ನಾಳೆ ಮಂಗಳೂರಿಗೆ ಮೋದಿ

ಬೆಂಗಳೂರು, ಸೆ. ೧- ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆಗಾಗಿ ನಾಳೆ ಮಂಗಳೂರಿಗೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿಯವರು ನಾಳೆ ಪಕ್ಷದ ಪ್ರಮುಖ ಮುಖಂಡರೊಂದಿಗೆ ಸಭೆ ನಡೆಸಿ ಚುನಾವಣಾ ಸಿದ್ದತೆ, ತಯಾರಿಗಳ ಬಗ್ಗೆ ಚರ್ಚೆ ನಡೆಸುವರು.
ಸರ್ಕಾರದ ಕಾರ್ಯಕ್ರಮಗಳಲ್ಲಿ ಭಾಗಿಯಾದ ನಂತರ ಪ್ರಧಾನಿಗಳು ಮಂಗಳೂರಿನಲ್ಲೆ ಪಕ್ಷದ ಮುಖಂಡರ ಜತೆ ಅನೌಪಚಾರಿಕವಾಗಿ ಚುನಾವಣಾ ತಯಾರಿಗಳ ಬಗ್ಗೆ ಚರ್ಚೆ ನಡೆಸುವರು ಎಂದು ಪಕ್ಷದ ಮೂಲಗಳು ಹೇಳಿವೆ.
ಸಾಮಾನ್ಯವಾಗಿ ಪ್ರಧಾನಿಯವರು ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಬಂದ ಸಂದರ್ಭದಲ್ಲಿ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು ಕಡಿಮೆ. ಆದರೆ ಈ ಬಾರಿ ಪ್ರಧಾನಿ ನರೇಂದ್ರ ಮೋದಿಯವರು ಪಕ್ಷದ ಮುಖಂಡರ ಸಭೆ ನಡೆಸುತ್ತಿರುವುದು ವಿಶೇಷ.
ಮುಂದಿನ ವಿಧಾನಸಭಾ ಚುನಾವಣೆಯ ಗೆಲುವಿನ ಮೇಲೆ ಕಣ್ಣಿಟ್ಟು ಪ್ರಧಾನಿಗಳು ಮುಖಂಡರ ಜತೆ ಸಭೆ ನಡೆಸುತ್ತಿದ್ದು, ವಿಧಾನಸಭಾ ಚುನಾವಣೆಯಲ್ಲಿ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸುವ ಜತೆಗೆ ಪಕ್ಷದ ಸಂಘಟನೆಯನ್ನು ಬಲಪಡಿಸುವ ಜತೆಗೆ ಸರ್ಕಾರದ ಆಡಳಿತವನ್ನು ಚುರುಕುಗೊಳಿಸಿ, ವರ್ಚಸ್ಸನ್ನು ವೃದ್ಧಿಗೊಳಿಸುವ ಬಗ್ಗೆ ಮುಖಂಡರುಗಳಿಗೆ ಸಲಹೆ-ಸೂಚನೆ ನೀಡುವರು ಎನ್ನಲಾಗಿದೆ.
ಪ್ರಧಾನಿ ಮೋದಿಯವರು ನಾಳೆ ಮಂಗಳೂರಿಗೆ ಆಗಮಿಸಿ ಸರ್ಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಧ್ಯಾಹ್ನ ೩.೩೦ಕ್ಕೆ ಮುಖಂಡರ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲು ಸೇರಿದಂತೆ ಕೆಲವೇ ಕೆಲವು ಪ್ರಮುಖ ಮುಖಂಡರುಗಳು ಭಾಗಿಯಾಗುವರು.
ಅದ್ದೂರಿ ಸ್ವಾಗತಕ್ಕೆ ಸಿದ್ದತೆ
ಪ್ರಧಾನಿ ನರೇಂದ್ರ ಮೋದಿಯವರಿಗೆ ಮಂಗಳೂರಿನಲ್ಲಿ ಅದ್ದೂರಿ ಸ್ವಾಗತ ನೀಡಲು ಸಿದ್ದತೆಗಳು ಭರದಿಂದ ನಡೆದಿದ್ದು, ಇಂಧನ ಸಚಿವ ವಿ. ಸುನೀಲ್‌ಕುಮಾರ್ ನೇತೃತ್ವದಲ್ಲಿ ಎಲ್ಲ ಸಿದ್ದತೆಗಳು ನಡೆದಿವೆ.
ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಬಳಿಕ ಪ್ರಧಾನಿಗಳು ಮಂಗಳೂರಿನ ಗೋಲ್ಡ್ ಬೀಚ್ ಮೈದಾನದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು, ಈ ಸಮಾವೇಶಕ್ಕೆ ಕನಿಷ್ಠ ೨ ಲಕ್ಷ ಜನರನ್ನು ಸೇರಿಸಲು ಬಿಜೆಪಿ ಗಮನ ಹರಿಸಿದ್ದು, ಅದರಂತೆ ಸಚಿವ ವಿ. ಸುನೀಲ್‌ಕುಮಾರ್ ಈ ಕಾರ್ಯಕ್ರಮದ ಮೇಲುಸ್ತುವಾರಿ ವಹಿಸಿದ್ದು, ಪಕ್ಷದ ಅಧ್ಯಕ್ಷ ಹಾಗೂ ಸಂಸದ ನಳೀನ್‌ಕುಮಾರ್ ಕಟೀಲ್ ಅವರ ಜತೆಗೂಡಿ ಪ್ರಧಾನಿಗಳ ಸಮಾವೇಶವನ್ನು ನಭುತೋ ನಭವಿಷ್ಯತೋ ಎಂಬಂತೆ ಯಶಸ್ವಿಗೊಳಿಸಲು ಟೊಂಕಕಟ್ಟಿ ಶ್ರಮಿಸುತ್ತಿದ್ದಾರೆ.
ಈ ಸಮಾವೇಶಕ್ಕೆ ಬರುವ ಜನರಿಗಾಗಿ ಮಂಗಳೂರಿನ ವಿವಿಧೆಡೆಯಿಂದ ೨ ಸಾವಿರ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ಕಾರ್ಯಕ್ರಮದ ಸ್ಥಳದಲ್ಲಿ ಕಾರ್ಯಕರ್ತರಿಗಾಗಿ ಕುಡಿಯುವ ನೀರು, ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದ್ದು, ಕರಾವಳಿಯಲ್ಲಿ ಈ ಹಿಂದೆ ಯಾವುದೇ ಸಮಾವೇಶಕ್ಕೆ ಸೇರದಷ್ಟು ಜನರನ್ನು ಸೇರಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಕರಾವಳಿ ಬಿಜೆಪಿಯ ಭದ್ರಕೋಟೆಯಾಗಿರುವುದರಿಂದ ಸ್ವಯಂ ಪ್ರೇರಣೆಯಿಂದ ಸಾವಿರಾರು ಜನ ಸಮಾವೇಶಕ್ಕೆ ಆಗಮಿಸುವರು ಎಂದು ಹೇಳಲಾಗಿದ್ದು, ಸಮಾವೇಶವನ್ನು ಅಚ್ಚುಕಟ್ಟಾಗಿ ನಡೆಸಲು ಎಲ್ಲಾ ವ್ಯವಸ್ಥೆಗಳು ನಡೆದಿವೆ.
ಪರಶುರಾಮ ಪುತ್ಥಳಿ
ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರಿಗೆ ತುಳುನಾಡು ನಿರ್ಮಾತೃ ಪರಶುರಾಮನ ಭವ್ಯ ಪುತ್ಥಳಿಯನ್ನು ಉಡುಗೊರೆ ರೂಪದಲ್ಲಿ ನೀಡಲು ನಿರ್ಧರಿಸಲಾಗಿದ್ದು, ಈ ಪುತ್ಥಳಿಯನ್ನು ವಿಶೇಷವಾಗಿ ಸಿದ್ದಪಡಿಸಲಾಗುತ್ತಿದೆ.
ಕರಾವಳಿಯ ಇತಿಹಾಸದಲ್ಲೇ ನಭುತೋ ನಭವಿಷ್ಯತೋ ಎಂಬಂತೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೇಸರಿ ಪಡೆ ಶ್ರಮಿಸುತ್ತಿದೆ.