ನಾಳೆ ಬಿಸಿಸಿಐ ವಿಶೇಷ ಸಭೆ: ಐಪಿಎಲ್ ಹಣೆಬರಹ ನಿರ್ಧಾರ

ನವದೆಹಲಿ, ಮೇ.28- ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ವಿಶೇಷ ಸಾಮಾನ್ಯ ಸಭೆ ನಾಳೆ ನಡೆಯಲಿದೆ. ಕೊರೊನಾ ಸೋಂಕಿನಿಂಸ ಅರ್ಧಕ್ಕೆ ಮೊಟಕುಗೊಂಡಿರುವ ಐಪಿಎಲ್ ಟೂರ್ನಿಯ 14 ನೇ ಆವೃತ್ತಿಯನ್ನು ಯುಎಇಯಲ್ಲಿ ನಡೆಸುವ ಕುರಿತು ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ಸೆ.15ರಿಂದ ಅ.15ರ ಸಂದರ್ಭದಲ್ಲಿ ದೊರೆಯುವ ಅವಧಿಯಲ್ಲಿ ಬಾಕಿ ಉಳಿದಿರುವ 31 ಪಂದ್ಯಗಳನ್ನು ನಡೆಸಲು ಬಿಸಿಸಿಐ ಗಂಭೀರ ಚಿಂತನೆ ನಡೆಸಿದೆ ಎಂದು ಮೂಲಗಳು ಹೇಳಿವೆ.
ನಾಳೆ ನಡೆಯಲಿರುವ ಈ ಸಭೆಯಲ್ಲಿ ಟಿ-20 ವಿಶ್ವಕಪ್ ಆಯೋಜನೆ ಹಾಗೂ ಕಳಡದ ವರ್ಷ ರದ್ದುಗೊಂಡ ರಣಜಿ ಟೂರ್ನಿಯಲ್ಲಿ ಆಟಗಾರರಿಗೆ ಪರಿಹಾರ ನೀಡುವ ಕುರಿತು ಸಮಾಲೀಚನೆ ನಡೆಯಲಿದೆ.
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನೇತೃತ್ವದಲ್ಲಿ ವರ್ಚುವಲ್ ಸಭೆಯಲ್ಲಿ ವಿದೇಶಿ ಆಟಗಾರರ ನಿರ್ವಹಣೆ, ಬಯೋಬಬಲ್ ಸೇರುದಂತೆ ಇನ್ನಿತರ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.
ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಲಿರುವುದರಿಂದ ಇಂಗ್ಲೆಂಡ್ ಆಟಗಾರರು ಐಪಿಎಲ್‌ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಈಗಾಗಲೇ ತಿಳಿಸಿದೆ. ಜೋಸ್ ಬಟ್ಲರ್‌, ಬೆನ್ ಸ್ಟೋಕ್ಸ್‌, ಜೊಫ್ರಾ ಆರ್ಚರ್‌, ಜಾನಿ ಬೆಸ್ಟೊ, ಸ್ಯಾಮ್ ಕರನ್‌, ಏಯಾನ್ ಮಾರ್ಗನ್, ಮೋಯಿನ್ ಅಲಿ ಮುಂತಾದವರ ಬದಲಿಗೆ ಆಟಗಾರರನ್ನು ಹೊಂದಿಸಿಕೊಳ್ಳುವುದು ಸವಾಲಾಗಲಿದೆ.