ನಾಳೆ ಬಿಬಿಎಂಪಿ ಬಜೆಟ್, ನಿರೀಕ್ಷೆ ಅಪಾರ

ಬೆಂಗಳೂರು,ಮಾ.೨೬- ರಾಜಧಾನಿ ಬೆಂಗಳೂರಿನ ಆರ್ಥಿಕ ಕಲ್ಯಾಣಕ್ಕೆ ಹೆಚ್ಚಿನ ಒತ್ತು ನೀಡುವ ೨೦೨೧-೨೨ನೇ ಸಾಲಿನ ಬಿಬಿಎಂಪಿ(ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಬಜೆಟ್ ಮಂಡಿಸಲು ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ನಾಳೆ(೨೭) ಪಾಲಿಕೆ ಆಡಳಿತಾಧಿಕಾರಿ ಗೌರವ್ ಗುಪ್ತ ನಾಳೆ ಬಜೆಟ್ ಮಂಡನೆ ಮಾಡಲಿದ್ದಾರೆ.
ನಗರದ ಮಲ್ಲೇಶ್ವರಂನಲ್ಲಿರುವ ಐ.ಪಿ.ಪಿ ತರಬೇತಿ ಕೇಂದ್ರದಲ್ಲಿ ೧೦ ಗಂಟೆಗೆ ಗೌರವ್ ಗುಪ್ತಾ ಅವರ ಅಧ್ಯಕ್ಷತೆಯಲ್ಲಿ ಬಜೆಟ್ ಮಂಡನೆಯಾಗಲಿದ್ದು, ಈ ಬಾರಿಯ ಬಜೆಟ್ ನಲ್ಲಿ ಕೋವಿಡ್ ಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.
ಬಿಬಿಎಂಪಿಯ ೨೦೨೧?೨೧ನೇ ಆರ್ಥಿಕ ವರ್ಷ ಆರಂಭವಾಗಲು ಒಂದು ವಾರ ಮಾತ್ರ ಬಾಕಿ ಉಳಿದಿದೆ. ಹಾಗಾಗಿ, ತ್ವರಿತವಾಗಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದೆ. ಇನ್ನು,ಪಾಲಿಕೆ ಹಣಕಾಸು ವಿಭಾಗದ ಆಯುಕ್ತ ತುಳಸಿ ಮದ್ದಿನೇನಿ ಬಜೆಟ್ ಸಿದ್ಧತೆ ನಡೆಸಿದ್ದಾರೆ.
ಬಜೆಟ್ ಎಷ್ಟು:ಆಸ್ತಿ ತೆರಿಗೆ, ಜಾಹೀರಾತು, ಸ್ವಂತ ಆಸ್ತಿಗಳಿಂದ ಬರುವ ವರಮಾನ ಹಾಗೂ ಇತರ ಮೂಲಗಳಿಂದ ಬಿಬಿಎಂಪಿಯು ಪ್ರತಿ ವರ್ಷ ಹೆಚ್ಚೆಂದರೆ ೩೫೦೦ ಕೋಟಿಗಳಷ್ಟು ಆದಾಯವನ್ನು ಗಳಿಸುತ್ತಿದೆ. ರಾಜ್ಯ ಸರ್ಕಾರದ ೨೦೨೧?೨೨ನೇ ಸಾಲಿನ ಬಜೆಟ್‌ನಲ್ಲಿ ಬಿಬಿಎಂಪಿಗೆ ೩,೩೦೦ ಕೋಟಿ ಅನುದಾನ ಮೀಸಲಿಟ್ಟಿದೆ.
ಇನ್ನು, ಕೇಂದ್ರ ಸರ್ಕಾರದ ಬರುವ ಅನುದಾನವೂ ಸೇರಿ ಎರಡೂ ಸರ್ಕಾರಗಳಿಂದ ಒಟ್ಟು ೪೦೦೦ ಕೋಟಿಗಳಷ್ಟು ಅನುದಾನ ನಿರೀಕ್ಷಿಸಲಾಗಿದೆ. ಹಾಗಾಗಿ, ಈ ಬಾರಿ ೭,೫೦೦ ಕೋಟಿ ಗಾತ್ರದ ಬಜೆಟ್ ಮಂಡನೆಗೆ ಸಿದ್ಧತೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಅಲ್ಲದೆ, ಇದೀಗ ಪ್ರಸ್ತುತದಲ್ಲಿ ೨೦೨೦ರ ಬಿಬಿಎಂಪಿ ಕಾಯ್ದೆಯ ಅನ್ವಯ ಆಡಳಿತ ನಡೆಯುತ್ತಿದೆ. ಪಾಲಿಕೆ ಆರ್ಥಿಕ ಸ್ಥಿತಿ ಆಧರಿಸಿ ೭ ಸಾವಿರ ಕೋಟಿ ಅಂದಾಜಿನ ಬಜೆಟ್ ಗಾತ್ರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡರು.
ಆಡಳಿತಾಧಿಕಾರಿ ವಿಶೇಷ: ಮತ್ತೊಂದು ವಿಶೇಷವೆಂದರೆ ಬಿಬಿಎಂಪಿಯಲ್ಲಿ ಆಡಳಿತಾಧಿಕಾರಿ ಯಾಗಿದ್ದ ವಿಜಯ ಬಾಸ್ಕರ್ ಅವರು ೨೦೧೫-೧೬ ನೇ ಸಾಲಿನಲ್ಲಿ ಬಜೆಟ್ ಮಂಡಿಸಿದರು.
ಅಂದು ೫,೪೧೧ ಕೋಟಿ ರೂಪಾಯಿ ವೆಚ್ಚದ ಬಜೆಟ್ ಮಂಡನೆ ಮಾಡಲಾಗಿತ್ತು. ಬಿಬಿಎಂಪಿಯಲ್ಲಿ ಚುನಾಯಿತ ಕೌನ್ಸಿಲ್ ಅಸ್ತಿತ್ವದಲ್ಲಿಲ್ಲದ ಕಾರಣದಿಂದಾಗಿ ಬಜೆಟ್ ಸಿದ್ಧತೆಯ ಹೊಣೆ ಆಡಳಿತಾಧಿಕಾರಿಯವರದ್ದಾಗಿದೆ. ಮೇಯರ್ ಹಾಗೂ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಅಧಿಕಾರಿಗಳೆಲ್ಲವೂ ಆಡಳಿತಾಧಿಕಾರಿಯೇ ಹೊಂದಿರುತ್ತಾರೆ.
ಇನ್ನು, ಮಾರ್ಷಲ್‌ಗಳ ಮೂಲಕ ಬಿಬಿಎಂಪಿ ಸಮೀಕ್ಷೆಯೊಂದನ್ನು ಮಾಡಿಸಿದೆ. ಇದರ ಪ್ರಕಾರ ನಗರಕ್ಕೆ ೨೩೬ ಸಾರ್ವಜನಿಕ ಶೌಚಾಲಯಗಳ ಅಗತ್ಯವಿದೆ. ೫೦೦೦ ಪ್ರದೇಶದಲ್ಲಿ ರಸ್ತೆಗುಂಡಿಗಳನ್ನು ಮುಚ್ಚಬೇಕಿದೆ. ಜತೆಗೆ ಬಿಬಿಎಂಪಿ ಕೈಗೊಂಡಿರುವ ಅನೇಕ ಕಾಮಗಾರಿಗಳಿಗೆ ಅನುದಾನವನ್ನು ನೀಡಬೇಕಿದೆ. ಇದರ ನಡುವೆ ಬಜೆಟ್‌ನಲ್ಲಿ ನಗರದ ಅಭಿವೃದ್ಧಿಗೆ ಹೊಸ ಯೋಜನೆ ಘೋಷಣೆಯಾಗಲಿದೆಯೇ ಎಂದು ಕಾದು ನೋಡಬೇಕಿದೆ.

ಬಜೆಟ್ ಗಾತ್ರ ೭೫೦೦ ಕೋಟಿ?

ಈ ಬಾರಿ ವಾಸ್ತವ ಬಜೆಟ್ ಸಿದ್ಧಪಡಿಸಲಾಗಿದೆ. ವರಮಾನ ನಿರೀಕ್ಷಿಸುವಾಗಲೂ ವಾಸ್ತವದ ಅಂಕಿ ಅಂಶಗಳನ್ನು ಆಧರಿಸಿಯೇ ಲೆಕ್ಕಾಚಾರ ಹಾಕಲಾಗಿದೆ. ಹಾಗಾಗಿ ಬಜೆಟ್ ಗಾತ್ರ ೭೫೦೦ ಕೋಟಿ ಆಸುಪಾಸಿನಲ್ಲಿ ಇರಲಿದೆ ಎನ್ನುತ್ತವೆ ಬಿಬಿಎಂಪಿ ಮೂಲಗಳು.
ಇಂದಿರಾ ಕ್ಯಾಂಟೀನ್ ಜೀವ?

ಈ ಬಾರಿಯೂ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆಗೆ ಪ್ರತ್ಯೇಕ ಅನುದಾನ ಕಾಯ್ದಿರಿಸಿಲ್ಲ. ಹಾಗಾಗಿ ಬಿಬಿಎಂಪಿ ಬಜೆಟ್‌ನಲ್ಲೇ ಇದಕ್ಕೆ ಅನುದಾನ ಕಾಯ್ದಿರಿಸಲಾಗುತ್ತದೆ. ಅಲ್ಲದೆ,ಬಿಬಿಎಂಪಿ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆಗೆ ಪ್ರತಿವರ್ಷ ೭೦ ಕೋಟಿಯಿಂದ ೭೫ ಕೋಟಿಗಳಷ್ಟು ವೆಚ್ಚವಾಗುತ್ತದೆ ಪಾಲಿಕೆ ಮೂಲಗಳು ಹೇಳಿವೆ.