ನಾಳೆ ಮತ್ತೇ ಸಿಎಂ ದೆಹಲಿ ಪಯಣ

ನವದೆಹಲಿ,ಜು.೨೩- ನಿನ್ನೆ ದೆಹಲಿಗೆ ತೆರಳಿ ಇಂದು ಬೆಳಿಗ್ಗೆಯಷ್ಟೇ ದೆಹಲಿಯಿಂದ ವಾಪಸ್ಸಾಗಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮತ್ತೆ ನಾಳೆಯಿಂದ ಮೂರು ದಿನಗಳ ದೆಹಲಿಯಾತ್ರೆ ಕೈಗೊಳ್ಳುವುದು ರಾಜಕೀಯ ಮಹತ್ವ ಪಡೆದುಕೊಂಡಿದೆ.
ಜು. ೨೫ ರಂದು ದೆಹಲಿಯ ಸಂಸತ್ ಭವನದ ಸೆಂಟ್ರಲ್‌ಹಾಲ್‌ನಲ್ಲಿ ನಡೆಯುವ ನೂತನ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅವರ ಪ್ರಮಾಣವಚನ ಕಾರ್ಯಕ್ರಮ, ಬಿಜೆಪಿಯ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಸೇರಿದಂತೆ ವಿವಿಧ ಪೂರ್ವ ನಿಗದಿತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ನಾಳೆ ಬೆಳಿಗ್ಗೆ ದೆಹಲಿಗೆ ತೆರಳುವರು.
ನಾಳೆ ದೆಹಲಿಗೆ ತೆರಳಲಿರುವ ಮುಖ್ಯಮಂತ್ರಿಗಳು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ನೇತೃತ್ವದಲ್ಲಿ ನಡೆಯಲಿರುವ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳ ಸಭೆಯಲ್ಲಿ ಪಾಲ್ಗೊಂಡು ನಂತರ ಕರ್ನಾಟಕ ಭವನದಲ್ಲಿ ವಾಸ್ತವ್ಯ ಹೂಡುವರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ನೂತನ ರಾಷ್ಟ್ರಪತಿಗಳ ಪ್ರಮಾಣವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ನಂತರ ಕೇಂದ್ರದ ವಿವಿಧ ಸಚಿವರುಗಳನ್ನು ಭೇಟಿ ಮಾಡುವರು. ಸೋಮವಾರವೂ ದೆಹಲಿಯಲ್ಲೇ ಉಳಿಯಲಿರುವ ಮುಖ್ಯಮಂತ್ರಿಗಳು, ಮಂಗಳವಾರ ರಾಜ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ ಕೇದ್ರದ ಕೆಲ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಿ ಮಂಗಳವಾರ ಸಂಜೆ ಬೆಂಗಳೂರಿಗೆ ವಾಪಸಾಗಲಿದ್ದಾರೆ.
ಸಂಪುಟ ವಿಸ್ತರಣೆ ಚರ್ಚೆ
ದೆಹಲಿಯಲ್ಲಿ ಮೂರು ದಿನ ಉಳಿಯಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಕ್ಷದ ವರಿಷ್ಠರೊಂದಿಗೆ ಸಂಪುಟ ವಿಸ್ತರಣೆ ನಿಗಮ ಮಂಡಳಿಗಳ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರುಗಳ ನೇಮಕಾತಿ ಬಗ್ಗೆ ಚರ್ಚಿಸಿ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿ ಮಾಡುವ ಸಾಧ್ಯತೆ ಇದೆ.
ಮುಖ್ಯಮಂತ್ರಿಗಳು ಪ್ರತಿಬಾರಿ ದೆಹಲಿ ಭೇಟಿ ಸಂದರ್ಭದಲ್ಲಿ ಸಂಪುಟ ವಿಸ್ತರಣೆಯ ಮಾತುಗಳು ಕೇಳಿ ಬರುತ್ತವಾದರೂ ಅವರ ದೆಹಲಿ ಭೇಟಿ ನಂತರ ಸಂಪುಟ ವಿಸ್ತರಣೆ ಚರ್ಚೆಗಳು ತಣ್ಣಗಾಗುತ್ತಿರುವುದು ಸಚಿವಾಕಾಂಕ್ಷಿಗಳಿಗೆ ನಿರಾಸೆ ಉಂಟು ಮಾಡಿದೆ.
ಈ ಬಾರಿಯಾದರೂ ಸಂಪುಟ ವಿಸ್ತರೆಗೆ ವರಿಷ್ಠರು ಅನುಮತಿ ಕೊಡುತ್ತಾರೆಯೇ ಎಂಬುದು ಸದ್ಯಕ್ಕಿರುವ ಕುತೂಹಲ.