ನಾಳೆ ಬೊಮ್ಮಾಯಿ ಸರ್ಕಾರದ ಸಾಧನಾ ಸಮಾವೇಶ

ಬೆಂಗಳೂರು,ಜು.೨೭- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ನಾಳೆ ದೊಡ್ಡಬಳ್ಳಾಪುರದಲ್ಲಿ ಸರ್ಕಾರದ ಸಾಧನೆಯ ಜನೋತ್ಸವ ಮೂಲಕ ಶಕ್ತಿ ಪ್ರದರ್ಶನಕ್ಕೆ ಬಿಜೆಪಿ ಮುಂದಾಗಿದೆ.
ನಾಳಿನ ಜನೋತ್ಸವದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಹೊಸ ಜನಪರ ಕಾರ್ಯಕ್ರಮಗಳ ಘೋಷಣೆ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯ ರಣಕಹಳೆಯನ್ನು ಮೊಳಗಿಸಲಿದೆ.ದೊಡ್ಡಬಳ್ಳಾಪುರದಲ್ಲಿ ನಡೆಯಲಿರುವ ಜನೋತ್ಸವಕ್ಕೆ ಲಕ್ಷಾಂತರ ಜನರನ್ನು ಸೇರಿಸುವ ಮೂಲಕ ತನ್ನ ವಿರಾಟ್ ಶಕ್ತಿ ಪ್ರದರ್ಶನಕ್ಕೂ ಬಿಜೆಪಿ ತಯಾರಿ ನಡೆಸಿದೆ. ಹಾಗೆಯೇ ಪ್ರತಿ ಜಿಲ್ಲೆಗಳಲ್ಲೂ ಜನೋತ್ಸವ ಆಯೋಜಿಸುವ ಮೂಲಕ ಈಗಿನಿಂದಲೇ ವಿಧಾನಸಭಾ ಚುನಾವಣೆಯತ್ತ ಬಿಜೆಪಿ ಸಂಪೂರ್ಣ ಗಮನ ಕೇಂದ್ರೀಕರಿಸಿದೆ.ದೊಡ್ಡಬಳ್ಳಾಪುರದ ಹೊರ ವಲಯದ ರಘುನಾಥಪುರದ ಬಳಿ ವಿಶಾಲ ಸ್ಥಳದಲ್ಲಿ ಬೃಹತ್ ವೇದಿಕೆಯನ್ನು ಜನೋತ್ಸವಕ್ಕಾಗಿ ಸಿದ್ಧಪಡಿಸಲಾಗಿದ್ದು, ೧ ಲಕ್ಷ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ.
ಹೊಸ ಕಾರ್ಯಕ್ರಮ ಘೋಷಣೆ
ನಾಳಿನ ಜನೋತ್ಸವದಲ್ಲಿ ಹೊಸ ಕಾರ್ಯಕ್ರಮಗಳ ಘೋಷಣೆಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಿದ್ಧತೆ ನಡೆಸಿದ್ದು, ಮುಂದಿನ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟು, ಸಾವಿರಾರು ಕೋಟಿ ರೂ. ಮೊತ್ತದ ಹೊಸ ಜನಪರ ಕಾರ್ಯಕ್ರಮಗಳನ್ನು ಘೋಷಿಸಲಿದ್ದಾರೆ. ಈ ಹೊಸ ಕಾರ್ಯಕ್ರಮಗಳು ಮುಂದಿನ ಮಾರ್ಚ್ ಅಂತ್ಯದ ವೇಳೆ ಪೂರ್ಣಗೊಳಿಸುವ ಗುರಿಯನ್ನು ಹಾಕಿಕೊಂಡಿದ್ದು, ಮುಂದಿನ ವಿಧಾನಸಭಾ ಚುನಾವಣೆಯನ್ನು ಸರ್ಕಾರದ ಸಾಧನೆಗಳ ಮೇಲೆ ಎದುರಿಸಲು ಸರ್ವ ತಯಾರಿ ನಡೆದಿದೆ.
ನಾಳೆ ಜನೋತ್ಸವದಲ್ಲಿ ಮುಖ್ಯಮಂತ್ರಿಗಳು ಎಲ್ಲ ವರ್ಗಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಹೊಸ ಕಾರ್ಯಕ್ರಮವನ್ನು ಘೋಷಿಸಲಿದ್ದಾರೆ ಎಂದು ಹೇಳಲಾಗಿದೆ.
ಸಾಧನೆಯ ಕೈ ಪಿಡಿ
ನಾಳಿನ ಜನೋತ್ಸವದಲ್ಲಿ ಬಿಜೆಪಿ ಸರ್ಕಾರದ ಮೂರು ವರ್ಷಗಳ ಸಾಧನೆ ಹಾಗೂ ಮುಂದಿನ ೧ ವರ್ಷದ ದಿಕ್ಸೂಚಿಯನ್ನೊಳಗೊಂಡ ಸರ್ವರ ವಿಕಾಸಕ್ಕೆ ಸಮೃದ್ಧ ಕರ್ನಾಟಕ ಎಂಬ ಕೈ ಪಿಡಿಯನ್ನು ಬಿಡುಗಡೆ ಮಾಡಲಾಗುತ್ತದೆ.ನಾಳಿನ ಜನೋತ್ಸವ ಕಾರ್ಯಕ್ರಮದಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಪಾಲ್ಗೊಳ್ಳಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದಿಯಾಗಿ ಎಲ್ಲ ಸಚಿವರು, ಶಾಸಕರು, ಸಂಸದರು ಜನೋತ್ಸವದಲ್ಲಿ ಭಾಗಿಯಾಗುವರು.