾ ಫಲಿತಾಂಶದತ್ತ ಇಡೀ ದೇಶದ ಚಿತ್ತವೇ ನೆಟ್ಟಿದ್ದು, ಫಲಿತಾಂಶಗಳು ಏನಾಗಲಿದೆ ಎಂಬುದು ಕುತೂಹಲ ಮೂಡಿಸಿದೆ. ಈ ಚುನಾವಣೆಯ ಮತ ಎಣಿಕೆ ನಾಳೆ ಬೆಳಿಗ್ಗೆ ೮ಕ್ಕೆ ಆರಂಭವಾಗಲಿದ್ದು, ಮಧ್ಯಾಹ್ನದ ಹೊತ್ತಿಗೆ ಫಲಿತಾಂಶಗಳು ಪ್ರಕಟವಾಗಲಿವೆ. ನಾಳಿನ ಮತ ಎಣಿಕೆಗೆ ಚುನಾವಣಾ ಆಯೋಗ ಕೋವಿಡ್ ನಿಯಮಗಳ ಪಾಲನೆಯೊಂದಿಗೆ ಎಲ್ಲ ರೀತಿಯಲ್ಲೂ ಸಜ್ಜುಗೊಂಡಿದೆ.
ಚುನಾವಣಾ ಮತಗಟ್ಟೆ ಸಮೀಕ್ಷೆಗಳ ಹಣೆಬರಹವು ನಾಳೆ ಜಗಜ್ಜಾಹೀರಾಗಲಿದೆ. ಚುನಾವಣಾ ಮತಗಟ್ಟೆ ಸಮೀಕ್ಷೆಯ (ಎಕ್ಸಿಟ್ ಪೋಲ್) ಪ್ರಕಾರ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಸಫಲರಾಗಲಿದ್ದಾರೆ ಎಂದು ಹಏಳಲಾಗಿದ್ದು, ಬಿಜೆಪಿ ಮೊದಲಿಗಿಂತ ಹೆಚ್ಚು ಸ್ಥಾನ ಗೆಲ್ಲಲಿದೆ. ಹಾಗೆಯೇ ತಮಿಳುನಾಡಿನಲ್ಲಿ ಡಿಎಂಕೆಯ ದರ್ಬಾರ್ ಆರಂಭವಾಗಲಿದ್ದು, ಆಡಳಿತಾರೂಢ ಎಐಎಡಿಎಂಕೆ ಸೋಲಾಗಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿದೆ.
ಕೇರಳದಲ್ಲಿ ಅಧಿಕಾರದಲ್ಲಿರುವ ಎಡಪಕ್ಷ ನೇತೃತ್ವದ ಎಲ್‌ಡಿಎಫ್, ಅಸ್ಸಾಂನಲ್ಲಿ ಎನ್‌ಡಿಎ ಮೈತ್ರಿಕೂಟ ಜಯಭೇರಿ ಬಾರಿಸಲಿದ್ದು, ಪುದುಚೆರಿಯಲ್ಲಿ ಎಐಎಡಿಎಂಕೆ, ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಗಳು ಹೇಳಿವೆಯಾದರೂ ಈ ಸಮೀಕ್ಷೆ ನಿಜವೇ ಇಲ್ಲವೇ ಎಂಬುದು ನಾಳೆ ಗೊತ್ತಾಗಲಿದೆ.
ಪಶ್ಚಿಮ ಬಂಗಾಳದ ವಿಧಾನಸಭೆಗೆ ೮ ಹಂತಗಳಲ್ಲಿ ಮತದಾನ ನಡೆದಿತ್ತು, ಹಾಗೆಯೇ ತಮಿಳುನಾಡು, ಅಸ್ಸಾಂ, ಪುದುಚೆರಿ ಮತ್ತು ಕೇರಳ ವಿಧಾನಸಭೆಗೆ ಒಂದೇ ಹಂತದಲ್ಲಿ ಮತದಾನ ಆಗಿತ್ತು.
ಪಶ್ಚಿಮ ಬಂಗಾಳದಲ್ಲಂತೂ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿಯ ಹೋರಾಟವೇ ನಡೆದಿದ್ದು, ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿಯ ಘಟಾನುಘಟಿ ನಾಯಕರುಗಳು ಅಬ್ಬರದ ಪ್ರಚಾರ ನಡೆಸಿ ಮುಖ್ಯಮಂತ್ರಿ ಮಮತಾ ದೀದಿಯ ಗೆಲುವಿನ ವೇಗಕ್ಕೆ ಬ್ರೇಕ್ ಹಾಕಲು ಶತಪ್ರಯತ್ನ ನಡೆಸಿದ್ದರು.
ಈ ಎಲ್ಲ ಕಾರಣದಿಂದ ಪಶ್ಚಿಮ ಬಂಗಾಳದ ಚುನಾವಣಾ ಫಲಿತಾಂಶದತ್ತ ಇಡೀ ದೇಶದ ಚಿತ್ತ ನೆಟ್ಟಿದೆ. ಈ ಚುನಾವಣಾ ಫಲಿತಾಂಶ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಗೂ ಪ್ರತಿಷ್ಠೆಯಾಗಿವೆ.
ತಮಿಳುನಾಡಿನಲ್ಲೂ ಬಿಜೆಪಿ ಆಡಳಿತಾರೂಢ ಎಐಎಡಿಎಂಕೆ, ಜತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದು, ಇಲ್ಲಿ ಡಿಎಂಕೆ, ಕಾಂಗ್ರೆಸ್ ಪಕ್ಷಗಳು ಮೈತ್ರಿಕೊಂಡಿವೆ.
ಕೇರಳದಲ್ಲಿ ಎಡ ಪಕ್ಷಗಳ ನೇತೃತ್ವದ ಎಲ್‌ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಹಾಗೂ ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ನಡೆದಿದ್ದು, ಈ ಚುನಾವಣಾ ಫಲಿತಾಂಶವು ಕುತೂಹಲ ಮೂಡಿಸಿದೆ. ಅಸ್ಸಾಂನಲ್ಲಿ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟ ಹಾಗೂ ಕಾಂಗ್ರೆಸ್ ನಡುವ ಪೈಪೋಟಿ ಇದ್ದು, ಪುದುಚೆರಿಯಲ್ಲಿ ಎಐಎಡಿಎಂಕೆ-ಬಿಜೆಪಿ ಮೈತಿಕೂಟ ಹಾಗೂ ಕಾಂಗ್ರೆಸ್, ಡಿಎಂಕೆ ಮೈತ್ರಿಕೂಟದ ನಡುವೆ ಸ್ಪರ್ಧೆ ಏರ್ಪಟ್ಟಿತ್ತು.
ಕರ್ನಾಟಕದಲ್ಲೂ ನಾಳೆ ಫಲಿತಾಂಶ
ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ ಅವರ ನಿಧನದಿಂದ ಬೆಳಗಾವಿ ಲೋಕಸಭಾ ಕ್ಷೇತ್ರ, ಶಾಸಕ ನಾರಾಯಣರಾವ್ ಅವರ ನಿಧನದಿಂದ ಬಸವಕಲ್ಯಾನ ವಿಧಾನಸಭಾ ಕ್ಷೇತ್ರಕ್ಕೆ ಹಾಗೂ ಮಸ್ಕಿ ಶಾಸಕರಾಗಿದ್ದ ಪ್ರತಾಪ್‌ಗೌಟ ಪಾಟೀಲ್ ಅವರ ರಾಜೀನಾಮೆಯಿಂದ ಕಳೆದ ಏ. ೧೭ ರಂದು ಉಪಚುನಾವಣೆ ನಡೆದಿದ್ದು, ಫಲಿತಾಂಶ ನಾಳೆ ಪ್ರಕಟವಾಗಲಿದೆ.
ಚುನಾವಣಾ ಮತಗಟ್ಟೆ ಸಮೀಕ್ಷೆ ಈಗಾಗಲೇ ಪ್ರಕಟವಾಗಿದ್ದು, ಮೂರೂ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆಗಳು ಹೇಳಿವೆ.