ನಾಳೆ ಮತ ಎಣಿಕೆಗೆ ಸಕಲ ಸಿದ್ಧತೆ: ಜಿಲ್ಲಾಧಿಕಾರಿ

ಚಾಮರಾಜನಗರ, ಮೇ.12:- ಜಿಲ್ಲೆಯಲ್ಲಿ ನಡೆದ ನಾಲ್ಕು ವಿಧಾನಸಭಾ ಕ್ಷೇತ್ರಗಳ ಚುನಾವಣಾ ಮತಎಣಿಕೆ ಕಾರ್ಯವು ಮೇ 13 ರಂದು ನಡೆಯಲಿದ್ದು ಇದಕ್ಕಾಗಿ ಜಿಲ್ಲಾಡಳಿತದ ವತಿಯಿಂದ ಸಕಲ ಸಿದ್ಧತೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಡಿ.ಎಸ್.ರಮೇಶ್ ಅವರು ತಿಳಿಸಿದ್ದಾರೆ.
ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ಹನೂರು ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದೆ. ಈ ನಾಲ್ಕು ವಿಧಾನಸಭಾ ಕ್ಷೇತ್ರಗಳ ಮತಎಣಿಕೆ ಕಾರ್ಯವು ಮೇ 13 ರಂದು ನಗರದ ಹೊರವಲಯದ ಬೇಡರಪುರದಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ. ಮತ ಎಣಿಕೆ ಕಾರ್ಯ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದೆ.
ಅಂಚೆ ಮತಪತ್ರಗಳ (ಪೋಸ್ಟಲ್ ಬ್ಯಾಲೆಟ್) ಎಣಿಕೆ ಕಾರ್ಯವು 2 ಟೇಬಲ್‍ಗಳಲ್ಲಿ ನಡೆಯಲಿದೆ. ಇಟಿಪಿಬಿಎಸ್ ಮತ ಎಣಿಕೆಗೆ 1 ಟೇಬಲ್ ಇರಲಿದೆ. ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ 18 ಸುತ್ತಿನಲ್ಲಿ ಹಾಗೂ ಹನೂರು ವಿಧಾನಸಭಾ ಕ್ಷೇತ್ರದ ಮತ ಎಣಿಕೆ 19 ಸುತ್ತುಗಳಲ್ಲಿ ನಡೆಯಲಿದೆ. ಪ್ರತಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯು 14 ಟೇಬಲ್(ಮೇಜು)ಗಳಲ್ಲಿ ನಡೆಯಲಿದೆ. ಪ್ರತಿ ಟೇಬಲ್‍ಗೆ ತಲಾ ಓರ್ವ ಮತ ಎಣಿಕೆ ಮೇಲ್ವಿಚಾರಕರು, ಮತ ಎಣಿಕೆದಾರರು ಹಾಗೂ ಓರ್ವ ಮೈಕ್ರೋ ಅಬ್ಸರ್‍ವರ್ ಇರಲಿದ್ದಾರೆ.
ಮತ ಎಣಿಕೆ ಅಧಿಕಾರಿ ಸಿಬ್ಬಂದಿಗೆ ಈಗಾಗಲೇ ಎರಡು ಹಂತದ ತರಬೇತಿ ನೀಡಲಾಗಿದೆ. ಮತ ಎಣಿಕೆ ಕೇಂದ್ರದಲ್ಲಿ ವಿಧಾನಸಭಾ ಕ್ಷೇತ್ರವಾರು ಮತ ಎಣಿಕೆಗೆ ಅಗತ್ಯವಿರುವ ಮೇಜುಗಳು, ಪ್ರತಿ ಸುತ್ತಿನ ಮತ ಎಣಿಕೆ ಕಾರ್ಯ ಪೂರ್ಣಗೊಂಡ ಬಳಿಕ ಮತ ಎಣಿಕೆಯ ವಿವರ ನೀಡಲು ಅಗತ್ಯ ಕಂಪ್ಯೂಟರ್, ಇಂಟರ್‍ನೆಟ್ ಸೇರಿದಂತೆ ಸಂಪರ್ಕ ಸಾಧನಗಳ ವ್ಯವಸ್ಥೆ ಮಾಡಲಾಗಿದೆ. ಮಾಧ್ಯಮ ಕೇಂದ್ರ ಸಹ ತೆರೆಯಲಾಗಿದೆ.
ಮತ ಎಣಿಕೆ ಸ್ಥಳದಲ್ಲಿ ಅಭ್ಯರ್ಥಿಗಳು ಹಾಗೂ ಅವರ ಪರ ಏಜೆಂಟ್‍ರವರು ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆ ಕೇಂದ್ರ ಪ್ರವೇಶಿಸಲು ಈ ಎಲ್ಲರಿಗೂ ಪಾಸ್‍ಗಳನ್ನು ವಿತರಿಸಲಾಗಿದೆ. ಮತ ಎಣೀಕೆ ಕೇಂದ್ರದಲ್ಲಿ ಮತ ಎಣಿಕೆ ಅಧಿಕಾರಿ ಸಿಬ್ಬಂದಿಗೆ ಉಪಹಾರ ವ್ಯವಸ್ಥೆ ಮಾಡಲಾಗಿದೆ. ಅಭ್ಯರ್ಥಿಗಳು ಹಾಗೂ ಅವರ ಏಜೆಂಟರಿಗೆ ಮತ ಎಣಿಕೆ ಕೇಂದ್ರದಲ್ಲಿ ಹಣ ಪಾವತಿಸಿ ಉಪಹಾರ, ಕಾಫಿ, ಚಹಾ ಪಡೆಯಲು ಖಾಸಗಿ ತಾತ್ಕಾಲಿಕ ಉಪಹಾರ ಗೃಹ ತೆರೆಯಲಾಗಿದೆ.
ಮತ ಎಣಿಕೆ ಕೇಂದ್ರಕ್ಕೆ ಬರುವ ಅಧಿಕಾರಿ,ಸಿಬ್ಬಂದಿ, ಅಭ್ಯರ್ಥಿಗಳು, ಏಜೆಂಟರಿಗೆ ವಾಹನ ನಿಲುಗಡೆಗಾಗಿ ಸ್ಥಳಾವಕಾಶ ಮಾಡಲಾಗಿದೆ. ಬೆಳಗ್ಗೆ ಎಂಟು ಗಂಟೆಗೆ ಮತ ಎಣಿಕೆ ಕಾರ್ಯ ಪ್ರಾರಂಭಗೊಳ್ಳಲಿದ್ದು ಇದಕ್ಕೂ ಮೊದಲೇ ಎಲ್ಲರೂ ಹಾಜರಿರಬೇಕು. ಮತ ಎಣಿಕೆ ಪ್ರವೇಶಕ್ಕಾಗಿ ನೀಡಲಾಗಿರುವ ಪಾಸುಗಳನ್ನು ಹಾಜರುಪಡಿಸಬೇಕು.
ಮತದಾನವಾಗಿರುವ 04 ವಿಧಾನಸಭಾ ಕ್ಷೇತ್ರಗಳ ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳನ್ನು ಈಗಾಗಲೇ ಬಿಗಿ ಭದ್ರತೆಯಲ್ಲಿ ಎಂಜಿನಿಯರಿಂಗ್ ಕಾಲೇಜಿನ ಸ್ಟ್ರಾಂಗ್ ರೂಂನಲ್ಲಿ ಇಡಲಾಗಿದೆ. ಮತ ಎಣಿಕೆ ಕಾರ್ಯವು ಸುಸೂತ್ರವಾಗಿ ನಡೆಯಲು ಪೂರಕವಾಗಿರುವ ಎಲ್ಲಾ ಸಿದ್ಧತೆಗಳೂ ಪೂರ್ಣಗೊಂಡಿದೆ. ಕಾನೂನು ಸುವ್ಯವಸ್ಥೆ ಪಾಲನೆ ಹಾಗೂ ಮತ ಎಣಿಕೆ ಕೇಂದ್ರಕ್ಕೆ ಅಗತ್ಯ ಪೋಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಮತ ಎಣಿಕೆ ಪ್ರಕ್ರಿಯೆಯು ಶಾಂತಿಯುತವಾಗಿ ನಡೆಯಲು ಜಿಲ್ಲಾ ಜನತೆ ಅಗತ್ಯವಿರುವ ಎಲ್ಲಾ ಸಹಕಾರ ನೀಡುವಂತೆ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಮನವಿ ಮಾಡಿದ್ದಾರೆ.
ಮತ ಎಣಿಕೆ ಕೇಂದ್ರಕ್ಕೆ ಮೊಬೈಲ್ ನಿಷೇಧ : ವಿಧಾನಸಭಾ ಕ್ಷೇತ್ರಗಳ ಚುನಾವಣೆಯ ಮತ ಎಣಿಕೆ ಕಾರ್ಯವು ನಗರದ ಹೊರವಲಯದ ಬೇಡರಪುರದಲ್ಲಿರುವ ಎಂಜಿನಿಯರಿಂದ ಕಾಲೇಜಿನಲ್ಲಿ ನಡೆಲಿದ್ದು, ಮತ ಎಣಿಕೆ ಕೇಂದ್ರ ಪ್ರವೇಶಿಸುವುವವರಿಗೆ ಮೊಬೈಲ್ ತರುವುದನ್ನು ನಿಷೇಧಿಸಲಾಗಿದೆ.
ಮತ ಎಣಿಕೆ ಕೇಂದ್ರಕ್ಕೆ ಮೊಬೈಲ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣ, ಸಂಪರ್ಕ ಸಾಧನಗಳನ್ನು ತರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ತಿಳಿಸಿದ್ದಾರೆ.