ನಾಳೆ ಮತ್ತೆ ಲಸಿಕೆ ಆರಂಭ: ಮುಂಚೂಣಿ, ಆದ್ಯತಾ ಗುಂಪಿಗೆ ಪ್ರಾಶಸ್ತ್ಯ

ಬೆಂಗಳೂರು, ಮೇ ೨೧- ಲಸಿಕೆ ಕೊರತೆಯಿಂದ ತಾತ್ಕಾಲಿಕ ಸ್ಥಗಿತವಾಗಿದ್ದ ಅಭಿಯಾನ ಶನಿವಾರದಿಂದ ಮತ್ತೆ ಆರಂಭವಾಗಲಿದ್ದು, ಈ ವೇಳೆ 18-44 ವರ್ಷ ವಯೋಮಾನದವರಲ್ಲಿ ಮುಂಚೂಣಿ ಕಾರ್ಯಕರ್ತರು ಮತ್ತು ಆದ್ಯತಾ ಗುಂಪುಗಳನ್ನು ಗುರುತಿಸಿ ಮೇ 22ರಿಂದ ಕೋವಿಡ್ ಲಸಿಕೆ ನೀಡಬೇಕು ಎಂದು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ಮೇ 15ರಂದು ನಡೆದ ತಜ್ಞರ ಸಮಿತಿ ಸಭೆಯ ತೀರ್ಮಾನದಂತೆ ಮುಂಚೂಣಿ ಕಾರ್ಯಕರ್ತರು ಆದ್ಯತಾ ವಲಯದ 18ರಿಂದ 44 ವರ್ಷ ದವರಿಗೆ ಮೊದಲ ಆದ್ಯತೆಯಾಗಿ ಲಸಿಕೆ ನೀಡಬಹುದಾಗಿದೆ. ಆದ್ಯತಾ ವಲಯದ ಅರ್ಹರನ್ನು ಗುರುತಿಸಲು, ಪ್ರಮಾಣ ಪತ್ರ ನೀಡುವುದು, ಲಸಿಕಾ ಸ್ಥಳವನ್ನು ಗುರುತಿಸುವುದು ಸಹಿತ ಲಸಿಕೆಯ ಸಂಪೂರ್ಣ ಉಸ್ತುವಾರಿ ನಿರ್ವಹಿಸಲು ಜಿಲ್ಲಾ ಮಟ್ಟದಲ್ಲಿ ನೋಡಲ್‌ ಅಧಿಕಾರಿಗಳನ್ನು ನೇಮಿಸಿ ಅದರ ಸಂಪೂರ್ಣ ಉಸ್ತುವಾರಿ ನಿರ್ವಹಿಸಬೇಕು ಎಂದು ಆರೋಗ್ಯ ಇಲಾಖೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ. 

ಮುಂಚೂಣಿ ಗುಂಪಿನಲ್ಲಿ ಉಳ್ಳವರು:

ಕೋವಿಡ್-19ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನಡೆಸುವ ಚಿತಾಗಾರ, ಶವಾಗಾರ ಮತ್ತು ರುದ್ರಭೂಮಿ ಸಿಬ್ಬಂದಿಗಳು ಅಂಗವಿಕಲರು ಮತ್ತು ಅವರ ಒಬ್ಬ ಆರೈಕೆದಾರರು, ಸರ್ಕಾರಿ ಸಾರಿಗೆ ಸಿಬ್ಬಂದಿ, ಆಟೋ ಚಾಲಕರು, ಕ್ಯಾಬ್ ಚಾಲಕರು, ವಿದ್ಯುಚ್ಛಕ್ತಿ, ನೀರು ಪೂರೈಕೆ ಸಿಬ್ಬಂದಿ,, ಕೋವಿಡ್ ಕರ್ತವ್ಯಕ್ಕೆ ನಿಯೋಜಿಸಿರುವ ಶಿಕ್ಷಕರು, ಅಂಚೆ ಸಿಬ್ಬಂದಿ, ಬೀದಿಬದಿ ವ್ಯಾಪಾರಿಗಳು, ಕಚೇರಿಗಳ ಭದ್ರತಾ ಮತ್ತು ಹೌಸ್‌ಕಿಪಿಂಗ್‌ ಸಿಬಂದಿ, ನ್ಯಾಯಾಂಗ ಅಧಿಕಾರಿ ಗಳು, ವಯೋವೃದ್ಧರು ಮತ್ತು ರೋಗಿಗಳ ಆರೈಕೆದಾರರು, ಮಹಿಳಾ ಮಕ್ಕಳ ಇಲಾಖೆ, ಪೆಟ್ರೋಲ್‌ ಬಂಕ್‌, ಗ್ಯಾಸ್‌ ಸಿಬ್ಬಂದಿ, ಆಸ್ಪತ್ರೆಗಳಿಗೆ ಸರಕು ಸರಬರಾಜು ಮಾಡುವವರು, ಔಷಧ ಕಂಪೆನಿ ಸಿಬಂದಿ, ನಿರ್ಗತಿಕರು, ವೃದ್ಧಾ ಶ್ರಮ ವಾಸಿಗಳು, ಎಪಿಎಂಸಿ ಕೆಲಸಗಾರರು. ಮಾನಸಿಕ ಆರೋಗ್ಯ ಸಮಸ್ಯೆ ಉಳ್ಳವರು.

ಆದ್ಯತಾ ಗುಂಪು: ಕಟ್ಟಡ ನಿರ್ಮಾಣ ಕಾರ್ಮಿಕರು, ಟೆಲಿಕಾಂ ಇಂಟರ್‌ನೆಟ್‌ ಸೇವಾದಾರರು, ವಿಮಾನಯಾನ ಸಂಸ್ಥೆ ಸಿಬ್ಬಂದಿ, ಪೆಟ್ರೋಲ್ ಬಂಕ್ ನೌಕರರು, ಬ್ಯಾಂಕ್‌ ಸಿಬ್ಬಂದಿ, ವಕೀಲರು, ಚಿತ್ರರಂಗ ಸಿಬ್ಬಂದಿ, ಹೊಟೇಲ್‌ ಸಿಬ್ಬಂದಿ, ಕೆಎಂಎಫ್ ಸಿಬಂದಿ, ಗಾರ್ಮೆಂಟ್ಸ್‌ ನೌಕರರು, ರೈಲ್ವೇ ನೌಕರರು, ಅರಣ್ಯ ಇಲಾಖೆ ಸಿಬ್ಬಂದಿ, ರಾಜ್ಯ ಮತ್ತು ರಾಷ್ಟ್ರವನ್ನು ಪ್ರತಿನಿಧಿಸುವ ಆಟಗಾರರು, ಗೇಲ್‌, ಎಚ್‌ಎಎಲ್‌, ಎಚ್‌ಎಎಲ್‌ ಸಿಬ್ಬಂದಿ ಒಳಗೊಳ್ಳುತ್ತಾರೆ.