ನಾಳೆ ಭಾರತ-ಆಸೀಸ್ ಸೆಣಸಾಟ

ಅಹಮದಾಬಾದ್, ಮಾ.೮-ಗವಾಸ್ಕರ್-ಬಾರ್ಡರ್ ಕ್ರಿಕೆಟ್ ಸರಣಿ ನಿರ್ಣಾಯಕ ಹಾಗೂ ನಾಲ್ಕನೇ ಪಂದ್ಯ ನಾಳೆ ನಡೆಯಲಿದೆ.ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯ ಭಾರತ ಮತ್ತು ಆಸ್ಟ್ರೇಲಿಯಾಕ್ಕೆ ಸವಾಲಾಗಿ ಪರಿಣಮಿಸಿದೆ.
ಸರಣಿಯಲ್ಲಿ ಭಾರತ ೨-೧ಯಿಂದ ಮುನ್ನಡೆ ಸಾಧಿಸಿದೆ. ಸೋಲಿನ ದವಡೆಗೆ ಸಿಲುಕಿದ್ದ ಆಸೀಸ್ ಮೂರನೇ ಪಂದ್ಯ ಗೆದ್ದು ಟೀಂ ಇಂಡಿಯಾಕ್ಕೆ ತಿರುಗೇಟು ನೀಡಿದೆ. ಹೀಗಾಗಿ ನಾಳಿನ ಪಂದ್ಯವನ್ನು ಗೆದ್ದು ಸರಣಿ ಸಮ ಮಾಡಿಕೊಳ್ಳುವ ಉತ್ಸಾಹದಲ್ಲಿದೆ.
ವಿಶ್ವಕಪ್ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಫೈನಲ್ ತಲುಪಲು ಭಾರತಕ್ಕೆ ಗೆಲುವು ಅನಿವಾರ್ಯವಾಗಿದೆ. ಒಂದು ವೇಳೆ ಭಾರತ ಸೋತರೆ ಶ್ರೀಲಂಕಾ ನ್ಯೂಜಿಲೆಂಡ್ ಸರಣಿಯ ಫಲಿತಾಂಶವನ್ನು ಕಾಯಬೇಕಾಗುತ್ತದೆ.
ಕ್ರೀಡಾಂಗದಲ್ಲಿ ಎರಡು ಪಿಚ್ ಗಳನ್ನ ಸಿದ್ಧಪಡಿಸಲಾಗಿದೆ. ವೇಗದ ಬೌಲಿಂಗ್ ಜತೆಗೆ ಬ್ಯಾಟಿಂಗ್ ಗೆ ಸಹಕಾರಿಯಾಗಲಿದೆ. ಮತ್ತೊಂದು ಪಿಚ್ ನಲ್ಲಿ ಸ್ಪಿನ್ ಬೌಲಿಂಗ್‌ಗೆ ನೆರವಾಗುವ ರೀತಿಯಲ್ಲಿ ಸಿದ್ಧಪಡಿಸಲಾಗಿದೆ.
ಈ ಮಹತ್ವದ ಪಂದ್ಯದಲ್ಲಿ ೧೧ ಮಂದಿ ಆಟಗಾರರಲ್ಲಿ ಕೆಲವೊಂದು ಬದಲಾವಣೆ ಮಾಡುವು ನಿಚ್ಚಳವಾಗಿದೆ. ಕಳೆದ ಪಂದ್ಯದಿಂದ ಹೊರಗುಳಿದಿದ್ದ ಬೌಲರ್ ಮೊಹ್ಮದ್ ಶಮಿ ನಾಳಿನ ಪಂದ್ಯದಲ್ಲಿ ಆಡಲಿದ್ದಾರೆ. ಆದಕಾರಣ ಒಬ್ಬರು ಬದಲಾಗಲಿದ್ದಾರೆ.
ವಿಕೆಟ್ ಕೀಪರ್ ಕೆ.ಎಸ್. ಭರತ್ ಅವರನ್ನು ತಂಡದಿಂದ ಕೈಬಿಡುವುದು ದಟ್ಟವಾಗಿದೆ. ಅವರಾಡಿದ ಮೂರೂ ಪಂದ್ಯಗಳಲ್ಲಿ ಬ್ಯಾಟಿಂಗ್‌ನಲ್ಲಿ ಎಡವಿದ್ದಾರೆ. ಹೀಗಾಗಿ ಇಶಾನ್ ಕಿಶನ್ ಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಾಗಿದೆ.
ಈ ಸರಣಿಗೆ ಕಿಶನ್ ಆಯ್ಕೆಯಾದರೂ ಒಂದು ಪಂದ್ಯದಲ್ಲಿ ಅವಕಾಶ ಸಿಕ್ಕಿಲ್ಲ. ಹನ್ನೊಂದು ಮಂದಿ ಆಟಗಾರರ ಪಟ್ಟೆಯಲ್ಲಿ ಕಿಶನ್ ಗೆ ಅವಕಾಶ ದೊರೆಯುವ ಸಾಧ್ಯತೆ ಇದೆ.
ಮೂರನೇ ಪಂದ್ಯ ಗೆದ್ದು ಆತ್ಮಸ್ಥೈರ್ಯದಿಂದ ಬೀಗುತ್ತಿರುವ ಆಸೀಸ್ ತಂಡದಲ್ಲಿ ಯಾವುದೇ ಆಟಗಾರರ ಬದಲಾವಣೆ ಮಾಡದಿರಲು ಮುಂದಾಗಿದೆ, ಒಟ್ಟಾರೆ ನಾಳಿನ ಈ ಪಂದ್ಯ ಅಪಾರ ಕುತೂಹಲ ಕೆರಳಿಸಿದೆ.